ಶಿರಸಿ: ಯಕ್ಷಗಾನ ಕನ್ನಡ ನಾಡಿನ ಶ್ರೇಷ್ಠ ಕಲೆ, ರಾಷ್ಟ್ರದ ಕಲೆ. ಒಂದು ಪರಿಪೂರ್ಣ ಕಲಾಪ್ರಕಾರಕ್ಕೆ ಏನೆಲ್ಲ ಬೇಕೋ ಅದೆಲ್ಲವೂ ಇದರಲ್ಲಿದೆ. ಯಕ್ಷಗಾನ ಕಲೆಯ ಸೀಮೋಲ್ಲಂಘನ ಆಗಲು ಎಲ್ಲರೂ ಹೆಗಲು ಕೊಡಬೇಕು ಎಂದು ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ ಹೇಳಿದರು.
ರವಿವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಿದ್ದಾಪುರದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಪ್ರತಿಷ್ಠಾನದ ದಶಮಾನೋತ್ಸವ, ಯಕ್ಷಗಾನದ ದಿಗ್ಗಜ ಗೋಡೆ ನಾರಾಯಣ ಹೆಗಡೆ ಅವರಿಗೆ ಕೊಳಗಿ ಅನಂತ ಹೆಗಡೆ ಅವರ ನೆನಪಿನ ಅನಂತಶ್ರೀ ಪ್ರಶಸ್ತಿ ಪ್ರದಾನ, ಸಂಗೀತ, ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಣ ಇಲ್ಲದೇ ಬದುಕು ಹೇಗೆ ಎಂಬುದನ್ನು ಯಕ್ಷಗಾನ ಕಲೆ ಕಲಿಸುತ್ತದೆ. ಗೋಡೆ ನಾರಾಯಣ ಹೆಗಡೆ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಭಾನುವಾರ ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಕ್ಷಗಾನಕ್ಕೆ ಒಬ್ಬರಿಗೆ ಬಂದಿದೆ. ಗೋಪಾಲ ಆಚಾರಿ ಒಬ್ಬರು ಬಿಟ್ಟರೆ ಬೇರೆ ಯಾರ ಹೆಸರೂ ಇಲ್ಲ ಇದು ಬೇಸರದ ಸಂಗತಿ ಎಂದರು. ಸಾಹಿತ್ಯ ವಲಯಕ್ಕೂ ಯಕ್ಷಗಾನಕ್ಕೂ ಒಂದು ಮಿಸ್ಸಿಂಗ್ ಲಿಂಕ್ ಆಗಿದೆ. ಯಕ್ಷಗಾನ ಕಲೆಯ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ ಇಡಲು ಪ್ರತಿಭಟನೆ ಮಾಡುವ ಸಂದರ್ಭವೂ ಆಗಿದೆ. ಅದಕ್ಕೋಸ್ಕರ ಅನೇಕ ಹೆಜ್ಜೆ ನಾವೇ ಕನ್ನಡದ ಸಾಹಿತ್ಯದ ಕಡೆಗೆ ಹೋಗಬೇಕಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಮಾತನಾಡಿ, ಕೊಳಗಿ ಅನಂತ ಹೆಗಡೆ ಅವರು ನಾನು ಬಾಲ್ಯದಿಂದಲೂ ಒಡನಾಡಿಗಳು. ಅನ್ಯೋನ್ಯತೆ ಪರಸ್ಪರ ಇತ್ತು. ಅನಂತ ಹೆಗಡೆ ಅವರು ಸ್ಥಾಪಿತ ಕಲಾವಿದರಾಗಿದ್ದರು. ಒಮ್ಮೆ ಯಕ್ಷಗಾನ ರಂಗಕ್ಕೆ ಪ್ರವೇಶ ಆದರೆ ಅದರಿಂದ ಹೊರಗೆ ಬರಲಾಗುವುದಿಲ್ಲ. ಅಂಥ ಸೆಳೆತ ಈ ಕಲೆಯಲ್ಲಿದೆ ಎಂದರು. ವಿ. ಉಮಾಕಾಂತ ಭಟ್ಟ ಕೆರೇಕೈ ಅಭಿನಂದನಾ ಮಾತುಗಳನ್ನಾಡಿ, ಗೋಡೆ ಅವರು ಯಕ್ಷಗಾನ ರಂಗದಲ್ಲಿ 65 ವರ್ಷ ಕೆಲಸ ಮಾಡಿದವರು. ಅವರ ಆರೋಗ್ಯ ಯಕ್ಷಗಾನದ ಭಾಗ್ಯ. ಗೋಡೆ ಅವರ ಯಕ್ಷಗಾನದ ಅನುಭವ. ಗೋಡೆ ಅವರ ರಂಗಭೂಮಿ ಶ್ರಮ ಯಕ್ಷಗಾನದ ಶ್ರಮ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಗೋಡೆ ಅವರ ಕೊಡುಗೆ ಅನುಪಮವಾದದ್ದು ಎಂದರು.
ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ, ಯಕ್ಷಗಾನ ಉಳಿಸಿ, ಬೆಳೆಸಲು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದರು. ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಮುಖ್ಯಸ್ಥ ಪ್ರಮೋದ ಹೆಗಡೆ ಮಾತನಾಡಿ, ಸಾವಿಗಿಂತ ಕ್ರೂರಿ, ನಾವು ಅವರನ್ನು ಮರೆತು ಹೋಗುವದು. ಆದರೆ, ಪ್ರತಿಷ್ಠಾನವು ಅನಂತ ಹೆಗಡೆ ಅವರಂಥ ಕಲಾವಿದರನ್ನು ಜೀವಂತವಾಗಿಸಿದೆ. ಗೋಡೆ ಯುಗವಾಗಿಸಿದ್ದಾರೆ ಎಂದರು. ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್. ಎಂ.ಹೆಗಡೆ ಬಾಳೇಸರ, ಕಲಾ ಪ್ರೋತ್ಸಾಹಕ ಆರ್.ಜಿ ಭಟ್ಟ ವರ್ಗಾಸರ ಪಾಲ್ಗೊಂಡರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಹರ್ಷಿತಾ ಹೆಗಡೆ, ಆದಿತ್ಯ ಹೆಗಡೆ, ಪೂರ್ವಿ ಭಟ್ಟ, ರಾಜೇಂದ್ರ ಹೆಗಡೆ, ಅನಿರುದ್ಧ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು.
ಕಾಶ್ಯಪ ಪರ್ಣಕುಟಿ ಸ್ವಾಗತಿಸಿದರು. ಭಾಗವತ ಕೇಶವ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ ಸಂದೇಶ ವಾಚಿಸಿದರು. ಗಾಯತ್ರಿ ರಾಘವೇಂದ್ರ ಸಮ್ಮಾನ ಪತ್ರ ವಾಚಿಸಿದರು. ಗಣಪತಿ ಗುಂಜಗೋಡ ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು. ಇದೇ ವೇಳೆ ಇತೀ¤ಚೆಗೆ ನಿಧನರಾದ ಹೊಸ್ತೋಟ ಮಂಜುನಾಥ ಭಾಗವತ, ಪ್ರೋ|ಎಂ.ಎ.ಹೆಗಡೆ, ಪದ್ಯಾಣ ಗಣಪತಿ ಭಟ್ಟ, ಪುನೀತ್ ರಾಜಕುಮಾರ ಅವರಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅನೇಕ ಯಕ್ಷಗಾನ ಪಾತ್ರಗಳ ಸಾಹಿತ್ಯ ಸೃಷ್ಟಿ ಆಗಬೇಕು. ನಾವು ಅದನ್ನು ಸಮಾಜದ ಮುಂದೆ ಗೊತ್ತಾಗುವ ಹಾಗೆ ಮಾಡಬೇಕು. ಆಗ ಕನ್ನಡಕ್ಕೆ ಎಂಟಲ್ಲ, ಹದಿನೆಂಟು ಜ್ಞಾನ ಪೀಠ ಬರಲಿದೆ.
ರವೀಂದ್ರ ಭಟ್ಟ ಹಿರಿಯ ಪತ್ರಕರ್ತರು
ಪ್ರಸಂಗ ಹಳತು. ಪಾತ್ರ ಶಿಲ್ಪ ಹೊಸದು. ಅಂಥ ಸತ್ವ ಪೂರ್ಣ ಕಲಾವಿದರು ಗೋಡೆ ಅವರು.
ವಿ.ಉಮಾಕಾಂತ ಭಟ್ಟ ಕೆರೇಕೈ, ವಿದ್ವಾಂಸರು
ಅನಂತ ಹೆಗಡೆ ಅವರು ನಾನು ಹಗಲು ಜೋಡಿ, ರಾತ್ರಿ ಯಕ್ಷಗಾನದಲ್ಲೂ ಜೋಡಿ. ಊಟಕ್ಕಿಲ್ಲದಿದ್ದರೂ ಆಗಿನ ಕಾಲದ ಸಂತೋಷ ಈ ಕಾಲದಲ್ಲಿ ಸಿಕ್ಕಿಲಕ್ಕಿಲ್ಲ. ಅಂಥ ಗೆಳೆತನವೂ ಇತ್ತು.
ಗೋಡೆ ನಾರಾಯಣ ಹೆಗಡೆ,
ಅನಂತಶ್ರೀ ಪ್ರಶಸ್ತಿ ಪುರಸ್ಕೃತರು.