ಶಿರಸಿ: ಸರ್ಕಾರದ ನೀತಿಗಳಿಂದಾಗಿ ಯಕ್ಷಗಾನ ಕ್ಷೇತ್ರ ಇಂದು ಕಷ್ಟಕ್ಕೆ ಸಿಲುಕಿದೆ. ಯಕ್ಷಗಾನದ ಬಗ್ಗೆ ಜನಪ್ರತಿನಿಧಿಗಳೂ ನಿರ್ಲಕ್ಷ್ಯ ತೋರುತ್ತಿರುವ ಪರಿಣಾಮ ಜನರೇ ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಕುಮಟಾ ಅಸಮಧಾನ ವ್ಯಕ್ತಪಡಿಸಿದರು.
ನಗರದ ನೆಮ್ಮದಿ ರಂಗ ಧಮದಲ್ಲಿ ಗುರುವಾರ ಯಕ್ಷಕಲಾ ಸಂಗಮದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ”ಯಕ್ಷಗಾನ ಕಲೆಯನ್ನು ಸರ್ಕಾರ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ಎಂದು ಸರ್ಕಾರ ಪರಿಗಣಿಸಿದಂತಿದೆ. ಇದರ ಪರಿಣಾಮವಾಗಿ ಉತ್ತರಕನ್ನಡ ಜಿಲ್ಲೆಯ ಯಾವೊಬ್ಬ ಕಲಾವಿದನಿಗೂ ಅಕಾಡೆಮಿಯಲ್ಲಿ ಸ್ಥಾನ ನೀಡಿಲ್ಲ. ಯಕ್ಷಗಾನವನ್ನು ಪ್ರಸಾದವನ್ನಾಗಿ ಸ್ವೀಕರಿಸಜದ ಅನೇಕ ಕಲಾವಿದರು ಜಿಲ್ಲೆಯಲ್ಲಿದ್ದಾರೆ. ಜನರೇ ಈ ಕಲೆಯನ್ನು ಉಳಿಸಿದ್ದಾರೆ. ಯಕ್ಷಗಾನಕ್ಕೆ ಹೊಸ ಮುಖಗಳು ದಾಖಲಾಗಬೇಲಾದರೆ ಪ್ರೋತ್ಸಾಹಕ ಸಂಸ್ಥೆಗಳು ಹೆಚ್ಚು ಹುಟ್ಟಿಕೊಳ್ಳಬೇಕು. ಯಕ್ಷಗಾನ ಕ್ಷೇತ್ರಕ್ಕೆ ತಾಯಂದಿರು ಪ್ರವೇಶ ಮಾಡಿದರೆ ಸಾಮರ್ಥ್ಯ ಹೊರ ಬರುತ್ತದೆ. ಮಹಿಳಾ ಯಕ್ಷಗಾನ ಕೂಟದ ಬಗ್ಗೆ ಸರ್ಕಾರ ವಿಶೇಷ ಅನುದಾನ, ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಯಕ್ಷಗಾನ ಮಾರ್ಗದರ್ಶಕ ಡಾ. ವಿ. ವಿನಾಯಕ ಭಟ್ ಗಾಳಿಮನೆ, ಯಕ್ಷಗಾನ ಪ್ರಸಂಗಗಳನ್ನು ಸುಬ್ರಾಯ ಭಟ್ ಸ್ವ ಪ್ರೇರಣೆಯಿಂದ ಆಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದರು. ಅವರ ಸಂಗ್ರಹದಲ್ಲಿ ಅಪರೂಪದ ದಾಖಲೆಗಳಿದ್ದವು. ಯಕ್ಷಗಾನ ಗಂಡು ಕಲೆ ಎನ್ನುತ್ತಾರೆ. ಆದರೆ, ಇದು ಲಿಂಗ ವಾಚಕ ಪೌರುಷವಲ್ಲ. ಭರತನ ನಾಟ್ಯಶಾಸ್ತ್ರದ ಬಹುಪಾಲು ಯಕ್ಷಗಾನ ಕಲೆಯಲ್ಲಿ ಕಾಣಿಸುತ್ತಿದೆ. ಯಕ್ಷಗಾನ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸಿದರೆ ನಾವೇ ಆ ಕಲೆ ಸಂಕುಚಿತಗೊಳಿಸಿದಂತಾಗುತ್ತದ. ಯಕ್ಷಗಾನ, ಸಂಸ್ಕೃತ ಎಂದಿಗೂ ಅವಸಾನ ಆಗುವುದಿಲ್ಲ. ಯಕ್ಷಗಾನ ಹಾಗೂ ಸಂಸ್ಕೃತ ಒಟ್ಟೊಟ್ಟಾಗಿ ಉಳಿದುಕೊಂಡಿದೆ ಎಂದರು.
ಯಕ್ಷಗಾನ ಕಲಾವಿದ ದಿ. ಸುಬ್ರಾಯ ಭಟ್ ಗಡಿಗೆಹೊಳೆ ಅವರಿಗೆ ಕಾರ್ಯಕ್ರಮದಲ್ಲಿ ಯಕ್ಷಸಮರ್ಪಣೆ ಸಲ್ಲಿಸಲಾಯಿತು. ಭಾಗವತ ಗಜಾನನ ಭಟ್ ತುಳಗೇರಿ ಮತ್ತು ಪತ್ನಿ ನವೀನಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುರೇಶ ಹಕ್ಕಿಮನೆ ಅವರು ದಿ. ಸುಬ್ರಾಯ ಭಟ್ ಅವರಿಗೆ ನುಡಿನಮನ ಸಲ್ಲಿಸಿದರು. ಯಕ್ಷಕಲಾ ಸಂಗಮದ ಅಧ್ಯಕ್ಷೆ ಸುಮಾ ಗಡಿಗೆಹೊಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪತ್ರಕರ್ತ ಅಶೋಕ ಹಾಸ್ಯಗಾರ, ಕಲಾವಿದೆ ನಿರ್ಮಲಾ ಗೋಳಿಕೊಪ್ಪ, ಜಯಶ್ರೀ ಹೆಗಡೆ ಇದ್ದರು.