ಮೂಡಬಿದ್ರಿಯ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಭಾ ಭವನದಲ್ಲಿ 22ನೇ ವರ್ಷದ ಶ್ರಾವಣ ಮಾಸದ ವಿಶೇಷ ಪುಷ್ಪ ಪೂಜೆಯ ಪ್ರಯುಕ್ತ ಆ.18ರಂದು ಶಿವಭಕ್ತ ವೀರಮಣಿ ತಾಳಮದ್ದಳೆ ಜರುಗಿತು.
ಶಿವನ ಪರಮಭಕ್ತ ವೀರಮಣಿಯು ಅಪ್ರತಿಮ ಭಕ್ತಿಯಿಂದ ಶಿವನನ್ನು ತನ್ನವನನ್ನಾಗಿಸಿ ಮಗಳಾದ ಇಕ್ಷುಮತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಿ ಅಳಿಯನನ್ನಾಗಿ ಮಾಡಿಕೊಂಡು ತನ್ನ ಆಳ್ವಿಕೆಗೊಳಪಟ್ಟ ಜ್ಯೋತಿರ್ಮೇಧಪುರದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಮಹಾನ್ ಶಿವಭಕ್ತನ ಕಥೆಯಿದು. ರಾವಣನನ್ನು ಕೊಂದ ಬ್ರಹ್ಮ ಹತ್ಯಾ ದೋಷ ಶಂಕೆಯ ನಿವಾರಣೆಗಾಗಿ ಶ್ರೀರಾಮಚಂದ್ರನು ಅಶ್ವಮೇಧ ಯಾಗ ಕೈಗೊಂಡಾಗ ಸಹೋದರ ಶತ್ರುಘ್ನನನ್ನು ಯಾಗಾಶ್ವದ ರಕ್ಷಣೆಗಾಗಿ ರಾಮಸೇನೆಯ ಸೇನಾಪತಿಯನ್ನಾಗಿ ಮಾಡುತ್ತಾನೆ. ಅಶ್ವಮೇಧದ ಕುದುರೆ ಊರೂರು ಸುತ್ತಿ ಜ್ಯೋತಿರ್ಮೇಧಕ್ಕೆ ಬರುತ್ತದೆ.ವೀರಮಣಿಯ ಮಕ್ಕಳಾದ ಶುಭಾಂಗ-ರುಕ್ಮಾಗರು ಅಶ್ವವನ್ನು ಕಟ್ಟಿ ಹಾಕುತ್ತಾರೆ. ಶತ್ರುಘ್ನನು ಪ್ರಶ್ನಿಸಲು ಬಂದಾಗ ಶುಭಾಂಗ-ರುಕ್ಮಾಗರು ಪ್ರತಿರೋಧವನ್ನು ತೋರಿದರೂ ಕೊನೆಗೆ ಶತ್ರುಘ್ನನ ಕೈಯಲ್ಲಿ ಹತರಾಗುತ್ತಾರೆ.ವೀರಮಣಿಯ ಕ್ಷೇತ್ರದಲ್ಲಿ ಶಿವನ ಸಾನ್ನಿಧ್ಯವನ್ನರಿತ ಶತ್ರುಘ್ನನು ರಾಮದಾಸ ಹನೂಮಂತನನ್ನು ವೀರಮಣಿ ಯಲ್ಲಿಗೆ ಸಂಧಾನಕ್ಕಾಗಿ ಕಳುಹಿಸುತ್ತಾನೆ.ಇಲ್ಲಿ ರಾಮಭಕ್ತಿ-ಶಿವಭಕ್ತಿಯ ಕುರಿತಾಗಿ ವಾಗ್ಯುದ್ಧ ತಾರಕ್ಕೇರುತ್ತದೆ.
ಸಂಧಾನ ವಿಫಲವಾದ ಪರಿಣಾಮ ಸ್ವತಃ ಶತ್ರುಘ್ನನೇ ಬಂದು ವೀರಮಣಿಗೆ ಬುದ್ಧಿವಾದ ಹೇಳುತ್ತಾನೆ. ಪ್ರಯೋಜನವಾಗದಿದ್ದಾಗ ವೀರಮಣಿಯನ್ನು ಶತ್ರುಘ್ನ ಯುದ್ಧದಲ್ಲಿ ಸಾಯಿಸುತ್ತಾನೆ.ತನ್ನ ಮಾವನ ಸಾವಿನಿಂದ ಕೆಂಡಾಮಂಡಲನಾದ ಶಿವನು ಧಾವಿಸಿ ಹನೂಮಂತನೊಂದಿಗೆ ಸಾವಿರ ವರುಷಗಳ ಕಾಲ ಯುದ್ಧ ನಡೆಸಿದರೂ ಸೋಲು ಗೆಲುವಿನ ನಿರ್ಣಯವಾಗದೆ,ಕೊನೆಗೆ ಹನೂಮಂತನ ರಾಮ ಭಕ್ತಿಗೆ ಹರನು ಮೆಚ್ಚಿ ವರವ ಕೊಡಲು ಇಚ್ಛಿಸುತ್ತಾನೆ. ರಾಮನ ಅನುಗ್ರಹಕ್ಕೆ ಒಳಗಾಗಿರುವ ತನಗೆ ಶಿವನ ವರದ ಅಗತ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳುತ್ತಾನೆ.ಕೊನೆಗೆ ಕಾಳಗದಲ್ಲಿ ಸತ್ತ ವೀರಮಣಿಯನ್ನು ಬದುಕಿಸಬೇಕೆಂಬ ಇಚ್ಚೆಯನ್ನು ಶಿವನು ಹನೂಮಂತನಲ್ಲಿ ವ್ಯಕ್ತಪಡಿಸಿದಾಗ ಕೊನೆಗೆ ಶ್ರೀ ರಾಮನಲ್ಲಿ ಹನೂಮಂತನು ಮೊರೆ ಹೋದಾಗ ರಾಮನು ಪ್ರತ್ಯಕ್ಷನಾಗಿ ಎರಡೂ ಕಡೆಯ ಸತ್ತವರನ್ನು ಬದುಕಿಸಲು ಹನೂಮನಿಗೆ ಸೂಚಿಸುತ್ತಾನೆ. ಹನೂಮನು ಸಂಜೀವಿನಿ ಯನ್ನು ತಂದು ಸತ್ತವರೆಲ್ಲರನ್ನೂ ಬದುಕಿಸುತ್ತಾನೆ.
ಶಿವ ಭಕ್ತನೇ ಆಗಲಿ ರಾಮ ಭಕ್ತನೇ ಆಗಲಿ,ಭಗವಂತನಿಗೆ ಭಕ್ತರಲ್ಲಿ ಭೇದವಿಲ್ಲ.ಪರಬ್ರಹ್ಮ ಸ್ವರೂಪಿಯಾದ ಬ್ರಹ್ಮ,ವಿಷ್ಣು,ಮಹೇಶ್ವರರೆಂಬ ತ್ರಿಮೂರ್ತಿಗಳ ಆರಾಧನೆ,ಅವರವರ ಭಾವಕ್ಕೆ ಅವರವರ ಭಕುತಿಗೆ ಹರನ ಭಕ್ತರಿಗೆ ಹರ,ಹರಿಯ ಭಕ್ತನಿಗೆ ಹರಿಯಾಗಿ ಆರ್ತರಿಗೆ ಕಾಣಿಸುತ್ತಾನೆ,ಕಾಯುತ್ತಾನೆ.ಇನ್ನಾದರೂ ಲೋಕದಲ್ಲಿ ಶೈವ-ವೈಷ್ಣವರೆಂದು ಹೊಡೆದಾಡದಿರಿ ಎಂಬುದೇ ಈ ಕಥಾ ಪ್ರಸಂಗದ ಸುಂದರ ತಾತ್ಪರ್ಯ.ಹನೂಮಂತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ವೀರಮಣಿಯಾಗಿ ಜಬ್ಟಾರ್ ಸಮೋ ಮಧ್ಯೆ ರಾಮ ಕಾರುಣ್ಯಾನುಗ್ರಹ ಮತ್ತು ಶಿವಕಾರುಣ್ಯಾನುಗ್ರಹ ಕುರಿತಾಗಿ ನಡೆದ ಚರ್ಚೆ ಸ್ವಾರಸ್ವಪೂರ್ಣವೂ, ಅರ್ಥಪೂರ್ಣವೂ ಆಗಿತ್ತು. ಡಾ| ವಿನಾಯಕ ಭಟ್ ಗಾಳಿಮನೆ,ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಟಾರ್ ಸಮೋ, ಗಣೇಶ್ ಕನ್ನಡಿಕಟ್ಟೆ ಅವರಂಥ ಅರ್ಥದಾರಿಗಳಿಂದಾಗಿ ಪಾತ್ರಗಳು ಪ್ರಬುದ್ಧವಾಗಿ ಮೆರೆದುವು.
ಹಿಮ್ಮೇಳದಲ್ಲಿ ರಾಘವೇಂದ್ರ ಜನ್ಸಾಲೆ, ಮದ್ದಳೆಯಲ್ಲಿ ಕಡತೋಕ ಸುನಿಲ್ ಭಂಡಾರಿ,ಚೆಂಡೆಯಲ್ಲಿ ಸುಜನ್ ಹಾಲಾಡಿ ಸಹಕರಿಸಿದರು.
ಎಂ.ರಾಘವೇಂದ್ರ ಭಂಡಾರ್‌ಕರ್