ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹುಟ್ಟಿ, ಬೆಳೆದು, ಶಿಕ್ಷಣ ಪೂರೈಸಿ ಧರ್ಮಾಧಿಕಾರಿಗಳಾದ ದಿ.ರತ್ನವರ್ಮ ಹೆಗ್ಗಡೆ ಹಾಗೂ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಆಶ್ರಯದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ಉದ್ಯೋಗ ನಡೆಸಿ, ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಹಾಗೂ ಶಾಂತಿವನದ ಕಾರ್ಯದರ್ಶಿಯಾಗಿ 25 ವರ್ಷಗಳಿಂದ ನಿಷ್ಠೆಯಿಂದ ಪ್ರಾಮಾಣಿಕ ವಾಗಿ ಸೇವೆ ಸಲ್ಲಿಸಿ ಯಕ್ಷಗಾನ ಕ್ಷೇತ್ರದ ಚೆಂಡೆ-ಮದ್ದಳೆ ವಾದನ ಕಲಾವಿದರಾಗಿ ಬಹುಮುಖ ಸಾಧನೆಗೈದ ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಒಲಿದು ಬಂದಿದೆ.
ಯಕ್ಷಗಾನದ ಭಾಗವತರಾಗಿದ್ದ ಬಿ. ರಾಘವೇಂದ್ರ ತೋಳ್ಪಾಡಿ ತ್ತಾಯ ದಂಪತಿಯ ಪುತ್ರರಾಗಿ 1953 ಮಾರ್ಚ್ 26ರಂದು ಧರ್ಮಸ್ಥಳದಲ್ಲಿ ಜನಿಸಿದ ಸೀತಾರಾಮ ತೋಳ್ಪಾಡಿತ್ತಾಯರು ಬಿ.ಎ. ಪದವೀಧರರಾಗಿ, ಪ್ರಾಥಮಿಕ ಶಿಕ್ಷಣದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿ ವೇಷಗಾರಿಕೆ ಹಾಗೂ ಹಿಮ್ಮೇಳದಲ್ಲಿ ಅಭಿರುಚಿ ಬೆಳೆಸಿಕೊಂಡು ವಿಶೇಷ ಸಾಧನೆ ಮಾಡಿದವರು. 1972 ರಲ್ಲಿ ಶ್ರೀ ಕ್ಷೇತ್ರದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಪ್ರಾರಂಭವಾದಾಗ ಕೇಂದ್ರದ ವಿದ್ಯಾರ್ಥಿಯಾಗಿ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನದ ನಾಟ್ಯ ಹಾಗೂ ಚೆಂಡೆ, ಮದ್ದಳೆ ವಾದನಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು.
ಕಳೆದ 50 ವರ್ಷಗಳಿಂದ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆಗಳಲ್ಲಿ ಹಿಮ್ಮೇಳ ಕಲಾವಿದರಾಗಿ ನಿರಂತರ ಪರಿಶ್ರಮನಿರತ ರಾಗಿರುವ ಸೀತಾರಾಮ ತೋಳ್ಪಾಡಿತ್ತಾಯರು ಅಗ್ರಮಾನ್ಯ ಕಲಾ ವಿದರಾದ ನೆಡ್ಲೆ ನರಸಿಂಹ ಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಮಾಂಬಾಡಿ ಸುಬ್ರಹ್ಮಣ್ಯ ಭಟ…, ಪದ್ಯಾಣ ಶಂಕರನಾರಾಯಣ ಭಟ್, ಗೋಪಾಲಕೃಷ್ಣ ಕುರುಪ್ ಮೊದಲಾದ ಹಿರಿಯ ಮದ್ದಳೆವಾದಕರ ಒಡನಾಟದಲ್ಲಿ ವಿಶೇಷ ಪರಿಣತಿ ಪಡೆದರು. ಹಲವು ಅಗ್ರಮಾನ್ಯ ಭಾಗವತರ ಜತೆಯಲ್ಲಿ ಹಿಮ್ಮೇಳದಲ್ಲಿ ಸಾಥ್ ನೀಡಿ ಮೆಚ್ಚುಗೆ ಪಡೆದರು.
ತೆಂಕು-ಬಡಗು ಜೋಡಾಟ ಹಾಗೂ ಕೂಡಾಟಗಳಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ ಸೀತಾರಾಮ ತೋಳ್ಪಾಡಿತ್ತಾಯರು ಅನೇಕ ಯಕ್ಷಗಾನ, ಆಟ, ಕೂಟ, ಗಾನ ವೈಭವ, ರೂಪಕಗಳನ್ನು ನಿರ್ದೇಶಿಸಿದವರು. 100ಕ್ಕೂ ಮಿಕ್ಕಿ ಧ್ವನಿಸುರುಳಿಗಳು, ಸಿ.ಡಿ., ಡಿ.ವಿ.ಡಿ.ಗಳಲ್ಲಿ ಅವರ ಕಲಾ ನೈಪುಣ್ಯ ದಾಖಲಾಗಿದೆ. ಪ್ರಮುಖ ನಗರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
2016-17ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು. ಶಾಂತಿವನದ ಕಾರ್ಯದರ್ಶಿಯಾಗಿ ನಡೆಸಿದ ಉತ್ತಮ ಸೇವಾ ಕಾರ್ಯ ಹಾಗೂ ರಾಷ್ಟ್ರೀಯ ಯೋಗ ಸಾಧನೆಯ ದಾಖಲೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಸೀತಾರಾಮ ತೋಳ್ಪಾಡಿತ್ತಾಯರಿಂದ ಯಕ್ಷಗಾನ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಲಭಿಸುವಂತಾಗಲಿ ಎಂದು ಶುಭ ಹಾರೈಸೋಣ.
- ಸಾಂತೂರು ಶ್ರೀನಿವಾಸ ತಂತ್ರಿ, ಉಜಿರೆ