Advertisement

ಯಕ್ಷ ಕಲೆಗೆ ಧಾರ್ಮಿಕ ಕ್ಷೇತ್ರಗಳ ಕೊಡುಗೆ ಅಪಾರ: ಪ್ರವೀಣ್‌ ಶೆಟ್ಟಿ  ಪುತ್ತೂರು

11:55 AM Mar 05, 2022 | Team Udayavani |

ಪುಣೆ: ಶ್ರೀ ದೇವರ ಸನ್ನಿಧಾನವಿರುವ ಪವಿತ್ರ ಪುಣ್ಯಕ್ಷೇತ್ರಗಳು ಧಾರ್ಮಿಕ ಆಚರಣೆಗಳೊಂದಿಗೆ ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಭಕ್ತರನ್ನು ತನ್ನತ್ತ ಸೆಳೆಯುವ ಶ್ರದ್ಧಾ ಕೇಂದ್ರಗಳಾಗಿವೆ. ತುಳುನಾಡಿನ ಅದೆಷ್ಟೋ ಕ್ಷೇತ್ರಗಳು ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪೋಷಿಸಿ ಬೆಳೆಸುತ್ತಿವೆ. ಹಾಗೆಯೇ ಕೆಲವು ಮಹಾ ಕ್ಷೇತ್ರಗಳ ಯಕ್ಷಗಾನ ಮೇಳಗಳು ಮೇಳೈಸುತ್ತಿವೆ. ಯಕ್ಷಗಾನ ಮನೋರಂಜನೆ ಜತೆಗೆ ದೇಶದ ವಿವಿಧ ಕ್ಷೇತ್ರಗಳ ಚರಿತ್ರೆಯನ್ನು ದಾಖಲಿಸುವ ಕಲೆ. ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಆಗು-ಹೋಗುಗಳ ಬಗ್ಗೆ ಮನವರಿಕೆ ಮಾಡುವ ಕಲೆಯಾಗಿದೆ. ಕಲೆಯ ಅಭಿಮಾನದಿಂದ ಪುಣೆಯಲ್ಲಿ ಈ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದೇವೆ. ಯಕ್ಷಗಾನ ಇನ್ನಷ್ಟು ಬೆಳೆಯಬೇಕು, ಯುವ ಜನತೆ ಈ ಕಲೆ ಬಗ್ಗೆ ಆಕರ್ಷಿತರಾಗಬೇಕು. ಅದಕ್ಕಾಗಿ ಹೆಚ್ಚೆಚ್ಚು ಯಕ್ಷಗಾನ ಪ್ರದರ್ಶನಗಳು ನಡೆಯಬೇಕು ಎಂಬುವುದೇ ನಮ್ಮ ಆಶಯ ಎಂದು ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಸ್ಥಾಪಕ, ಅಧ್ಯಕ್ಷ ಪ್ರವೀಣ್‌ ಶೆಟ್ಟಿ  ಪುತ್ತೂರು ತಿಳಿಸಿದರು.

Advertisement

ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ  ಮಾ. 1ರಂದು ಶಿವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಆಯೋಜಿಸಲಾಗಿದ್ದ ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನ ಸಂದರ್ಭ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಕ್ಷಗಾನ ಕಲೆಗೆ ಧಾರ್ಮಿಕ ಕ್ಷೇತ್ರಗಳ ಕೊಡುಗೆ ಅಪಾರವಾಗಿದೆ. ಪುಣೆಯ ಪುಣ್ಯಕ್ಷೇತ್ರವಾದ ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೂಡಾ ಯಕ್ಷಗಾನದ ಮೇಲಿನ ಅಭಿಮಾನದಿಂದ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುತ್ತಿದೆ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಎಲ್ಲ ಪದಾಧಿಕಾರಿಗಳಿಗೆ  ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಮಾಡಿದ ಸಮ್ಮಾನಕ್ಕೆ ಋಣಿಯಾಗಿದ್ದೇನೆ. ಸಿ. ಕೆ. ಪ್ರಶಾಂತ್‌  ಮುಂದಾಳತ್ವದಲ್ಲಿ ಶಿವ ಮೆಚ್ಚಿನ ಕಣ್ಣಪ್ಪೆ ಯಕ್ಷಗಾನವು ಕಲಾಭಿಮಾನಿಗಳ ಮನ ಮುಟ್ಟಿದೆ. ಇಲ್ಲಿನ ಅಪಾರ ಭಕ್ತರು ಮತ್ತು ಕಲಾಭಿಮಾನಿಗಳ ಸಮ್ಮಿಲನ ಖುಷಿ ತಂದಿದೆ. ಈ ಕ್ಷೇತ್ರ ಇನ್ನಷ್ಟು ಬೆಳೆಯಲಿ, ಯಕ್ಷಗಾನ ಕಲಾವಿದರ ಬಾಳಿಗೆ ಮಂದಿರವು ಬೆಳಕಾಗಲಿ ಎಂದರು.

ಊರಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಶಿವ ಮೆಚ್ಚಿನ ಕಣ್ಣಪ್ಪೆ ತುಳು ಯಕ್ಷಗಾನವು ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಅವರ ವ್ಯವಸ್ಥಾಪಕತ್ವದಲ್ಲಿ  ಪ್ರದರ್ಶನಗೊಂಡಿತು. ಯಕ್ಷಗಾನದ ಮಧ್ಯಾಂತರದಲ್ಲಿ  ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವತಿಯಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ, ಯಕ್ಷಕಲಾ ಪೋಷಕ, ಸಮಾಜ ಸೇವಕ ಪ್ರವೀಣ್‌ ಶೆಟ್ಟಿ  ಪುತ್ತೂರು ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್‌ ಭಟ್‌, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಭಾಶ್‌ ಶೆಟ್ಟಿ  ಮತ್ತು ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಕ್ಷಗಾನದ ಮುಮ್ಮೇಳ ಮತ್ತು ಹಿಮ್ಮೇಳದ ಕಲಾವಿದರನ್ನು ಸಂಘದ ಸದಸ್ಯರು ಸತ್ಕರಿಸಿದರು. ಪುಷ್ಪರಾಜ್‌ ಶೆಟ್ಟಿ  ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಯಕ್ಷಗಾನದಲ್ಲಿ  ಭಾಗವತರಾಗಿ ಯುವ ಭಾಗವತ ಭರತ್‌ರಾಜ್‌ ಶೆಟ್ಟಿ, ಮದ್ದಳೆಯಲ್ಲಿ ಆನಂದ್‌ ಶೆಟ್ಟಿ ಇನ್ನ, ಚೆಂಡೆಯಲ್ಲಿ  ಪ್ರವೀಣ್‌ ಶೆಟ್ಟಿ, ಚಕ್ರತಾಳದಲ್ಲಿ ಕುಶರಾಜ್‌ ಸಹಕರಿಸಿದರು. ಕಲಾವಿದರಾಗಿ ಯಕ್ಷಗಾನ, ರಂಗಭೂಮಿ ಕಲಾವಿದ, ಟಿವಿ ಕಾರ್ಯಕ್ರಮ ನಿರೂಪಕ ಸಿ. ಕೆ. ಪ್ರಶಾಂತ್‌ ಸಾರಥ್ಯದಲ್ಲಿ ವಿಶ್ವನಾಥ್‌ ಪದು¾ಂಜ, ರವಿ ಭಂಡಾರಿ, ರಾಜೇಶ್‌ ಅರುವ, ಹರಿಪ್ರಸಾದ್‌ ಸಿದ್ದಕಟ್ಟೆ, ಮಿಥುನ್‌ ಪಂಜ, ವಿನಯ ಭಟ್‌ ಚಿಗುರುಪಾದೆ ಹಾಗೂ ಇನ್ನಿತರ ಉದಯೋನ್ಮುಖ ಕಲಾವಿದರು ಪಾಲ್ಗೊಂಡಿದ್ದರು. ವೇಷಭೂಷಣದಲ್ಲಿ  ನಂದಿನಿ ಆರ್ಟ್ಸ್ನ ಮನೋಜ್‌ ಹೆಜ್ಮಾಡಿ, ಪ್ರಭಾಕರ ಕುಂದರ್‌, ಸುನಿಲ್‌ ದೇವಾಡಿಗ ಸಹಕರಿಸಿದರು.

ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸದಸ್ಯ ನಾಗಿರುವ ನನಗೆ ಪುಣೆಯ ಕಲಾಭಿ ಮಾನಿಗಳ ಬಗ್ಗೆ ಅಪಾರ ಪ್ರೀತಿಯಿದೆ. ಈಗ ಊರಿನಲ್ಲಿ  ಬಿಡುವಿಲ್ಲದಷ್ಟು ಕಾರ್ಯಕ್ರಮಗಳ ನಡುವೆ ಪುಣೆಯ ಈ ಯಕ್ಷಗಾನ ಪ್ರದರ್ಶನಕ್ಕೆ ನಾವೆಲ್ಲರೂ ಬಂದಿದ್ದೇವೆ. ಇದಕ್ಕೆ ಕಾರಣ ಪ್ರವೀಣ್‌ ಶೆಟ್ಟಿಯವರ ಹೃದಯವಂತಿಕೆ. ನಮ್ಮ ಕಷ್ಟ ಕಾಲದಲ್ಲೂ  ವಿಚಾರಿಸಿ ನೆರವು ನೀಡುವಂತಹ ವ್ಯಕ್ತಿತ್ವ ಅವರದ್ದು. ಕಲಾವಿದರ ಬಗ್ಗೆ ಅವರಿಗೆ ಇರುವ ಕಳಕಳಿ ಮತ್ತು ಯಕ್ಷಗಾನದ ಮೇಲಿರುವ ಪ್ರೀತಿಯನ್ನು ನಾವೆಂದೂ ಮರೆಯುವುದಿಲ್ಲ. ನಾನು ಕೂಡಾ ಪುಣೆಯ ಮಂಡಳಿಯ ಕಲಾವಿದ ಎನ್ನಲು ಹೆಮ್ಮೆಯಾಗುತ್ತಿದೆ. ಯಕ್ಷಗಾನಕ್ಕೆ ಕಲಾಭಿಮಾನಿಗಳ ಸಹಕಾರ ಸದಾಯಿರಲಿ.ಸಿ. ಕೆ. ಪ್ರಶಾಂತ್‌ಯಕ್ಷಗಾನ, ರಂಗಭೂಮಿ ಕಲಾವಿದರು

Advertisement

ಚಿತ್ರ-ವರದಿ: ಹರೀಶ್‌  ಮೂಡಬಿದ್ರೆ ಪುಣೆ

 

 

Advertisement

Udayavani is now on Telegram. Click here to join our channel and stay updated with the latest news.

Next