Advertisement

ಮಕ್ಕಳು ಪ್ರದರ್ಶಿಸಿದ ಯಕ್ಷಗಾನ ಸ್ತುತಿ ಪದ್ಯ- ಬಯಲಾಟ

06:50 PM Jan 10, 2020 | mahesh |

ಕೈಕಂಬದ ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡವು ದ್ವಿತೀಯ ವಸಂತದ ಸಂಭ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಸ್ತುತಿ ಪದ್ಯ, ಭಕ್ತಿ ಕುಸುಮ, ಕುಣಿತ ಭಜನೆ ಮತ್ತು ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಪ್ರಾರಂಭದಲ್ಲಿ ಭಾಗವತಿಕೆ ಕಲಿಯುತ್ತಿರುವ 12 ವಿದ್ಯಾರ್ಥಿಗಳು ಹಾಡಿದ ಪರಂಪರೆಯ ಪೂರ್ವರಂಗದ ಹಾಡುಗಳು ಮುಕ್ತ ಪ್ರಶಂಸೆಗೆ ಪಾತ್ರವಾದವು. ವಿದ್ಯಾರ್ಥಿಗಳು ಅಂದು ತಮ್ಮ ಪ್ರಥಮ ರಂಗಪ್ರವೇಶದಲ್ಲೇ ಪೂರ್ವರಂಗದ ಹಾಡುಗಳನ್ನು ಸುಶ್ರಾವ್ಯವಾಗಿ ಸರದಿ ಪ್ರಕಾರ ಹಾಡಿ ಬಾಲಗೋಪಾಲ ವೇಷಗಳನ್ನು ರಂಗದಲ್ಲಿ ಕುಣಿಸಿದ ರೀತಿ ಅಚ್ಚರಿಯನ್ನುಂಟು ಮಾಡಿತು.

Advertisement

ಇದಾದ ಬಳಿಕ ಪುಟಾಣಿ, ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ “ಕುಮಾರ ಸಂಭವ- ಶ್ವೇತ ಕುಮಾರ – ರಕ್ತರಾತ್ರಿ’ ಬಯಲಾಟ ನಡೆಯಿತು. ಮೊದಲ ಬಾರಿ ಗೆಜ್ಜೆ ಕಟ್ಟಿ ರಂಗವೇರಿದ ವಿದ್ಯಾರ್ಥಿಗಳ ಹಾಗೂ ಅನುಭವವಿದ್ದ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಪ್ರದರ್ಶನಗೊಂಡ ಈ ತ್ರಿವಳಿ ಪ್ರಸಂಗಗಳು ಹೃನ್ಮನ ತಣಿಸುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿ ನಡೆದ ಕುಮಾರ ಸಂಭವ ಪ್ರಸಂಗದಲ್ಲಿ ಆರು ಬಲಗಳೊಂದಿಗೆ ದೇವೇಂದ್ರನ ಪರಂಪರೆಯ ತೆರೆಮರೆ ಕುಣಿತದ ಒಡ್ಡೋಲಗವು “ಓ ದೇವ ದೇವಾ …’ ಪದ್ಯದಲ್ಲಿ ಸೊಗಸಾಗಿ ಮೂಡಿಬಂತು.

ಉತ್ತರಾರ್ಧದಲ್ಲಿ ಅಸುರ ಹಾಗೂ ದೇವೇಂದ್ರನ ಬಲಗಳ ಪಾತ್ರ ಮಾಡಿದ ಪುಟ್ಟ ಮಕ್ಕಳ ಸುಂದರ ವೇಷ, ಕುಣಿತ, ದಿಗಿಣ, ಸಂಭಾಷಣೆ ಮುದ ನೀಡಿತು. ಶಿವ-ಪಾರ್ವತಿಯರ ನಾಟ್ಯ ಕರತಾಡನಕ್ಕೆ ಪಾತ್ರವಾಯಿತು. ತಾರಕಾಸುರ, ಕಾರ್ತಿಕೇಯ ಹಾಗೂ ಪೋಷಕ ಪಾತ್ರಗಳ ನಿರ್ವಹಣೆಯೂ ಅಚ್ಚುಕಟ್ಟಾಗಿತ್ತು.

ಕೀರಿಕ್ಕಾಡು ವಿಷ್ಣುಭಟ್‌ ರಚಿಸಿದ ಶ್ವೇತಕುಮಾರ ಪ್ರಸಂಗದಲ್ಲಿ ಶ್ವೇತಕುಮಾರ ಹಾಗೂ ತ್ರೆçಲೋಕ ಸುಂದರಿ ಪಾತ್ರಧಾರಿಗಳ ವೈವಿಧ್ಯಮಯ ನೃತ್ಯ, ಅಭಿನಯ, ಮಾತುಗಾರಿಕೆ ಮೆಚ್ಚುಗೆಗಳಿಸಿತು. ದುರ್ಜಯ, ಲೋಹಿತನೇತ್ರ, ಮಂತ್ರಿ, ಚಿತಕೇತ, ಶಿವೆ, ರಂಭೆ, ಯಮ, ಚಿತ್ರಗುಪ್ತ ಹಾಗೂ ಈಶ್ವರ ಪಾತ್ರಧಾರಿಗಳ ಪಾತ್ರೋಚಿತವಾದ ನಿರ್ವಹಣೆ ಗಮನಸೆಳೆಯಿತು.ಚಿತ್ರಗುಪ್ತ, ರಂಭೆ ಹಾಗೂ ಶ್ವೇತಕುಮಾರನ ಪ್ರೇತದ ನಡುವಿನ ನವಿರು ಹಾಸ್ಯ ನಗೆಗಡಲಲ್ಲಿ ತೇಲಿಸಿತು.  ಶಿವಗಣ ಹಾಗೂ ಯಮಭಟರ ನಡುವಿನ ಕಾಳಗದಲ್ಲಿ ಪೈಪೋಟಿಯ ಕುಣಿತ, ದಿಗಿಣ, ಪ್ರದರ್ಶನದ ಅಬ್ಬರವನ್ನು ಹೆಚ್ಚಿಸಿತು.

Advertisement

ಕೊನೆಯಲ್ಲಿ ನಡೆದ ಪ್ರಸಂಗ ರಕ್ತರಾತ್ರಿ. ಗದಾಯುದ್ಧದಲ್ಲಿ ಭೀಮನಿಂದ ತೊಡೆ ಮುರಿಸಿಕೊಂಡು ಹತಾಶನಾಗಿ ರಣರಂಗದಲ್ಲಿ ಬಿದ್ದ ದುರ್ಯೋಧನನ ಕೊನೆಯಾಸೆಯಾನ್ನು ನೆರವೇರಿಸಲು ಅಶ್ವತ್ಥಾಮನು ರಾತ್ರಿ ಹೊತ್ತು ಪಾಂಡವರ ಶಿಬಿರಕ್ಕೆ ನುಗ್ಗಿ ಪಾಂಡವರ ಬದಲು ಉಪಪಾಂಡವರ ತಲೆಯನ್ನು ಕಡಿಯುತ್ತಾನೆ. ಶಿಶು ಹತ್ಯೆಯನ್ನು ಮಾಡಿದ್ದಕ್ಕಾಗಿ ಅಶ್ವತ್ಥಾಮನಿಗೆ ಕೃಷ್ಣನು ಮೈಯೆಲ್ಲಾ ವ್ರಣ ತುಂಬಿ ಸಾವಿರ ವರ್ಷಗಳ ಕಾಲ ಹೀನಾಯವಾಗಿ ಬದುಕುವ ಶಾಪ ಕೊಡುತ್ತಾನೆ. ಅಶ್ವತ್ಥಾಮ ಪಾತ್ರಧಾರಿಯ ಸ್ವಷ್ಟವಾದ ಮಾತುಗಾರಿಕೆ, ಹೆಜ್ಜೆಗಾರಿಕೆ, ಕುಣಿತ, ದಿಗಿಣ ರಂಗದಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತು. ಅಷ್ಟಲಕ್ಷ್ಮೀಯರ ಪಾತ್ರ ನಿರ್ವಹಣೆಯೂ ಸೊಗಸಾಗಿತ್ತು.

ಶಿವಶಕ್ತಿ, ದೃಷ್ಟದ್ಯುಮನ, ಭೀಮ, ಕೃಷ್ಣ ಹಾಗೂ ಇತರ ಪೋಷಕ ಪಾತ್ರಧಾರಿಗಳು ಚಿಕ್ಕ ಪಾತ್ರಗಳನ್ನು ಚೊಕ್ಕದಾಗಿ ಅಭಿನಯಿಸಿದರು.

ಹಿಮ್ಮೇಳದಲ್ಲಿ ದಯಾನಂದ ಕೋಡಿಕ್ಕಲ್‌, ಅಮೃತಾ ಅಡಿಗ ಹಾಗೂ ಗಿರೀಶ್‌ ರೈ ಕಕ್ಯಪದವು ಮಾಧುರ್ಯದ ಭಾಗವತಿಕೆಯಿಂದ ಮನರಂಜಿಸಿದರು. ಕಕ್ಯಪದವು ಹಾಗೂ ಅಡಿಗರ ದ್ವಂದ್ವ ಗಾಯನ ಹೆಚ್ಚಿನ ಮೆರುಗನ್ನು ತಂದುಕೊಟ್ಟಿತು. ಚೆಂಡೆ-ಮದ್ದಳೆಗಳಲ್ಲಿ ಹರೀಶ್‌ ರಾವ್‌ ಅಡೂರು, ಪ್ರಶಾಂತ್‌ ಶೆಟ್ಟಿ ವಗೆನಾಡು, ಮಯೂರ್‌ ನಾಯ್ಕ ಸಹಕರಿಸಿದರು.

ನರಹರಿ ರಾವ್‌ ಕೈಕಂಬ

Advertisement

Udayavani is now on Telegram. Click here to join our channel and stay updated with the latest news.

Next