ಹೊನ್ನಾವರ: ಕಳೆದ 32 ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ಯಕ್ಷಗಾನದ ತರಬೇತಿ ನೀಡುತ್ತಿರುವ ಕೆರೆಮನೆ ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ ದೇಶದ ನಾನಾಭಾಗದ ತರುಣರಿಗೆ ಯಕ್ಷಗಾನ ದೀಕ್ಷೆ ನೀಡಿದೆ. ನಾಟ್ಯದ ಎಲ್ಲ ವಿಭಾಗಗಳನ್ನೊಳಗೊಂಡ ಸಮಗ್ರ ಜಾನಪದ ಕಲೆ ಯಕ್ಷಗಾನದ ಘಮಘಮ ಉತ್ತರ ಭಾರತದ ತರುಣರಿಂದಾಗಿ ದೇಶಾದ್ಯಂತ ಹರಡುವಂತಾಗಿದೆ.
ಜುಲೈ 17ರಿಂದ ಆರಂಭವಾದ ಯಕ್ಷಗಾನ ತರಬೇತಿಗೆ ಉತ್ತರ ಭಾರತದ ಏಳು ವಿದ್ಯಾರ್ಥಿಗಳು ಸೇರಿಕೊಂಡು ಮೂರು ತಿಂಗಳು ಯಕ್ಷಗಾನ ಕಲಿತು ಊರಿಗೆ ತೆರಳಿದ್ದಾರೆ. ಮಧ್ಯಪ್ರದೇಶದ ಜಬಲ್ ಪುರದ ನಮನ್ ಮಿಶ್ರ ಶಿವಾನಂದ ಹೆಗಡೆಗೆ ಕರೆ ಮಾಡಿ ಯಕ್ಷಗಾನ ಕಲಿಸಿಕೊಡಿ. ನಾವು ಏಳು ಜನ ಬರುತ್ತೇವೆ. ಖರ್ಚು ವಹಿಸಿಕೊಡುತ್ತೇವೆ ಎಂದು ಹೇಳಿದಾಗ, ಉಚಿತವಾಗಿ ಕಲಿಸಿಕೊಡುತ್ತೇವೆ. ಶ್ರದ್ಧೆಯಿದ್ದರೆ ಬನ್ನಿ ಎಂದು ಕರೆದಾಗ ಆಗಸ್ಟ್ ಮೊದಲನೇ ವಾರದಲ್ಲಿ ಬಂದೇ ಬಿಟ್ಟರು. ರಂಗಭೂಮಿಯಲ್ಲಿ ನಾಲ್ಕು ವರ್ಷದ ಅನುಭವ ಹೊಂದಿದ ನಮನ್ ಮಿಶ್ರ, ನಾಲ್ಕು ವರ್ಷಗಳ ಅನುಭವಿ ಹರೀಶ ಮನ್ವಾನಿ, ಆರು ವರ್ಷ ಅನುಭವದ ರೋಹಿತ್ ಸಿಂಗ್, ಪೂಜಾ ಪಾಂಡೇ, ವಾರಣಾಸಿಯ ನೇಹಾ ವರ್ಮಾ, ಓಡಿಶಾದ ಅಮನ್ ಡೋರಾ, ಎಂಟು ವರ್ಷ ಅನುಭವದ ಮಧ್ಯಪ್ರದೇಶದ ನೀರಜ್ ಮಿಶ್ರಾ ಇವರು ತಮ್ಮ ರಂಗಭೂಮಿಯ ಅನುಭವಕ್ಕೆ ಯಕ್ಷಗಾನದ ಕಸಿ ಕೊಟ್ಟಿಕೊಂಡರು. ಎಲ್ಲರೂ ಅಕ್ಟೋಬರ್ 28ರವರೆಗೆ ಯಕ್ಷಗಾನ ವ್ರತಧಾರಿಗಳಾಗಿ ಬೆಳಗ್ಗೆ 9:30ರಿಂದ ಅಭ್ಯಾಸ ಆರಂಭಿಸಿ, ತಾಳ, ಸ್ವರಾಭ್ಯಾಸ, ನರ್ತನ, ವೇಷಭೂಷಣವನ್ನು ಅಧ್ಯಯನ ಮಾಡಿದರು. ಗುರುಗಳಾಗಿ ಕೆರೆಮನೆ ಶಿವಾನಂದ ಹೆಗಡೆ, ನಾರಾಯಣ ಪೂಜಾರಿ, ಉಮೇಶ ಮರಾಠಿ, ಶ್ರೀಕಾಂತ ಪೂಜಾರಿ ಪಾಠ ಹೇಳಿ ಪ್ರಾತ್ಯಕ್ಷಿಕೆ ಮಾಡಿಸಿದರು.
ನಾಲ್ಕೇ ದಿನದಲ್ಲಿ ಕನ್ನಡ ಅರ್ಥಮಾಡಿಕೊಂಡರು. ಆಹಾರಕ್ಕೆ ಹೊಂದಿಕೊಂಡರು. ಬಿಡುವಿನಲ್ಲಿ ಪ್ರವಾಸಿ ತಾಣ ನೋಡಿಬಂದರು. ಆಟದ ಪ್ರಾತ್ಯಕ್ಷಿಕೆ ಮಾಡಿದರು. ಯಕ್ಷಗಾನದ ಸಿಡಿ, ಛಾಯಾಚಿತ್ರಗಳನ್ನು ನೋಡಿ ಕಥೆಯನ್ನು ಅರ್ಥಮಾಡಿಕೊಂಡರು. ಹೀಗೆ ಕೇವಲ ನೃತ್ಯ ಮಾತ್ರಕಲಿಯದೇ ನಿತ್ಯ ನಾಲ್ಕೈದು ತಾಸು ಸಂವಾದ ನಡೆಸಿ ಯಕ್ಷಗಾನದ ಸಮಗ್ರ ಪರಿಚಯಮಾಡಿಕೊಂಡರು. ಇವರೆಲ್ಲ ಯಕ್ಷಗಾನದ ಪ್ರತಿನಿಧಿಗಳಾಗಿ ಉತ್ತರ ಭಾರತದಲ್ಲಿ ತಮ್ಮ ರಂಗಚಟುವಟಿಕೆ ಮುಂದುವರಿಸುತ್ತಾರೆ. ಸ್ಪಿಕ್‌ವೆುಕೆ ವಿದ್ಯಾರ್ಥಿ ವೇತನದಲ್ಲಿ ಪ್ರತಿವರ್ಷ ಹತ್ತಾರು ವಿದ್ಯಾರ್ಥಿಗಳು ಒಂದು ತಿಂಗಳು ಇಲ್ಲಿದ್ದು ಯಕ್ಷಗಾನ ಕಲಿಯುತ್ತಾರೆ. ಫ್ರಾನ್ಸ್‌ನಿಂದ ಬಂದು ಹೋದವರಿದ್ದಾರೆ. ಸ್ಪಿಕ್‌ವೆುಕೆ ಪ್ರಾಯೋಜಕತ್ವದಲ್ಲಿ ಶಿವಾನಂದ ಹೆಗಡೆ ಉತ್ತರ ಕರ್ನಾಟಕ ಮತ್ತು ಬಯಲುಸೀಮೆಯ ಶಾಲೆಗಳಲ್ಲಿ ಮಾತ್ರವಲ್ಲ ಉತ್ತರಭಾರತದ ದಿಲ್ಲಿ, ಪಂಜಾಬ, ಹರಿಯಾಣ ಮೊದಲಾದ ರಾಜ್ಯಗಳಲ್ಲಿ ಯಕ್ಷಗಾನದ 200ಕ್ಕೂ ಹೆಚ್ಚು ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಸಿ ಬಂದಿದ್ದಾರೆ.
ಕೇವಲ ಕರಾವಳಿಯ ಕಲೆಯಾಗಿದ್ದ ಯಕ್ಷಗಾನವನ್ನು ಶಿವರಾಮ ಕಾರಂತರು ದೇಶದಲ್ಲಿ, ವಿದೇಶದಲ್ಲಿ ಪರಿಚಯಿಸಿದರು. ಇಂದು ಕರಾವಳಿ ಮೂಲದ ಹಲವರು ಯಕ್ಷಗಾನ ಕಲಾವಿದರಾಗಿ ದೇಶ ವಿದೇಶದಲ್ಲಿ ಆಗಾಗ ವೇಷ ಕಟ್ಟುತ್ತಾರೆ. ಕೆರೆಮನೆ ಶಿವರಾಮ ಹೆಗಡೆ ತಲೆಯ ಮೇಲೆ ವೇಷದ ಪೆಟ್ಟಿಗೆ ಹೊತ್ತು, ಬರಿಗಾಲಲ್ಲಿ ನಡೆಯುತ್ತಾ ಹಳ್ಳಿಹಳ್ಳಿಗೆ ತೆರಳಿ ಯಕ್ಷಗಾನದ ರುಚಿ ಹತ್ತಿಸಿದರು. ದೆಹಲಿ, ಕಾಶ್ಮೀರದ ತನಕ ಹೋಗಿ ಬಂದರು. ಶಂಭು ಹೆಗಡೆ ಜಗತ್ತಿನ ಅತಿಹೆಚ್ಚು ರಾಷ್ಟ್ರಗಳಲ್ಲಿ ಯಕ್ಷಗಾನ ಪ್ರದರ್ಶಿಸಿ ಬಂದರು.
ಶಿವಾನಂದ ಹೆಗಡೆ ಯಕ್ಷಗಾನದ ಪ್ರದರ್ಶನದ ಜೊತೆ ಉಚಿತವಾಗಿ ಗುರುಕುಲ ಪದ್ಧತಿಯಲ್ಲಿ ಯಕ್ಷಗಾನ ಶಾಲೆ ನಡೆಸುತ್ತಿದ್ದಾರೆ. ಉತ್ತರಭಾರತದ ಏಳು ರಂಗಕಲಾವಿದರು ಕೆರೆಮನೆಗೆ ಬಂದು ಮೂರು ತಿಂಗಳು ಯಕ್ಷಗಾನ ಕಲಿತು ಹೋದದ್ದು ಹೆಮ್ಮೆಯ ಸಂಗತಿ. ಯಕ್ಷಗಾನದ ಸವಿ ಗಟ್ಟ ಹತ್ತಿ ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ.