Advertisement

ಯಕ್ಷಗಾನವು ದೈವತ್ವದ ಸ್ಥಾನಮಾನ ಹೊಂದಿದೆ: ಸಚ್ಚಿದಾನಂದ ಶೆಟ್ಟಿ

01:30 PM Aug 17, 2019 | Suhan S |

ಮುಂಬಯಿ, ಆ. 16: ಭಾರತದ ನೆಲದಲ್ಲಿ ಸಿಗುವಷ್ಟು ಪ್ರಾಚೀನ ಜ್ಞಾನ ರಾಶಿ, ಸಂಸ್ಕೃತಿಯ ಶ್ರೇಷ್ಠತೆ ಬೇರೆಲ್ಲೂ ಸಿಗದು. ಆದ್ದರಿಂದಲೇ ನೂರಾರು ವರ್ಷ ಅಳ್ವಿಕೆ ಮಾಡಿದ ಅಂಗ್ಲರಿಗೆ ನಮ್ಮ ಸಂಸ್ಕಾರ, ಸಂಪ್ರದಾಯಗಳನ್ನು ದೋಚಲು ಅಸಾಧ್ಯವಾಯಿತು. ಮನಸ್ಸಿಗೆ ಶಾಂತ ಸ್ಥಿತಿಯನ್ನು ಒದಗಿಸಿ ರಸಾನುಭವದ ಮೂಲಕ ಸತ್ಯದರ್ಶನ ನೀಡುವ ಯಕ್ಷಗಾನವು ದೈವತ್ವ ಸ್ಥಾನ ಹೊಂದಿದೆ ಎಂದು ರಾಜಕೀಯ ಯುವ ನೇತಾರ ಸಚ್ಚಿದಾನಂದ ಶೆಟ್ಟಿ, ಮುನ್ನಲಾಯಿ ಗುತ್ತು ಅವರು ತಿಳಿಸಿದರು

Advertisement

ಆ. 15ರಂದು ಅಪರಾಹ್ನ ಭಾಯಂದರ್‌ ಪೂರ್ವದ ನವಘರ್‌ ಕ್ರಾಸ್‌, ಗುರುದ್ವಾರ ರೋಡ್‌ ಸಮೀಪದಲ್ಲಿರುವ ಲೋಕಮಾನ್ಯ ತಿಲಕ್‌ ಸಭಾಗೃಹದಲ್ಲಿ ಭಾಯಂದರ್‌ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ವೃಂದ ಮತ್ತು ಆರಾಧನಾ ಫ್ರೆಂಡ್ಸ್‌ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜರಗಿದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿ ಕುಂದಾಪುರ ಇದರ ಕಲಾವಿದರಿಂದ ಮೇಘ ಮಯೂರಿ ಎಂಬ ಯಕ್ಷಗಾನ ಬಯಲಾಟದ ಮಧ್ಯೆ ಆಯೋಜಿಸಿದ್ದ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಬಲಿಷ್ಠ ರಾಷ್ಟ್ರವನ್ನಾಗಿಸಲು ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ದೇಶ ವಿಶ್ವ ಶಕ್ತಿಯಾಗಿ ಮೆರೆಯುತ್ತಿದೆ. ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ದೇಶದ ಸಮಸ್ತ ಜನಾಂಗದ ಕಲ್ಯಾಣಕ್ಕೆ ನಮ್ಮೆಲ್ಲರ ಸಮರ್ಪಣ ಭಾವನೆ ಮುಖ್ಯವಾಗಿದೆ ಎಂದು ಹೇಳಿದರಲ್ಲದೆ ಸ್ವಾತಂತ್ರ್ಯೋತ್ಸವದ ಮತ್ತು ರಕ್ಷಾ ಬಂಧನದ ಶುಭಾಶಯಗಳನ್ನು ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಉದ್ಯಮಿ ಅಶೋಕ್‌ ಶೆಟ್ಟಿ ಅವರು ಮಾತನಾಡಿ, ಕಲೆಗೆ ಜೀವ ತುಂಬಿ ಮೌಲ್ಯಗಳನ್ನು ವೃದ್ಧಿಸುವ ಕಲಾವಿದರು ಸಾಮಾಜಿಕ ಜನ ಜಾಗೃತಿಯ ಮಾರ್ಗದರ್ಶಕರು. ಆಚಾರ, ವಿಚಾರ, ಹೊಂದಣಿಕೆಯಿಂದ ನಾಡು ನುಡಿಯ ವಿಭಿನ್ನ ಕಲಾ ಪ್ರಕಾರಗಳನ್ನು ಸುಭದ್ರವಾಗಿರಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕೆಂದು ವಿನಂತಿಸಿದರು. ಸಮಾರಂಭದಲ್ಲಿ ಮಂಡಳಿಯ ಭಾಗವತರಾದ ಕೊಕ್ಕರ್ಣೆ ಸದಾಶಿವ ಅಮೀನ್‌, ಕಲಾವಿದ ಕೋಡಿ ವಿಶ್ವನಾಥ ಗಾಣಿಗ, ಸಮಾಜ ಸೇವಕ ಸುಧಾಕರ ಶೆಟ್ಟ ಬಿಯಾಲಿ ದಂಪತಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಸಾತಿಂಜ ಜನಾದ‌ರ್ನ ಭಟ್, ಚೇತನ್‌ ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಶುಭ ಹಾರೈಸಿ ಮಾತನಾಡಿದರು. ಪತ್ರಕರ್ತ ಉಮೇಶ್‌ ಕೆ. ಅಂಚನ್‌ ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಕಲಾಪೋಷಕರಾದ ಸಂತೋಷ ಪ್ರಕಾಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ನಾರಾಯಣ ಸುವರ್ಣ, ಪ್ರೇಮಾ ಹೆಗ್ಡೆ, ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಅಯ್ಯಪ್ಪ ಆರಾಧನಾ ವೃಂದ, ಆರಾಧನಾ ಫ್ರೆಂಡ್ಸ್‌ ಇದರ ಸರ್ವ ಸದಸ್ಯರು, ಮಹಿಳಾ ಸದಸ್ಯೆಯರು, ಪರಿಸರದ ಮಿತ್ರ ಬಳಗದವರು ಸಹಕರಿದರು. ಕಾರ್ಯಕ್ರಮದ ಕೊನೆಗೆ ಸ್ಥಳೀಯ ನಗರ ಸೇವಕ ಗಣೇಶ ಶೆಟ್ಟಿ ಅವರ ಪ್ರಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು, ತುಳು ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

 

ಚಿತ್ರ -ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next