ಕುರುಕ್ಷೇತ್ರದ ರಣಧಾರಿಣಿಯಲಿ ಹದಿನೆಂಟನೇ ದಿನ ತನ್ನವರೆಲ್ಲರನ್ನೂ ಕಳೆದುಕೊಂಡ ಕೌರವ, ಭೀಮ ತನ್ನ ಅಟ್ಟಹಾಸದ ಘರ್ಜನೆಯೊಂದಿಗೆ ಬೆನ್ನತ್ತಿದಾಗ ಒಮ್ಮಿಂದೊಮ್ಮೆಗೇ ಕೌರವ ರಣಭೂಮಿಯಿಂದ ಕಣ್ಮರೆಯಾಗುತ್ತಾನೆ. ವ್ಯಾಸರ ಅನುಗ್ರಹದಿಂದ ಕುರುಕ್ಷೇತ್ರದ ಯುದ್ಧ ವಿಚಾರಗಳನ್ನು ತನ್ನ ಅಂಗೈಯಲ್ಲೇ ನೋಡುತ್ತಿದ್ದ ಸಂಜಯ ದಿನಂಪ್ರತಿ ಯುದ್ಧದ ಸಂಪೂರ್ಣ ವಿಚಾರಗಳನ್ನು ದೃತರಾಷ್ಟ್ರನಿಗೆ ಹೇಳುತ್ತಿರಬೇಕಾದರೆ , ಕೌರವ ಕುರುಕ್ಷೇತ್ರದಿಂದ ಕಣ್ಮರೆಯಾದುದನ್ನು ಕೇಳಿ ಮಮ್ಮಲ ಮರುಗಿದ ದೃತರಾಷ್ಟ್ರನ ಅಪೇಕ್ಷೆಯಂತೆ ಕೌರವನನ್ನು ಹುಡುಕಲು ರಣಧಾರಿಣಿಗೆ ಬರುತ್ತಾನೆ.ಆಗ ಸಂಜಯನ ಕೊಲ್ಲಲು ಸಾತ್ಯಕಿಯು ಬಂದರೂ ಮತ್ತೆ ವ್ಯಾಸರು ಕಾಪಾಡುತ್ತಾರೆ.
ಇತ್ತ ಹೆಣಗಳ ರಾಶಿಯ ಮಧ್ಯೆ ನಡೆದುಹೋಗುತ್ತಿದ್ದ ದುರ್ಯೋಧನನನ್ನು ಕಂಡ ಸಂಜಯ ಕುಶಲೋಪರಿ ವಿಚಾರಿಸುವನು. ತಾಯಿ ಗಾಂಧಾರಿಗೆ ಸಂದೇಶವೇನು ಕೊಡಲಿ ಎಂದು ಸಂಜಯ ಕೇಳಿದಾಗ ಜಯಲಕ್ಷ್ಮೀ ಎಂಬ ಇನ್ನೊಂದು ಸೊಸೆಯೊಂದಿಗೆ ಮನೆ ಪ್ರವೇಶ ಮಾಡುವೆನು ತಾಯಿಗೆ ಹೇಳು ಎಂದು ತನ್ನ ಆತ್ಮವಿಶ್ವಾಸದ ಮಾತನ್ನು ಹೇಳುತ್ತಾನೆ.
ಈ ದಿನದ ಸೂರ್ಯಾಸ್ತದಿಂದ ಪಾರಾಗಿ ನಾಳಿನ ಸೂರ್ಯೋದಯ ನೀ ಕಂಡರೆ ನಿರ್ಧಾರದಂತೆ ನೀನೇ ಜಯಶಾಲಿ, ಹೋಗು ಇಲ್ಲೇ ಸಮೀಪದಲ್ಲಿರುವ ದ್ವೆಪಾಯನ ಸರೋವರದಲ್ಲಿ ಕುಳಿತುಕೋ ಒಳಿತಾಗಲಿ ಎಂದು ಹೇಳಿ ಸಂಜಯ ಹೊರಡುತ್ತಾನೆ.
ಜಲಸ್ತಂಭನ ವಿದ್ಯಾಪ್ರವೀಣನಾದ ಕೌರವನ ಪರಿಸ್ಥಿತಿಯನ್ನು ಸಂಜಯನಿಂದ ತಿಳಿದ ಆಚಾರ್ಯತ್ರಯರು ಕೌರವನಿಗೆ ಸಹಾಯದ ಮಾತನ್ನಾಡಿದರೂ ನಾಲ್ವರನ್ನು ನಂಬಿ ಕೆಟ್ಟೆ, ಇನ್ನು ನಿಮ್ಮ ಸಹಾಯ ಬೇಡ, ನೀವಿಲ್ಲಿಂದ ಹೋದರೆ ಅದೇ ಸಹಾಯ ಸಾಕು ಎನ್ನುತ್ತಾನೆ.
ಬೇಹುಗಾರರಿಂದ ಕೌರವನ ಇರವನ್ನು ತಿಳಿದ ಭೀಮ ನೀರಿಗೇ ಗದಾ ಪ್ರಹಾರ ಮಾಡಿ ಕೌರವನನ್ನು ಮೇಲೆಬ್ಬಿಸುತ್ತಾನೆ.ನಮ್ಮೆ„ವರಲ್ಲಿ ಒಬ್ಬನೊಡನೆ ಹೋರಾಡಿ ನೀನು ಜಯಶಾಲಿಯಾದರೂ ನಾವು ಮತ್ತೆ ಕಾಡಾಡಿಗಳಾಗುತ್ತೇವೆ ಎನ್ನುತ್ತಾನೆ ಧರ್ಮರಾಯ.ಧರ್ಮಜ ಪಲುಗುಣಾದಿ ಶ್ರೀಕೃಷ್ಣನನ್ನೂ ಹಂಗಿಸಿ ಭೀಮನನ್ನೇ ಯುದ್ಧಕ್ಕೆ ಆಯ್ಕೆಮಾಡಿ ತನ್ನ ಛಲವನ್ನು ಭೀಮ ದ್ವೇಷವನ್ನು ಹೊರಗೆಡಹುತ್ತಾನೆ.ಭೀಮನನ್ನು ಸೋಲಿಸುತ್ತಾನೆ. ಕೃಷ್ಣ ತಂತ್ರದಿಂದ ಮತ್ತೆ ಮೇಲೆದ್ದು ಬಂದಾಗ ಬಲರಾಮನ ಪ್ರವೇಶವಾಗಿ ತನ್ನ ಪರಮ ಶಿಷ್ಯ ಕೌರವನ ದುಃಸ್ಥಿತಿ ಕಂಡು ಇದಕ್ಕೆ ನನ್ನ ತಮ್ಮ ಮತ್ತು ಪಾಂಡವರೇ ಕಾರಣ ಎನ್ನುತ್ತಾ ಪಾಂಡವರ ಮೇಲೆ ಯದ್ಧಕ್ಕೆ ಬಲರಾಮ ತಯಾರಾದಾಗ ಕೃಷ್ಣ ಅಣ್ಣನನ್ನು ಸಮಾಧಾನಿಸಿ ನಿನ್ನ ನೇತೃತ್ವದಲ್ಲಿಯೇ ಭೀಮ ಕೌರವರ ಯುದ್ಧವಾಗಲಿ. ನೀನೇ ವೀಕ್ಷಕ, ನಿಯಮಕಾರ ಎನ್ನುತ್ತಾನೆ ಕೃಷ್ಣ. ಅದಕ್ಕೊಪ್ಪಿದ ಬಲರಾಮ , ಭೀಮ- ಕೌರವರೊಳಗೆ ಯುದ್ಧ ನಡೆವಾಗ ಕೃಷ್ಣನ ಕಣನ್ನೆಯಂತೆ ಭೀಮ ಕೌರವನ ತೊಡೆ ಮುರಿಯುತ್ತಾನೆ, ಪಾಂಡವರು ಜಯಶಾಲಿಗಳಾಗುತ್ತಾರೆ.
ನಿಟ್ಟೆ ಕಾಲೇಜಿನ ವತಿಯಿಂದ ನಿಟ್ಟೆಯಲ್ಲಿ ಜರುಗಿದ ಗದಾಯುದ್ಧ ತಾಳಮದ್ಧಳೆಯಲ್ಲಿ ಶೇಣಿ ಸಾಮಗರ ಕಾಲದಂತೆ ಒಂದೇ ಪ್ರಸಂಗ ಭರ್ಜರಿ ಆರುಗಂಟೆಗಳ ಸಾಗಿದ ಆಖ್ಯಾನದಲ್ಲಿ ಪ್ರಾರಂಭದಿಂದ ಕೊನೆವರೆಗೂ ಛಲದಂಕ ಮಲ್ಲ ಕೌರವನಾಗಿ ಉಜಿರೆ ಅಶೋಕ ಭಟ್ಟರು ಏಕಾಂಗಿಯಾಗಿ ಪ್ರಸಂಗ ಯಶಗೊಳ್ಳುವಲ್ಲಿ ಪ್ರಧಾನ ಕಾರಣರಾದರು.
ಸಂಜಯನಾಗಿ ಹರೀಶ ಬಳಂತಿಮೊಗರು , ಕೌರವನ ಪಾತ್ರಚಿತ್ರಣಕ್ಕೆ ಪೂರಕವಾಗಿ ಮತ್ತು ಧೃತರಾಷ್ಟ್ರ ಗಾಂಧಾರಿಯರ ಅಂತರಂಗದ ಮನ ಬಿಂಭಿಸುವಲ್ಲಿ ಸಫಲರಾದರು. ವಿಷ್ಣುಶರ್ಮ ವಾಟೆಪಡು³ರವರು ಧರ್ಮರಕ್ಷಣಾ ಕಾರ್ಯದಲ್ಲಿ ಶ್ರೀ ಕೃಷ್ಣನ ಪಾತ್ರ ವಿವರಿಸುತ್ತಾ , ವೇದಿಕೆಯಲ್ಲಿ ತನ್ನೊಂದಿಗಿದ್ದ ಹೊಸ ಕಲಾವಿದರಿಗೆ ಉತ್ತೇಜನ ನೀಡಿದರು.
ಶೇಣಿಯವರ ಮೊಮ್ಮಗ ಶೇಣಿ ವೇಣುಗೋಪಾಲ ಭಟ್ ಭೀಮನಾಗಿ ರಂಜಿಸಿದರು.ಧರ್ಮರಾಯನಾಗಿ ಜನಾರ್ದನ ನಾಯಕ್ ಅಜೆಕಾರು ಧರ್ಮಜನ ಸ್ವಭಾವ ಬಿಂಬಿಸುವಲ್ಲಿ ಯಶಸ್ವಿಯಾದರು.
ಬೇಹುಗಾರನಾಗಿ ಹಾಸ್ಯಗಾರ ಪೂರ್ಣೇಶ ಆಚಾರ್ಯರು ಸಿಕ್ಕಿದ ಸಮಯಾವಕಾಶದಲ್ಲಿ ನಗು ಉಕ್ಕಿಸುವಲ್ಲಿ ಸಫಲರಾದರು. ಸದಾಶಿವ ನೆಲ್ಲಿಮಾರು ಬಲರಾಮನಾಗಿ ಪಾತ್ರೋಚಿತವಾಗಿ ಮಾತನಾಡಿದರು.
ಸುದೀರ್ಘ ಆರು ಗಂಟೆ ಭಾಗವತಿಕೆಯಲ್ಲಿ ರಂಜಿಸಿದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಹಾಡು ಗಳನ್ನು ಶ್ರೋತೃಗಳು ಆಸ್ವಾದಿ ಸಿದರು. ಮದ್ದಳೆಯಲ್ಲಿ ಲವಕುಮಾರ್ ಐಲ, ಚೆಂಡೆಯಲ್ಲಿ ಉದಯ ಕಂಬಾರ, ಚಕ್ರತಾಳದಲ್ಲಿ ಮುರಾರಿ ವಿಟ್ಲ ಸಹಕರಿಸಿದರು.
ಸದಾಶಿವ ನೆಲ್ಲಿಮಾರ್