Advertisement

ಯಕ್ಷಗಾನ ಜ್ಞಾನಪದ ಕಲೆ: ಕಮಲಾದೇವಿಪ್ರಸಾದ ಆಸ್ರಣ್ಣ

03:26 AM May 13, 2019 | sudhir |

ಉಡುಪಿ: ಯಕ್ಷಗಾನ ಜ್ಞಾನ ಕೊಡುವ ಜ್ಞಾನಪದ ಕಲೆ. ಇತರ ಎಲ್ಲ ಭಾರತೀಯ ಕಲೆಗಳನ್ನು ಒಗ್ಗೂಡಿಸಿದರೂ ಯಕ್ಷಗಾನ ಮೇರು ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ಕಮಲಾ ದೇವಿ ಪ್ರಸಾದ ಆಸ್ರಣ್ಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟದಲ್ಲಿ ಜರಗಿದ ತೆಂಕುತಿಟ್ಟು ಯಕ್ಷಗಾನದ ಸಂಯುಕ್ತ ಪ್ರತಿಭೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಅಭಿನಂದನೆ, ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನಕ್ಕೆ ಬೇರೆ ದೇಶಗಳು ಹೆಚ್ಚಿನ ಕೊಡುಗೆ ನೀಡಿರಬಹದು. ಆದರೆ ಬ್ರಹ್ಮಜ್ಞಾನಕ್ಕೆ ಕೊಡುಗೆ ಕೊಟ್ಟದ್ದು ಭಾರತ ಮಾತ್ರ ಎಂದು ಆಸ್ರಣ್ಣ ಹೇಳಿದರು.

ರಾಮಾಯಣದಿಂದ ಉನ್ನತ ಸ್ಥಾನ

ಕುವೆಂಪು ಅವರು ಅನೇಕ ಕಾವ್ಯಗಳನ್ನು ಬರೆದರೂ ಅವರು ‘ಶ್ರೀ ರಾಮಾಯಣ ದರ್ಶನಂ’ ಬರೆದ ಅನಂತರ ಅವರಿಗೆ ಉತ್ತಮ ಸ್ಥಾನಮಾನ ಸಿಕ್ಕಿತು. ಪಾರ್ತಿಸುಬ್ಬನ ನೆನಪು ಕೂಡ ರಾಮಾಣಯದಿಂದಾಗಿಯೇ ಉಳಿದಿದೆ. ವೀರಪ್ಪ ಮೊಲಿ ಅವರು ‘ರಾಮಾಯಣ ದರ್ಶನಂ’ ಬರೆದ ಅನಂತರ ಅವರೋರ್ವ ಕವಿ ಕೂಡ ಹೌದು ಎಂಬುದು ದೇಶಕ್ಕೆ ತಿಳಿಯಿತು. ಅವರಿಗೆ ಸರಸ್ವತಿ ಸಮ್ಮಾನ್‌ ಕೂಡ ದೊರೆಯಿತು. ಪುರುಷೋತ್ತಮ ಪೂಂಜ ಅವರು ‘ಮಾನಿಷಾದ’ದಿಂದಾಗಿಯೇ ಉತ್ತಮ ಸ್ಥಾನಮಾನ ಪಡೆದುಕೊಂಡಿದ್ದಾರೆ.

Advertisement

ರಾಮಾಯಣದ ಬಗ್ಗೆ ಕೃತಿ ರಚಿಸಿದವರಿಗೆ ಉತ್ತಮ ಸ್ಥಾನಮಾನಗಳು ದೊರೆಯುತ್ತವೆ ಎಂಬುದಕ್ಕೆ ಇದು ಉದಾಹರಣೆ ಎನ್ನು ವುದನ್ನು ಆಧ್ಯಾತ್ಮಿಕವಾಗಿ ನಾವು ತಿಳಿದು ಕೊಳ್ಳ ಬಹುದಾಗಿದೆ ಎಂದು ಕಮಲಾ ದೇವೀಪ್ರಸಾದ ಆಸ್ರಣ್ಣ ಹೇಳಿದರು.

ಸಾಹಿತ್ಯವೇ ಪ್ರಧಾನ

ಭಾಗವತಿಕೆಯಲ್ಲಿ ರಾಗ ಬೇಕು. ಆದರೆ ಸಾಹಿತ್ಯ ಪ್ರಧಾನ. ಸಾಹಿತ್ಯಕ್ಕೆ ಲೋಪವಾಗದಂತೆ ಹಾಡುವುದೇ ಕವಿಗೆ ಸಲ್ಲಿಸುವ ಗೌರವ. ಬೊಟ್ಟಿಗೆರೆ ಪುರುಷೋತ್ತಮ ಪೂಂಜ ಅವರು ನಿರ್ದೇಶನ ಮತ್ತು ಕವಿಯಾಗಿ ಎಲ್ಲ ಪ್ರಾಕಾರ ತಿಳಿದಿರುವ ಶ್ರೇಷ್ಠ ಕವಿ, ವಾಗ್ಮಿ ಮತ್ತು ಭಾಗವತ ಎಂದು ಪಟ್ಲ ಸತೀಶ ಶೆಟ್ಟಿ ಹೇಳಿದರು.

ಸಾಹಿತ್ಯ ವಿಮರ್ಶಕ ಪ್ರೊ| ವರದರಾಜ ಚಂದ್ರಗಿರಿ ಅವರು ‘ಕನ್ನಡ ಸಾಹಿತ್ಯ ಲೋಕದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಯಕ್ಷಗಾನ ಕಾವ್ಯದ ಸ್ಥಾನಮಾನ’ ವಿಷಯವಾಗಿ ಕಾವ್ಯಾ ವಲೋಕನ ಮಾಡಿದರು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್‌ ರಾವ್‌, ಕಾರ್ಯದರ್ಶಿ ಮುರಳಿ ಕಡೆಕಾರ್‌ ಉಪಸ್ಥಿತರಿದ್ದರು.

ಕಲಾರಂಗದ ಉಪಾಧ್ಯಕ್ಷ ಎಸ್‌.ವಿ. ಭಟ್ ಸ್ವಾಗತಿಸಿದರು. ಭುವನಪ್ರಸಾದ್‌ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ನಟರಾಜ್‌ ಉಪಾಧ್ಯ ವಂದಿಸಿದರು.

ಸಂವಾದ ಗೋಷ್ಠಿಯಲ್ಲಿ ಪ್ರಸಿದ್ಧ ವೇಷಧಾರಿ ವಾಟೆಪಡ್ಪು ವಿಷ್ಣು ಶರ್ಮಾ, ಕಲಾವಿಮರ್ಶಕ ಕೃಷ್ಣಪ್ರಕಾಶ ಉಳಿತ್ತಾಯ, ಯಕ್ಷಗಾನ ವೇಷಧಾರಿಗಳಾದ ಸುನಿಲ್ ಪಲ್ಲಮಜಲು, ಸಾಯಿಸುಮಾ ಎಂ. ನಾವಡ, ಕಲಾಸಕ್ತ ಲೇಖಕ ಪು.ಗುರುಪ್ರಸಾದ್‌ ಭಟ್ ಪಾಲ್ಗೊಂಡಿದ್ದರು. ಅರ್ಥಧಾರಿ ವಾಸುದೇವ ರಂಗಾಭಟ್ಟ ಸಂವಾದ ಸಂಯೋಜಿಸಿದರು.

ಕೃಷಿಕರಿಂದ ಯಕ್ಷಗಾನ ಉಳಿವು

ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಭಾಗವತ ಪಟ್ಲ ಸತೀಶ ಶೆಟ್ಟಿ ಅವರು ಮಾತನಾಡಿ, ‘ಯಕ್ಷಗಾನ ಕೃಷಿಕರೇ ಉಳಿಸಿದ ಕಲೆ. ಶಾಲೆಗಳಿಗೆ ಹೋಗ ದವರು ಕೂಡ ದೊಡ್ಡ ಕಲಾವಿದರು, ವಿದ್ವಾಂಸರಾದರು. ಅನಂತರ ಪಂಡಿತರು ಬಂದರು. ಮತ್ತಷ್ಟು ಸಂಸ್ಕಾರ ಬೆಳೆಯಿತು. ಶಾಸ್ತ್ರೀಯತೆಗೆ ಒಳಪಡಿಸುವ ಪ್ರಯತ್ನ ಕೂಡ ನಡೆದವು. ಅದು ಕೂಡ ಈಗ ಪರಿಪೂರ್ಣವಾಗುತ್ತಿದೆ’ ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next