Advertisement

ತಿರುಗಾಟಕ್ಕೆ ಹೊರಟ ಮೇಳಗಳು: ಯಕ್ಷಪಯಣ ಆರಂಭ

02:15 AM Nov 12, 2018 | Karthik A |

ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ ಯಕ್ಷಲೋಕ ಅನಾವರಣಗೊಳ್ಳಲಿದೆ.

Advertisement

ಚಾಲನೆ
ನವರಸಗಳನ್ನು ಸ್ಪುರಿಸುವ, ಭಕ್ತಿಭಾವದಲ್ಲಿ ಮಿಂದೇಳಿಸುವ, ಯಕ್ಷಗಾನದ ಮೇಳಗಳ ಈ ವರ್ಷದ ತಿರುಗಾಟಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆತಿದೆ. ಸರಿಸುಮಾರು 190 ಆಟಗಳನ್ನು ಈ ತಿರುಗಾಟದಲ್ಲಿ ಮೇಳಗಳು ಪ್ರದರ್ಶಿಸಲಿವೆ. ಇಂದಿನಿಂದ ಪತ್ತನಾಜೆವರೆಗೆ ತಿರುಗಾಟ ಇರುತ್ತದೆ. ಮಳೆಗಾಲದಲ್ಲಿ ಮೊದಲು ಕಲಾವಿದರಿಗೆ ಪೂರ್ಣವಿರಾಮ ಇದ್ದರೂ ಈಗ ಗಾನವೈಭವ, ನಾಟ್ಯವೈಭವ, ಕಾಲಮಿತಿ ಯಕ್ಷಗಾನಗಳ ಮೂಲಕ ಕಲಾವಿದರೂ ಬಿಡುವಿಲ್ಲದೇ ಕಲಾಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಷ್ಟಕ್ಕಿಲ್ಲ ಸ್ಪಂದನೆ
ಇರುಳಲ್ಲಿ ಸ್ವರ್ಗಾಧಿಪತಿಯಾದರೂ ವೇಷ ತೆಗೆದಾಗ ನರಕಯಾತನೆ ತಪ್ಪಿದ್ದಲ್ಲ. ಇಂತಹ ಸಂಕಷ್ಟ ಉಳ್ಳ ಕಲಾವಿದರಿಗೆ ನೆರವಾಗಲು ಧರ್ಮಸ್ಥಳದಂತಹ ಕೆಲವು ಮೇಳಗಳು ವಿಮೆ ಮಾಡಿಸುತ್ತಿವೆ. ಕಟೀಲಿನಂತಹ ಮೇಳಗಳು ಮಳೆಗಾಲದ ಅವಧಿಯಲ್ಲಿ ಅರ್ಧ ಸಂಬಳ ಕೊಡುತ್ತಿವೆ. ಯಕ್ಷಗಾನ ಸಂಬಂಧಿ ಯಕ್ಷಧ್ರುವ ಪಟ್ಲದಂತಹ ಸಂಘಟನೆಗಳು ಒಂದಷ್ಟು ನೆರವಾಗುತ್ತಿವೆ. ಮಂದರ್ತಿ ಮೇಳ ವರ್ಷವಿಡೀ ಹರಕೆಯಾಟ ಆಡಿಸುವ ಮೂಲಕ ಕಲಾವಿದರಿಗೆ ವಿರಾಮದ ದಿನಗಳಲ್ಲಿ ಕೆಲಸ ಇಲ್ಲ ಎಂಬ ಅಪವಾದ ತೆಗೆದುಹಾಕಿದೆ. ಆದರೆ ಸರಕಾರ, ಅಕಾಡೆಮಿ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂಬ ಕೂಗು ಕಲಾವಿದರದ್ದು.

ಬೇಡಿಕೆ
50ಕ್ಕಿಂತ ಅಧಿಕ ಮೇಳಗಳು ತೆಂಕು ಬಡಗಿನಲ್ಲಿದ್ದರೂ ಯಕ್ಷಗಾನದ ಬೇಡಿಕೆ ಕುಂದಿಲ್ಲ. ಕಟೀಲು, ಮಂದರ್ತಿ, ಧರ್ಮಸ್ಥಳ ಮೊದಲಾದ ಮೇಳಗಳಿಗೆ ಇನ್ನೂ ಕೆಲವು ದಶಕಗಳಿಗೆ ಆಗುವಷ್ಟು ಹರಕೆ ಯಕ್ಷಗಾನಗಳಿಗೆ ಬೇಡಿಕೆ ಇದೆ. ಈ ವರ್ಷ ತೆಂಕಿನಲ್ಲಿ ಸುಬ್ರಹ್ಮಣ್ಯ ಮೇಳ ಹೊಸದಾಗಿ ಆರಂಭವಾಗುತ್ತಿದೆ. ಟೆಂಟಿನ ಮೇಳಕ್ಕೆ ಕಲೆಕ್ಷನ್‌ ಕಮ್ಮಿ ಎನ್ನುವ ಅಪವಾದ ಇದೆ. ಈ ನಿಟ್ಟಿನಲ್ಲಿ ಕಾಲಮಿತಿ ಪ್ರದರ್ಶನಗಳ ಕಡೆಗೆ ಜನರ ಒಲವು ಹೆಚ್ಚುತ್ತಿದೆ.

ಮೇಳಗಳ ಆರಂಭ ದಿನಾಂಕ
ಬಡಗುತಿಟ್ಟು

ಹಟ್ಟಿಯಂಗಡಿ ಮೇಳ ನ. 11, ಮೇಗರವಳ್ಳಿ ಮೇಳ ನ. 11, ಪೆರ್ಡೂರು ಮೇಳ ನ.12, ಸಾಲಿಗ್ರಾಮ ಮೇಳ ನ.15, ಕಮಲಶಿಲೆ ಮೇಳ ನ. 17, ಅಮೃತೇಶ್ವರಿ ಮೇಳ ನ.17, ಆಜ್ರಿ ಮೇಳ ನ.17, ಮಾರಣಕಟ್ಟೆ ಮೇಳ ನ. 18, ಮಂದಾರ್ತಿ ಮೇಳ ನ. 19, ಸೌಕೂರು  ಮೇಳ  ನ. 19, ಗೋಳಿಗರಡಿ ಮೇಳ ನ. 20, ನೀಲಾವರ ಮೇಳ ನ.21, ಹಾಲಾಡಿ ಮೇಳ ನ.26.  

Advertisement

ತೆಂಕುತಿಟ್ಟು
ಶ್ರೀ ಧರ್ಮಸ್ಥಳ ಮೇಳ ನ. 14, ಹನುಮಗಿರಿ ಮೇಳ ನ.21, ಸುಂಕದಕಟ್ಟೆ ಮೇಳ ನ. 21, ಶ್ರೀ ದೇಂತಡ್ಕ ಮೇಳ ನ. 23, ಸಸಿಹಿತ್ಲು ಮೇಳ ನ.25, ಬಪ್ಪನಾಡು ಮೇಳ ನ.30, ಕಟೀಲು ಮೇಳಗಳು ಡಿ.2, ಮಂಗಳಾದೇವಿ ಮೇಳ (ಡಿಸೆಂಬರ್‌ ಪ್ರಥಮ ವಾರದಲ್ಲಿ), ಬಾಚಕೆರೆ ಮೇಳ (ನವೆಂಬರ್‌ ಕೊನೆಯ ವಾರ) ತಿರುಗಾಟಕ್ಕೆ ಹೊರಡಲಿವೆ.

ಹೊಸಪ್ರಸಂಗ
ಟೆಂಟ್‌ ಮೇಳಗಳಾದ ಪೆರ್ಡೂರು ಮೇಳದವರು ಶತಮಾನಂ ಭವತಿ, ಸಾಲಿಗ್ರಾಮ ಮೇಳದವರು ಚಕ್ರ ಪೌರ್ಣಮಿ, ಕಸ್ತೂರಿ ತಿಲಕ ಪ್ರಸಂಗಗಳನ್ನು ಈ ವರ್ಷದ ನೂತನ ಆಖ್ಯಾನವಾಗಿ ಪ್ರದರ್ಶಿಸಲಿವೆ. 

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next