Advertisement

ಸಿನೆಮಾ ಹಾಡಿಗೆ ಯಕ್ಷಗಾನ ವೇಷ: ಆಕ್ರೋಶ

01:00 AM Jul 25, 2018 | Karthik A |

ಕುಂದಾಪುರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ಸಿನೆಮಾ ಹಾಡಿಗೆ ಯಕ್ಷಗಾನದ ವೇಷಭೂಷಣದಲ್ಲಿ ನೃತ್ಯ ಮಾಡಿದ್ದು  ಇದೀಗ ಯಕ್ಷಗಾನ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರವಿವಾರ ರಾತ್ರಿ ವಾಹಿನಿಯಲ್ಲಿ ಪ್ರಸಾರವಾದ ನೃತ್ಯ ಆಧಾರಿತ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕಾದಲನ್‌ ಸಿನೆಮಾದ ಮುಕ್ಕಾಲ ಮುಕ್ಕಾಬುಲಾ ಹಾಡಿಗೆ ಬಡಗುತಿಟ್ಟಿನ ಯಕ್ಷಗಾನದ ವೇಷ ಭೂಷಣ ಹಾಕಿ ತಂಡವೊಂದು ಕುಣಿದಿತ್ತು. ನೃತ್ಯ ಯಕ್ಷಗಾನದ್ದಾಗಿರದೇ ಆಧುನಿಕ ಕುಣಿತವಾಗಿತ್ತು. ಇದರಿಂದ ಯಕ್ಷಗಾನ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆಯೇ ಜಾಲತಾಣದಲ್ಲಿ ಈ ಕುರಿತು ಅಸಮಾಧಾನ ಹಂಚಿಕೊಂಡಿದ್ದಾರೆ. ಕಾರ್ಯಕ್ರಮ ಮುಗಿಯುವದರೊಳಗೆ ನೂರಾರು ಮಂದಿ ಆಕ್ಷೇಪ ವ್ಯಕ್ತಪಡಿಸಿ ಚಾನೆಲ್‌ ಗೆ ಕರೆ ಮಾಡಿದರು. ಕ್ಷಮೆ ಯಾಚನೆಗೆ ಒತ್ತಾಯಿಸಿದರು. ಯಕ್ಷಗಾನ ಎಂದರೆ ಕೇವಲ ಕಲೆ ಎಂಬ ದೃಷ್ಟಿಯಲ್ಲಿ ನೋಡದೇ ಆರಾಧನೆ ದೃಷ್ಟಿಯಲ್ಲಿ ನೋಡಲಾಗುತ್ತದೆ. ಆದ್ದರಿಂದ ಪರಂಪರೆಯನ್ನು ಬಿಟ್ಟು ಇಂತಹ ಅಬದ್ಧಗಳಿಗೆ ಯಕ್ಷಗಾನದ ವೇಷಭೂಷಣ ಬಳಕೆ ಸಲ್ಲದು ಎಂದು ಆಕ್ರೋಶ ತೋಡಿಕೊಂಡಿದ್ದಾರೆ.

ಕರಾವಳಿಯಲ್ಲಿ ಯಕ್ಷಗಾನವನ್ನು ಹರಕೆಯಾಗಿ ಆಡಿಸುತ್ತಾರೆ, ಧಾರ್ಮಿಕ ಕೇಂದ್ರಗಳು ಮೇಳಗಳನ್ನು ಹೊಂದಿವೆ. ಅಶೌಚದಲ್ಲಿ ಪೌರಾಣಿಕ ಪ್ರಸಂಗ ವೀಕ್ಷಣೆಗೆ ಜನ ಹೋಗುವುದಿಲ್ಲ. ಅಶೌಚದಲ್ಲಿ ಕೆಲವು ಯಕ್ಷಗಾನದ ಪಾತ್ರಗಳನ್ನು ಮಾಡುವುದಿಲ್ಲ. ರಂಗಸ್ಥಳ ಹಾಗೂ ವೇಷ ಸಿದ್ಧಮಾಡುವ ಚೌಕಿಗೆ ಚಪ್ಪಲಿ ಹಾಕಿ ಕೂಡ ಹೋಗುವುದಿಲ್ಲ. ಪಾತ್ರವೇ ಆಗಿದ್ದರೂ ಭಕ್ತಿಯಿಂದ ಕೈ ಮುಗಿಯುತ್ತಾರೆ. ಹಾಗಿರುವಾಗ ಇಂತಹ ಕಲೆಯನ್ನು ಅವಮಾನಿಸುವುದು ಎಷ್ಟು ಸರಿ ಎಂದು ಅಭಿಮಾನಿಗಳು ಕೇಳಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಿಗೂ ಈ ಕುರಿತು ಮನವಿ ಮಾಡಲಾಗಿದ್ದು ಚಾನೆಲ್‌ ಗ‌ಳಲ್ಲಿ ಇಂತಹ ಕಾರ್ಯಕ್ರಮ ಪ್ರಸಾರ ಮಾಡದಂತೆ ಸೂಚಿಸಲು ಒತ್ತಾಯಿಸಲಾಗಿದೆ. ಇದೇ ವಾಹಿನಿಯಲ್ಲಿ ಈ ಹಿಂದೆಯೂ ಯಕ್ಷಗಾನ ವೇಷಗಾರಿಕೆಯಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿ ನಂತರ ಕ್ಷಮಾಪಣೆ ಕೇಳಲಾಗಿತ್ತು. ಈಗ ತಪ್ಪು ಪುನರಾವರ್ತನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next