Advertisement

ಯಕ್ಷನಾಗನ ಮನೋಹರ 60 ವಸಂತಗಳು

07:15 PM Aug 22, 2019 | Team Udayavani |

ಯಕ್ಷರಂಗ ಕಂಡ ಓರ್ವ ಶ್ರೇಷ್ಠ ಕಲಾವಿದ ಡಿ. ಮನೋಹರ್‌ ಕುಮಾರ್‌. ವೇಷಧಾರಿ, ಪ್ರಸಂಗಕರ್ತ, ಮೇಳದ ಯಜಮಾನ, ಸಂಚಾಲಕ…ಹೀಗೆ ಮನೋಹರರ ಯಕ್ಷಯಾನವೂ ಬಹು ಆಯಾಮದಿಂದ ಕೂಡಿದ ಒಂದು ಮನೋಹರ ಯಾನ. ಪ್ರಸ್ತುತ ಮನೋಹರರಿಗೆ 60ರ ಹರೆಯ. ಈ ನಿಮಿತ್ತ ಅವರೇ ಬರೆದ ಕೆಲವು ಪ್ರಸಂಗಗಳ ಪ್ರದರ್ಶನಗಳನ್ನು ಅಲ್ಲಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಮನೋಹರರ ಮಾತೃಭಾಷೆ ಮಲಯಾಳಂ,ಆಡು ಭಾಷೆ ತುಳು.ಅವರು ಶಾಲಾ ವಿದ್ಯಾಭ್ಯಾಸದಿಂದಲೂ ವಂಚಿತರಾದವರು.ಆದರೆ ತುಳು ಕನ್ನಡ ಯಕ್ಷಗಾನ ಪ್ರಸಂಗಗಳೆರಡರಲ್ಲೂ ಅದ್ಭುತ ಸಾಧನೆಗೈದ ಪ್ರತಿಭಾನ್ವಿತ ಕಲಾವಿದರಿವರು.

ಬಾಲ ಕಲಾವಿದನಾಗಿದ್ದಾಗ ಸುರತ್ಕಲ್‌ ಮೇಳದಲ್ಲಿ ಶೇಣಿ, ತೆಕ್ಕಟ್ಟೆಯವರ ಸಾಹಚರ್ಯ .ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದ “ಸತ್ಯದಪ್ಪೆ ಚೆನ್ನಮ್ಮ’ ಪ್ರಸಂಗದಲ್ಲಿ ತಾರಾನಾಥ ಬಲ್ಯಾಯರೊಂದಿಗಿನ ಜೊತೆ ವೇಷ ಯಕ್ಷರಂಗದಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.

ಸಮಾನ ಮನಸ್ಕ ಯುವ ಕಲಾವಿದರ ತಂಡ ಕಟ್ಟಿಕೊಂಡು ನಾಲ್ಕು ದಶಕಗಳ ಹಿಂದೆ ನಡೆಸಿದ್ದ ಯಕ್ಷ ಪರ್ಯಟನೆ ಮನೋಹರರಲ್ಲಿದ್ದ ಕಲಾವಿದನನ್ನು, ಕತೆಗಾರನ್ನು, ರಂಗ ನಿರ್ದೇಶಕನನ್ನು, ಸಂಘಟಕನನ್ನು ಯಕ್ಷ ಪ್ರಪಂಚಕ್ಕೆ ಪರಿಚಯಿಸಿತು.

ತೆಂಕು,ಬಡಗಿನ ಏಳೆಂಟು ಟೆಂಟಿನ ಮೇಳಗಳು ತಿರುಗಾಟ ಮಾಡುತ್ತಿದ್ದ ಯಕ್ಷಗಾನದ ಅಬ್ಬರ ಮುಗಿಲು ಮುಟ್ಟುತ್ತಿದ್ದ ಕಾಲ ಒಂದಿತ್ತು. ತುಳು ಕಾಲ್ಪನಿಕ ಜಾನಪದ ಶೈಲಿಯ ಹೊಸ ಪ್ರಸಂಗಗಳು ಹುಟ್ಟಿ ಬೆಳೆಯುವ ಅವಕಾಶ ಸಮೃದ್ಧವಾಗಿದ್ದ ಸಮಯವದು.ಕದ್ರಿ ಮೇಳದ ಗೆಜ್ಜೆದ ಪೂಜೆ ಪ್ರಸಂಗ ಅಂದು ಹೊಸ ದಾಖಲೆ ನಿರ್ಮಿಸಿತ್ತು. ಮನೋಹರ ಅವರ ಪರಿಕಲ್ಪನೆಯ ಕೌತುಕಮಯ ಸನ್ನಿವೇಶಗಳನ್ನೊಳಗೊಂಡ ಈ ಪ್ರಸಂಗ ಭಾಗ 2 ಕೂಡಾ ಅಷ್ಟೇ ಖ್ಯಾತಿಯನ್ನು ಪಡೆದಿತ್ತು.

Advertisement

ಈ ಪ್ರಸಂಗದಲ್ಲಿ ಮನೋಹರರ ನಾಗನ ಪಾತ್ರ ಹೊಸ ಪ್ರೇಕ್ಷಕರನ್ನು ಯಕ್ಷರಂಗಕ್ಕೆ ಸೆಳೆಯುವಂತೆ ಮಾಡಿತು.ಅಸಂಖ್ಯ ಅಭಿಮಾನಿಗಳನ್ನು ಸೃಷ್ಟಿಸಿತು. ಕ್ರೌರ್ಯಭರಿತ ಪ್ರಧಾನ ಪಾತ್ರ ಅದು. ಕಥಾಂತ್ಯದಲ್ಲಿ ನಾಗನ ಕ್ರೂರತೆಗೆ ಕಾರಣವಾದ ಕತೆ ಮತ್ತೆ ತೆರೆದುಕೊಂಡಾಗ ಕರುಣಾರಸಭರಿತ ಅಭಿನಯ,ಮಾತುಗಾರಿಕೆ ನಿಬ್ಬೆರಗೊಳಿಸುತ್ತದೆ.

ನವರಸಗಳನ್ನು ಪರಿಣಾಮಕಾರಿಯಾಗಿ,ಸಮರ್ಥವಾಗಿ ನಿರ್ವ ಹಿಸಬಲ್ಲ ಬೆರಳೆಣಿಕೆಯ ಕಲಾವಿದರಲ್ಲಿ ಮನೋಹರ ಅಗ್ರಪಂಕ್ತಿ ಯಲ್ಲಿ ಇದ್ದಾರೆ.ಕಂಸವಧೆಯಲ್ಲಿ ಕೃಷ್ಣನಾಗಿ ವಿಜಯನೊಂದಿಗೆ ಹಾಸ್ಯ,ಗೋಪಿಕೆಯರೊಂದಿಗೆ ಶ್ರಂಗಾರ ,ಖಳರೊಂದಿಗೆ ವೀರರಸದಲ್ಲಿ ಮಿಂಚಬಲ್ಲರು.ಕಂಸನಾಗಿಯೂ ಮೆರೆಯಬಲ್ಲರು.

ತುಳು ಕನ್ನಡ ಪೌರಾಣಿಕ, ಚಾರಿತ್ರಿಕ, ಜಾನಪದ ,ಕಾಲ್ಪನಿಕ ಪ್ರಸಂಗಗಳೆಲ್ಲದರಲ್ಲೂ ಯಾವುದೇ ಪಾತ್ರಗಳನ್ನು ತನ್ನದೇ ಶೈಲಿಯಲ್ಲಿ ನಿರ್ವಹಿಸುವ ಕಲೆ ಸಿದ್ಧಿಸಿದೆ.ಕಥಾನಾಯಕ, ಖಳನಾಯಕ,ಪುಂಡು ವೇಷ,ಎದುರು ವೇಷ ಹೀಗೆ ಎಲ್ಲಾ ವೇಷಗಳಿಗೆ ಅ+ ಅಂಕ ನಿಶ್ಚಿತವಾಗಿ ಪಡೆಯುವವರು.ಇನ್ನು ಬಣ್ಣಗಾರಿಕೆ ಹಾಗೂ ವೇಷಭೂಷಣ ಕಟ್ಟಿಕೊಳ್ಳುವುದರಲ್ಲೂ ಅವರದೇ ಮಾದರಿ.ಹೆಜ್ಜೆಗಾರಿಕೆ,ಕುಣಿತಗಳಲ್ಲೂ ಸ್ವಂತಿಕೆ. ಶತ್ರುಪ್ರಸೂದನ, ವಿಷ್ಣು, ಸುದರ್ಶನ, ಜಮದಗ್ನಿ, ಭಾರ್ಗವ , ಕಾರ್ತವೀರ್ಯ…ಹೀಗೆ ಎಲ್ಲ ಪೌರಾಣಿಕ ಪ್ರಸಂಗಗಳನ್ನು ಈಗಲೂ ಲೀಲಾಜಾಲವಾಗಿ ನಿರ್ವಹಿಸಬಲ್ಲರು. ಹದಿನಾರರ ತರುಣನಾಗಿ, ಎಪ್ಪತ್ತರ ಮುದುಕನಾಗಿ ಪಾತ್ರೋಚಿತ ಮಾತು, ಅಭಿನಯಗಳಿಂದ ಪ್ರೇಕ್ಷಕರನ್ನು ಸೆಳೆಯಬಲ್ಲರು. ಗೆಜ್ಜೆದ ಪೂಜೆ, ಪೂತ ಪೂಜೆ, ತಿರುಮಲೆತ ತೀರ್ಥ, ಶ್ರೀಪತಿ ಶ್ರೀಮತಿ, ಶ್ರೀ ಮಾತಾ ವೈಷ್ಣೋದೇವಿ ಸೇರಿ 31 ಪ್ರಸಂಗಗಳು ಅವರ ಲೇಖನಿಯಿಂದ ಬಂದಿವೆ.

ಇವರ ಅಭಿನಯ ಸಾಮರ್ಥ್ಯ ,ಮನೋಧೈರ್ಯ ನಿಜವಾಗಿ ಪ್ರಕಟವಾದದ್ದು ಇವರ ಚಿಟ್ಟಾಣಿ ಅವರೊಂದಿಗೆ ಸ್ಪರ್ಧಾತ್ಮಕ ಜೊತೆ ಹಾಗೂ ಎದುರು ವೇಷ ಮಾಡಿದಾಗ.ಚಂಡ -ಮುಂಡ,ಕೌರವ-ಭೀಮ ಸರಿಸಮರಾಗಿ ರಂಗದಲ್ಲಿ ವಿಜೃಂಭಿಸಿದ ದಿನಗಳು ಅವಿಸ್ಮರಣೀಯ.

ಪ್ರೇಕ್ಷಕರನ್ನು ಹಿಡಿದಿರಿಸಲು ಏನು ಮಾಡಬೇಕೆನ್ನುವ ನಾಡಿಮಿಡಿತ ಬಲ್ಲ ಕಸಬುದಾರ ಇವರು.ರಂಗದಲ್ಲಿ ಉದಾಸೀನ ಎಂದರೇನೆಂದರಿಯದ ನಿಷ್ಠಾವಂತ ರಂಗ ಕರ್ಮಿ. ಸರ್ವ ಸಮರ್ಥ ರಂಗ ನಿರ್ದೇಶಕ ರಿವರು.ಇವರ ಪ್ರಸಂಗಗಳೆಲ್ಲವೂ ರಂಗದಲ್ಲಿ ಮಿಂಚಿವೆ.ಸಾರ್ವಕಾಲಿಕ ಕಲಾಕೃತಿಗಳಾಗಿ ಉಳಿದಿವೆ.

ಕದ್ರಿ ನವನೀತ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next