Advertisement
ಹಿಮ್ಮೇಳದಲ್ಲಿ ಭಾಗವತರಾಗಿ ಯುವ ಪೀಳಿಗೆಯ ಹೃದಯ ಸಾಮ್ರಾಜ್ಯದಲ್ಲಿ ಗಟ್ಟಿಯಾಗಿ ತಳವೂರಿದ, ಯುವಕರಿಗೆ ಯಕ್ಷಗಾನದ ಆಸಕ್ತಿಯನ್ನು ಹುಟ್ಟಿಸಿದ ಯಕ್ಷ ಚಕ್ರೇಶ್ವರ ಬಿರುದಾಂಕಿತ ಪಟ್ಲ ಸತೀಶ್ ಶೆಟ್ಟಿ ಅವರು ಯಕ್ಷಗಾನಾಮೃತದ ಸವಿಯನ್ನು ಉಣಬಡಿಸಿದರು. ದೇವಿಯ ಕಾರುಣ್ಯ ನಮ್ಮೊಳಗೆ, ಎಲೆಲೆ ನಾರಿ, ಅತ್ತಿತ್ತ ನೋಡುತ್ತ, ಪಾಹಿ ಜಗನ್ಮಾತೆ ಎಂಬಿತ್ಯಾದಿ ಪದಗಳ ಸಾಲುಗಳನ್ನು ವಿವಿಧ ರಾಗಗಳಿಂದ ಹಾಡಿ ನಿರಂತರ ನಾಲ್ಕು ಗಂಟೆಗಳ ಪ್ರದರ್ಶನದಿಂದ ಸಾವಿರಕ್ಕೂ ಅಧಿಕ ಸಂಖ್ಯೆಯ ಕಲಾರಸಿಕರನ್ನು ತನ್ನತ್ತ ಸೆಳೆದೊಯ್ದು ರಾಗಮಾಲಿಕೆಯ ಹಾರಗಳಿಂದ ಬಂಧಿಸಿದ ಹಿರಿಮೆಯ ಹಾಡುಗಾರಿಕೆ ಅವರದ್ದಾಗಿತ್ತು. ಚೆಂಡೆ-ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಇನ್ನ ಆನಂದ ಶೆಟ್ಟಿ ಹಾಗೂ ಚಕ್ರತಾಳದಲ್ಲಿ ಶ್ಯಾಮ ಶೆಟ್ಟಿ ಅವರು ಸಹಕರಿಸಿದರು.
Related Articles
Advertisement
ವ್ಯಾಳಾಸುರನಾಗಿ ದಿವಾಕರ ಶೆಟ್ಟಿ ಕುರ್ಲಾ ಅವರು ತನ್ನ ಪ್ರವೇಶದಿಂದ ಹಿಡಿದು ಇತಿಮಿತಿಯ ಗಮನಾರ್ಹ ಮಾತುಗಳಿಂದ ಕುಣಿಕೆಯಿಂದ ಪ್ರೇಕ್ಷಕರ ಗಮನ ಸೆಳೆದರು. ಮಹಿಷಾಖ್ಯನಾಗಿ ರಮೇಶ್ ಶೆಟ್ಟಿ ಕಡಂದಲೆ ಬಣ್ಣದ ವೇಷದ ಯಕ್ಷಗಾನದ ಪರಂಪರೆಯ ಕೆಲವು ಕಲಾವಿದರನ್ನು ನೆನಪಿಸುವಂತೆ ಮಾಡಿದರು. ಮಾತಿನ ಗತ್ತುಗಾರಿಕೆಯಿಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಾರದನಾಗಿ ಸಿಎ ರಮೇಶ್ ಶೆಟ್ಟಿ, ಷಣ್ಮುಖನಾಗಿ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು ಶಚಿದೇವಿಯಾಗಿ ಸೌಮ್ಯಾ ಶೆಟ್ಟಿ ಅವರು ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು.
ಶ್ರೀ ದೇವಿ ಮೂಕಾಂಬಿಕೆಯಾಗಿ ಭರವಸೆಯ ಕಲಾವಿದೆ, ಪತ್ತನಾಜೆ ತುಳುಚಿತ್ರದ ನಾಯಕಿ ರೇಷ್ಮಾ ಶೆಟ್ಟಿ ಅವರು ಪ್ರಸಂಗದ ನಾಯಕಿಯಾಗಿಯೂ ಪ್ರಸಂಗದುದ್ದಕ್ಕೂ ಕೋಶಾವೇಷದ ರೋಶದ ಕುಣಿಕೆಯಿಂದ, ಮೋಹಕ ಅಭಿನಯದಿಂದ, ಸ್ಪಷ್ಟ ಮಾತುಗಳಿಂದ ಅಚ್ಚುಕಟ್ಟಾಗಿ ತಮ್ಮ ಪ್ರದರ್ಶನದಿಂದ ಕಲಾರಸಿಕರ ಮನಗೆದ್ದರು. ಕಾಳಿಯಾಗಿ ಸಮಹಿತ ಶೆಟ್ಟಿ, ಮಂತ್ರವಾದಿಯಾಗಿ ಪ್ರಕಾಶ್ ಶೆಟ್ಟಿ ನಲ್ಯಗುತ್ತು, ದೇವೇಂದ್ರನ ದೂತನಾಗಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಪುರುಹಿತ ಮುನಿ, ಡೊಂಬರಾಟದವರಾಗಿ ಪ್ರಕಾಶ್ ಕುಂಠಿನಿ, ಮಹೇಶ್ ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರ್ ಅವರು ಗಮನ ಸೆಳೆದರು. ಪ್ರೇತ ಹಿಡಿದ ಮಹಿಳೆಯಾಗಿ ನವೀನ್ ಶೆಟ್ಟಿ ಇನ್ನಬಾಳಿಕೆ, ಪತಿಯಾಗಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರು ಪ್ರಸಂಗದಲ್ಲಿ ಬಂದ ವಿಶೇಷ ಪಾತ್ರಗಳಲ್ಲಿ ರಂಜಿಸಿದರು.ನಿರಂತರ ನಾಲ್ಕು ವರ್ಷಗಳಿಂದ ನಾಲ್ಕು ಪ್ರಸಂಗಗಳನ್ನು ಆಡಿತೋರಿಸಿದ ಸಂಘದ ಪ್ರಯತ್ನ ಶ್ಲಾಘನೀಯ. ಆದರೂ ಯಕ್ಷಗಾನದ ಪರಂಪರೆಗೆ ನೀಡಬೇಕಾದ ಗೌರವ ಸಲ್ಲಲೇ ಬೇಕು. ಅದಕ್ಕಾಗಿ ಕಲಾವಿದರು ವೃತ್ತಿಪರ ಅಥವಾ ಹವ್ಯಾಸಿಯೇ ಆಗಿರಲಿ. ರಂಗ ನಡೆ, ರಂಗ ಮಾಹಿತಿ, ಭಾಷೆಯ ಪ್ರಜ್ಞೆಗೆ ಗಮನ ಕೊಟ್ಟು ವ್ಯವಹರಿಸಿದರೆ ಪ್ರದರ್ಶನ ಉತ್ತಮ ಗುಣಮಟ್ಟದಲ್ಲಿ ಸಾಗಲು ಸಾಧ್ಯ. ಮುಂಬಯಿಯಲ್ಲಿ ಬಂಟ ಸಮಾಜದಲ್ಲಿ ವಿಶೇಷ ಪ್ರತಿಭೆಗಳಿದ್ದು ಅವರಿಗೂ ಇಂತಹ ಸಂದರ್ಭದಲ್ಲಿ ವೇದಿಕೆಯನ್ನು ಕಲ್ಪಿಸಿಕೊಡಬೇಕು. ಕೇವಲ ಒಂದೇ ಪ್ರದರ್ಶನವಿರಲಿ ಪಾತ್ರವಹಿಸಿದರೂ ತಮ್ಮ ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ ಅದಕ್ಕೆ ನ್ಯಾಯ ನೀಡುವ ಕೆಲಸ ನಮ್ಮಿಂದಾಗಬೇಕು. ಯಕ್ಷಗಾನದ ಪರಂಪರೆ ಉಳಿಸಿ-ಬೆಳೆಸುವಲ್ಲಿ ನಾವು ಟೊಂಕಕಟ್ಟಿ ನಿಂತರೆ ಅದೇ ನಾವು ಕಲಾಮಾತೆಗೆ ಸಲ್ಲಿಸುವ ಗೌರವ, ಪೂಜೆಯಾಗುತ್ತದೆ. ದಯಾಮಣಿ ಶೆಟ್ಟಿ ಎಕ್ಕಾರು