Advertisement

ನನಗೆ ಸಂಸ್ಕಾ ರ ಕೊಟ್ಟಿದ್ದೇ ಯಕ್ಷ ಗಾನ, ಅದೊಂದು ರಮ್ಯಾದ್ಭುತ ಲೋಕ: ನಟ ರಾಮಕೃಷ್ಣ

11:19 AM Nov 04, 2024 | Team Udayavani |

ಕುಂದಾಪುರ: ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ನಾನು ಸಂಸ್ಕಾರವನ್ನು ಕಲಿತದ್ದು ಯಕ್ಷಗಾನ ಕಲೆಯ ಮೂಲಕ. ಯಕ್ಷಗಾನ ಮತ್ತು ಸಿನೆಮಾ ಎರಡನ್ನೂ ನೋಡಿರುವ ನನ್ನ ಪ್ರಕಾರ, ಯಕ್ಷಗಾನ ಕಲಾವಿದರ ಮುಂದೆ ಸಿನೆಮಾ
ನಟರು ಏನೇನೂ ಅಲ್ಲ. ನಾವು ಬರೆದದ್ದನ್ನು ಓದುವುದು, ಯಕ್ಷಗಾನ ಕಲಾವಿದರು ಓದಿದ್ದನ್ನು ಹೇಳುವವರು. ಯಕ್ಷಗಾನ
ನಮಗೆ ಸಂಸ್ಕೃತಿ, ಭಾಷೆ, ಮೌಲ್ಯಗಳನ್ನು ಕಲಿಸುತ್ತದೆ. ಅದು ಬೇರೆಯೇ ಲೋಕದ ಕಲೆ ಎನಿಸುವಂತೆ ಮಾಡುತ್ತದೆ. ಅಂತಹ ತಾದಾತ್ಮ್ಯ ಯಾವ ಕಲೆಯಲ್ಲೂ ಬರಲು ಕಷ್ಟ. ಯಕ್ಷಗಾನ ಎಂದರೆ ಅದು ಈ ಲೋಕದ್ದೇ ಅಲ್ಲ ಎಂಬಂತಹ ಭಾವ ಮೂಡಿಸುವಷ್ಟು ರಮ್ಯಾದ್ಭುತ. ಇದು ಚಿತ್ರ ನಟ ರಾಮಕೃಷ್ಣ ಅವರ ಮಾತು.

Advertisement

ಮೂಲತಃ ಉತ್ತರಕನ್ನಡದ ಶಿರಸಿಯ ನೀರ್ನಳ್ಳಿಯವರಾದ ರಾಮಕೃಷ್ಣ ಅವರು 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದವರು. ಪುಟ್ಟಣ್ಣ ಕಣಗಾಲ್‌ ಗರಡಿಯಲ್ಲಿ ಪಳಗಿ ರಂಗನಾಯಕಿ, ಅಮೃತ ಘಳಿಗೆ, ಮಾನಸ ಸರೋವರದಂಥ ಶ್ರೇಷ್ಠ ಚಿತ್ರಗಳಲ್ಲಿ ನಟಿಸಿದವರು. ತಮಿಳು, ತೆಲುಗು ಸಿನೆಮಾದಲ್ಲೂ ಮಿಂಚಿದವರು.

ಕಲಾಕ್ಷೇತ್ರ ಟ್ರಸ್ಟ್‌ ಕುಂದಾಪುರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಕಲಾಕ್ಷೇತ್ರ ಕಚೇರಿಯಲ್ಲಿ ಸದಸ್ಯರ ಜತೆ ನಡೆಸಿದ ಉಭಯಕುಶಲೋಪರಿ ಇಲ್ಲಿದೆ. ಕಲಾಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಕಿಶೋರ್‌ ಕುಮಾರ್‌, ರಾಮಕೃಷ್ಣ ಅವರನ್ನು ಕನ್ನಡದ ಕಮಲಹಾಸನ್‌ ಎಂದರು. ಸದಸ್ಯರಾದ ಜಾಯ್‌ ಕರ್ವಾಲೊ, ಸನತ್‌ ಕುಮಾರ್‌ ರೈ, ಕೆ.ಆರ್‌. ನಾಯ್ಕ, ಗೋಪಾಲ್‌, ದಿನಕರ ಪಟೇಲ್‌ ಸಂವಾದ ನಡೆಸಿದರು.

*ರಾಮಕೃಷ್ಣ ಪುಟ್ಟಣ್ಣ ಶಿಷ್ಯ ಆಗಿದ್ದು ಹೇಗೆ?
ಯಕ್ಷಗಾನ ವೇಷ ಮಾಡುತ್ತಿದ್ದ ನಾನು ಗುಬ್ಬಿ ವೀರಣ್ಣ ಮೂಲಕ ಅವರ ನಾಟಕ ಕಂಪೆನಿಗೆ ಸೇರಿದೆ. ಪತ್ರಿಕಾ ಜಾಹೀರಾತು ನೋಡಿ ಪುಟ್ಟಣ್ಣ ಕಣಗಾಲ್‌ ಸಿನೆಮಾ ಸೇರಲು ಹೋದೆ. ಹೊಟೇಲ್‌ ಮುಂದೆ 5 ಸಾವಿರ ಜನರ ಸರದಿ ಸಾಲು. ನಾನೂ ಆ ಪೈಕಿ ಒಬ್ಬ. ಐದೈದು ಜನರನ್ನು ಒಳ ಬಿಡುತ್ತಿದ್ದರು. ಪುಟ್ಟಣ್ಣ ಅವರೂ ಆಡಿಷನ್‌ ಮಾಡಿ ಸೋತಿದ್ದರು. ನನ್ನ ವಿಳಾಸ ಕೇಳಿದಾಗ ಕೇರ್‌ ಆಫ್‌ ಗುಬ್ಬಿ ವೀರಣ್ಣ ಎಂದು ನೋಡಿ ಮತ್ತೆ ಆಡಿಷನ್‌ ಮಾಡಿ ಹತ್ತರಲ್ಲಿ ಒಬ್ಬನಾಗಿ ಅವರಲ್ಲಿ ಮೊದಲಿಗನಾದೆ.ಅದೇ ವೇಳೆ ರಾಜ್‌ಕುಮಾರ್‌ ಕಡೆಯಿಂದಲೂ ಕರೆ ಬಂದು ಬಬ್ರುವಾಹನದಲ್ಲಿ ಕೃಷ್ಣನ ಪಾತ್ರ ಸಿಕ್ಕಿತು.

ಪುಟ್ಟಣ್ಣ ಅವರ 5 ಸಿನೆಮಾಗಳಲ್ಲಿ ಅವಕಾಶ ಸಿಕ್ಕಿತು. ಆ ಕಾಲದಲ್ಲಿ ನಿರ್ದೇಶಕ ಬಾಲಚಂದರ್‌, ರೈಟರ್‌ ಬಾಲಿ ಮೊದಲಾದವರು ಬೆಂಗಳೂರಿನಲ್ಲಿ ಉಳಿದು ಬ್ಲಾಕ್‌ನಲ್ಲಿ ಟಿಕೆಟ್‌ ಖರೀದಿಸಿ ಪುಟ್ಟಣ್ಣ ಅವರ ಸಿನೆಮಾ
ನೋಡುತ್ತಿದ್ದರು.

Advertisement

*ಶಂಕರ್‌ ಸಾವು ಕಾಡುತ್ತಿದೆ
ಶಂಕರ್‌ನಾಗ್‌ ಅನೇಕ ಹೊಸ ಯೋಜನೆಗಳ ಕನಸುಗಾರ. ಮೆಟ್ರೋ, ನಂದಿಬೆಟ್ಟಕ್ಕೆ ರೋಪ್‌ವೇ ಸೇರಿದಂತೆ 4 ಹೊಸ ಯೋಜನೆಗಳ ಅನುಷ್ಠಾನದ ಕನಸು ಕಂಡಿದ್ದ. ಸರಕಾರವನ್ನು ಉಪಯೋಗಿಸಿ ಆ ಮೂಲಕ ಜನರಿಗೆ ನೆರವಾಗುವಂತೆ ಮಾಡುವ ವ್ಯವಹಾರಿಕ ಚತುರಮತಿ. ಕಂಟ್ರಿ ಕ್ಲಬ್‌ ಅವನದ್ದೇ ಯೋಜನೆ. ನಾನೂ ಕೆಲವರನ್ನು ಮೆಂಬರ್‌ ಮಾಡಿದ್ದೆ. ವಾರದ ಅನಂತರ
ಕೆಲವು ಹೆಣ್ಮಕ್ಕಳ ದೂರು ಬಂತು. ಮನೆಯವರು ರಾತ್ರಿ 1 ಗಂಟೆಯಾದರೂ ಮನೆಗೆ ಬರುವುದಿಲ್ಲ ಎಂದು. ನಾನು ಶಂಕರ್‌ಗೆ ಹೇಳಿದೆ, ಇದು ಒಳ್ಳೆದಲ್ಲ. ನಿಲ್ಲಿಸಿಬಿಡು.ತಾಯಂದಿರ ಶಾಪ ಕಾಡುತ್ತದೆ ಎಂದು. ಹಾಗೆ ಹೇಳಿ 1 ವಾರದಲ್ಲಿ ನಡೆದ ಅವಘಡದಲ್ಲಿ ಶಂಕರ್‌ ಈ ಲೋಕ ಬಿಟ್ಟಿದ್ದ. ಇದು ನನಗೆ ಈಗಲೂ ಕಾಡುತ್ತಿದೆ.

*ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ
2004ರ ಚುನಾವಣೆಯಲ್ಲಿ ನಾನು ಕಾರವಾರ ಕ್ಷೇತ್ರದಿಂದ ಜನತಾ ದಳದಿಂದ ಕಣಕ್ಕಿಳಿದಿದ್ದೆ. 20 ದಿನಗಳ ತಿರುಗಾಟದಿಂದ 27 ಸಾವಿರ ಮತಗಳು ಸಿಕ್ಕಿದ್ದವು. ನಮ್ಮಂತವರಿಗೆ ರಾಜಕೀಯ ಹೇಳಿಸಿದ್ದಲ್ಲ. ಚುನಾವಣೆ ಪ್ರವೇಶಕ್ಕಾಗಿ ಸಿನೆಮಾ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.

*ನನಗೆ ಧಾರಾವಾಹಿ ಒಗ್ಗುವುದಿಲ್ಲ
ಧಾರಾವಾಹಿ ನಟನೆ ನನಗೆ ಒಗ್ಗಿ ಬರುವುದಿಲ್ಲ ಹೇಳಿದ್ದನ್ನೇ ಹೇಳುತ್ತಾರೆ. ಕಥೆ ಮುಂದೆ ಸಾಗುವುದಿಲ್ಲ. ಸಮಾಜಕ್ಕೆ ಬೇಕಾದ ಸಂದೇಶಗಳೇ ಇಲ್ಲ. ಹಾಗಾಗಿ ಒಂದೆರಡು ಧಾರಾವಾಹಿಯಲ್ಲಿ ನಟಿಸಿ ಹಿಂದೆ ಸರಿದೆ.

ಶೇಣಿಯವರ ಸುಧನ್ವನ ಎದುರು ಕೃಷ್ಣ!
ಐದನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನನಗೆ ನೀರ್ನಳ್ಳಿಯಲ್ಲಿ ಕನ್ನಡ ಬಾರದ ಮಲಯಾಳಿ ತಾಯಿಯ ಜತೆ ಸಂಸ್ಕಾರ ಕಲಿಯಲು ನೆರವಾದ್ದು ಯಕ್ಷಗಾನ. ಹೊಸ್ತೋಟ ಮಂಜುನಾಥ ಭಾಗವತರು ನನಗೆ ಹೆಜ್ಜೆ ಕಲಿಸಿ ಬಣ್ಣ ಹಾಕಿದರು. ಅನೇಕ ವೇಷಗಳನ್ನು ಮಾಡಿದೆ. ಸಿನೆಮಾ ನಟನಾದ ಮೇಲೂ ಅನೇಕ ಯಕ್ಷಗಾನದಲ್ಲಿ ಮಾಡಿದ್ದೆ. ಮಂಗಳೂರಿನಲ್ಲಿ ಮಂಗೇಶ್‌ ಭಟ್‌ ಎಂಬ ಸಂಘಟಕರು ನಾನು ಹಾಗೂ ಶೇಣಿಯವರ ಜತೆ ಸುಧನ್ವ ಮೋಕ್ಷ ಮಾಡಿಸಿದ್ದರು. ಶೇಣಿಯ ಸುಧನ್ವ ಜತೆಗೆ ನನ್ನ ಕೃಷ್ಣನ ವೇಷ ಎಂದಾಗ ನನಗೆ ಆ ದಿನ ರಕ್ತದೊತ್ತಡ ಏರಿ ವೈದ್ಯರು ವೇಷ ಮಾಡದಂತೆ ಸಲಹೆ ನೀಡಿದ್ದರು!

ಕೊನೆಗೂ ಶೇಣಿಯವರ ಬಳಿ ಮೊದಲೇ ಕೈ ಮುಗಿದು ಅರಿಯದೆ ಆದ ಪ್ರಮಾದ, ನಿಮ್ಮ ಜತೆಗೆ ವೇಷ ಎಂದು ಗೊತ್ತಿರಲಿಲ್ಲ ಎಂದೆ. ನೀನು ವೇಷ ಮಾಡು, ನಾನು ಸುಧಾರಿಸುತ್ತೇನೆ ಎಂದಿದ್ದರು. ಬಂದನು ದೇವರ ದೇವ ಎಂದು ಪದ್ಯಕ್ಕೆ ಬಿಡ್ತಿಗೆ ಮುಗಿಸಿ ಕುಳಿತದ್ದೊಂದು ಗೊತ್ತಿದೆ. ಕೃಷ್ಣ ಹಾಗೂ ಸುಧನ್ವ ಇಬ್ಬರ ಸಂಭಾಷಣೆಯನ್ನೂ ಶೇಣಿಯವರೇ ಕೊಂಡೊಯ್ದು ಪ್ರದರ್ಶನ ಅದ್ಭುತ ಆಯಿತು! ಬಳಿಕ ಆಗಾಗ ವೇಷ ಮಾಡುತ್ತಿದ್ದೆ. ನನ್ನ ಅಹಂಕಾರ ಇಳಿಸಿದ್ದು ಧಾರೇಶ್ವರ ಹಾಗೂ ದುರ್ಗಪ್ಪ ಗುಡಿಗಾರರು. ಕುಂದಾಪುರದಲ್ಲಿ ನಡೆದ ಪೆರ್ಡೂರು ಮೇಳದ ಆಟದಲ್ಲಿ ನನ್ನ ಅಹಂಕಾರ ಪೂರ್ತಿ ಇಳಿಯಿತು. ಆ ಬಳಿಕ ನಾನು ಯಕ್ಷಗಾನ ವೇಷವೇ ಮಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next