Advertisement

ಕರ್ಕಿ ಕೃಷ್ಣ ಹಾಸ್ಯಗಾರರು

06:00 AM Jul 22, 2018 | |

ಕೃಷ್ಣ ಪರಮಯ್ಯ ಹಾಸ್ಯಗಾರರು ಉತ್ತಮ ಮಟ್ಟದ ಪ್ರಸಾಧನ ಕಲಾವಿದ. ಯಕ್ಷಗಾನವೇ ಇರಲಿ, ಸಾಮಾಜಿಕ, ಪೌರಾಣಿಕ ಆಥವಾ ಐತಿಹಾಸಿಕ ನಾಟಕವೇ ಇರಲಿ, ಶಾಲಾ -ಕಾಲೇಜುಗಳ ವಾರ್ಷಿಕೋತ್ಸವವೇ ಆಗಿರಲಿ, ವೇಷಗಾರಿಕೆಯಲ್ಲಿ ಎತ್ತಿದ ಕೈ. ವರ್ಷದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ವೇಷಗಳ ತಯಾರಿಗೆ ಅವರನ್ನು ಆಮಂತ್ರಿಸುತ್ತಿದ್ದರು. ಹೊನ್ನಾವರಕ್ಕೆ ಏಣಗಿ ಬಾಳಪ್ಪನವರ ನಾಟಕ ಕಂಪೆನಿಯು ಬಂದಾಗ ಹಲವು ದಿನ ಗ್ರೀನ್‌ ರೂಮ್‌ನಲ್ಲಿ ಕುಳಿತು ನಾಟಕ ಕಂಪೆನಿಯವರಿಂದ ಹೊಸ ಪ್ರಸಾಧ‌ನ ತಂತ್ರಗಳನ್ನು ಕಲಿತಿದ್ದರು. ಕರ್ಕಿ ಮೇಳದಲ್ಲಿ ಕೃಷ್ಣ ಹಾಸ್ಯಗಾರರಲ್ಲಿ ಹಿರಿ, ಕಿರಿಯ ಕಲಾವಿದರು ವೇಷ ಮಾಡುವಾಗ ಎಕ್ಸ್‌ಪರ್ಟ್‌ ಒಪೀನಿಯನ್‌ ಮತ್ತು ವೇಷಗಾರಿಕೆಯ ಕುರಿತು ಸಲಹೆ ಪಡೆಯುವುದು ಸಾಮಾನ್ಯವಾಗಿತ್ತು. ಹಳೆಯ ಪರಂಪರೆಯ ಕಲಾವಿದರ ವೇಷಗಳನ್ನು ನೋಡಿದ್ದ ಅವರು ಹಳೆಯ ಕ್ರಮದ ವೇಷಗಳ ಮುಖವರ್ಣಿಕೆಯ ಮತ್ತು ವೇಷಗಾರಿಕೆಯ ಕುರಿತು ಅಧಿಕೃತವಾಗಿ ಹೇಳಬಲ್ಲವರು ಮತ್ತು ಸ್ವತಃ ಪ್ರಾಯೋಗಿಕವಾಗಿ ಮಾಡಿ ತೋರಿಸಬಲ್ಲವರಾಗಿದ್ದರು. ಹಂಪಿ ವಿಶ್ವವಿದ್ಯಾನಿಲಯ ಪ್ರಕಟಿಸಿದ ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಡಾ. ಜಿ. ಎಲ…. ಹೆಗಡೆಯವರ ಯಕ್ಷಗಾನ ವರ್ಣ ವೈಭವ ಪುಸ್ತಕದಲ್ಲಿ ಕೃಷ್ಣ ಹಾಸ್ಯಗಾರರ ಬಣ್ಣಗಾರಿಕೆಯ ಕೆಲವು ಮಾದರಿಗಳನ್ನು ಕಾಣಬಹುದು. ನನ್ನಂಥ ಮಕ್ಕಳಿಗೆ ವೇಷ ಮಾಡಿಕೊಡುವಾಗ ಅವರ ಹಾಸ್ಯ ಚಟಾಕಿಗಳು ಮಕ್ಕಳಿಗೆ ಬೋನಸ್‌. ಲೀಲಾಜಾಲವಾಗಿ ಚಿತ್ರಗಾರಿಕೆ, ಬಣ್ಣಗಾರಿಕೆ, ವೇಷಗಾರಿಕೆಯಲ್ಲಿ ಏನನ್ನೂ ಮಾಡಬಲ್ಲ ಗಾರುಡಿಗ. ನನ್ನ ಅಜ್ಜ ವರದ ಹಾಸ್ಯಗಾರರು, “ಕೃಷ್ಣ ಗೆರೆ ಎಳೆದರೆ ಅದು ಡ್ರಾಯಿಂಗ್‌’ ಎಂದು ಅಭಿಮಾನದಿಂದ ತಮ್ಮನ ಕುರಿತು ಹೇಳುತ್ತಿದ್ದರು. ಅದು ಎಳ್ಳಷ್ಟೂ ಅತಿಶಯೋಕ್ತಿ ಆಗಿರಲಿಲ್ಲ. ಅವರದ್ದು ಕ್ರಿಯೇಟಿವ್‌ ಮೈಂಡ್‌. ಕೆಲವೊಮ್ಮೆ ಅವರಿಗೆ ಕೆಲಸ ಆರಂಭಿಸುವಾಗ ತಗಾದೆ ಇದ್ದರೂ, ಒಮ್ಮೆ ಮನಸ್ಸಿಗೆ ತೆಗೆದುಕೊಂಡ ನಂತರ ಅವರು ಮಾಡಿದ ಯಾವುದೇ ಕೆಲಸದಲ್ಲಿ ಅಥವಾ ಕೃತಿಯಲ್ಲಿ ವೈಫ‌ಲ್ಯವನ್ನು ನಾನು ಕಂಡದ್ದೇ ಇಲ್ಲ. ಸರ್ವರಿಂದ ಹೊಗಳಿಕೆಗೆ ಪಾತ್ರವಾಗುತ್ತಿತ್ತು. ಉಚ್ಚ ಶ್ರೇಣಿಯ ಪ್ರೊಫೆಶನಲ್‌ ಗುಣಮಟ್ಟದ ಕಲೆಯ ಅನಾವರಣ ಕೃಷ್ಣ ಹಾಸ್ಯಗಾರರಿಗೆ ಅನಾಯಾಸವಾಗಿ ಸಾಧ್ಯವಾಗಿತ್ತು.

Advertisement

ನಮ್ಮ ಕುಟುಂಬದಲ್ಲಿ ಪೂರ್ವಜರಿಂದ ಬಂದ ಇನ್ನೊಂದು ಕಲೆ, ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆ. ಯಾವುದೇ ಅಚ್ಚು ಅಥವಾ ಸ್ಪ್ರೆà ಪೈಂಟ್‌ ಇತ್ಯಾದಿ ಸಾಧನಗಳನ್ನು ಬಳಸದೆ ಕೇವಲ ಕೈ ಕೆಲಸದಿಂದ ನಿರ್ಮಾಣವಾಗುತ್ತಿದ್ದ ಗಣಪತಿ ವಿಗ್ರಹಗಳು. ಚೌತಿಹಬ್ಬದಲ್ಲಿ ನಮ್ಮ ಕೆಲವು ನೆಂಟರ ಮತ್ತು ಕರ್ಕಿ ಊರಿನ ಹಲವು ಮನೆಗಳಲ್ಲಿ ಹಾಸ್ಯಗಾರ ಕುಟುಂಬದವರೇ ನಿರ್ಮಿಸಿದ ಗಣಪತಿ ಮೂರ್ತಿಗಳು ಪೂಜಿಸಲ್ಪಡುತ್ತಿದ್ದವು. ನಮ್ಮ ಹಾಸ್ಯಗಾರ ಕುಟುಂಬದ ಎಲ್ಲ ಸದಸ್ಯರೂ ಈ ಕಲೆಯಲ್ಲಿ ಸಮರ್ಥರಾದರೂ ಕೃಷ್ಣ ಹಾಸ್ಯಗಾರರ ಕೈಯಿಂದ ಮೂಡಿಬಂದ ವಿಗ್ರಹಗಳ ಗುಣಮಟ್ಟ ಇನ್ನೂ ಒಂದು ಪಟ್ಟು ಹೆಚ್ಚು. ಅವರ ಚಿತ್ರಕಲಾ ಸಾಮರ್ಥ್ಯ ಇದಕ್ಕೆ ಓರಣ ಕೊಟ್ಟಿತ್ತು.  ಮತ್ತೂಂದು ವಿಶೇಷವೆಂದರೆ, ನಮ್ಮ ಮನೆಯಲ್ಲಿ ಪೂಜಿಸಲ್ಪಡುತ್ತಿದ್ದ ಮನುಷ್ಯ ಗಾತ್ರದ ಗಣೇಶ ವಿಗ್ರಹವನ್ನು ಕೃಷ್ಣ ಹಾಸ್ಯಗಾರರೇ ಮಾಡುವುದು. ಅದರ ಕೈಗಳು, ಸೊಂಡಿಲು, ಪಂಚೆ ಇತ್ಯಾದಿಗಳು ಅತಿ ಸಹಜತೆಯಿಂದ ಕೂಡಿ, ನಯನಮನೋಹರವಾಗಿರು ತ್ತಿದ್ದುವು. ಪ್ರತಿವರ್ಷ ಆ ಮೂರ್ತಿಯನ್ನು ನೋಡಲೆಂದೇ ದೂರದಿಂದ ಜನರು ಬರುತ್ತಿದ್ದರು. ಇಳಿವಯಸ್ಸಿನಲ್ಲೂ ಹಲವು ಪ್ರಮುಖರ ಮನೆಯ ವಿಗ್ರಹಗಳಿಗೆ ವಿಶೇಷ ಮುತುವರ್ಜಿ ವಹಿಸಿ ಜೀವಕಳೆ ಕೊಡುವ ಹುಬ್ಬು, ದೃಷ್ಟಿ , ನಾಮ ಬರೆಯುವವರು ಕೃಷ್ಣ ಹಾಸ್ಯಗಾರರೇ. ಆ ಕೆಲಸವನ್ನು ಇನ್ನಾರಿಗೂ ಅವರು ಕೊಡುತ್ತಿರಲಿಲ್ಲ. ಅಷ್ಟು ಕಾಳಜಿ ಅವರಿಗಿತ್ತು. ಮಾನವ ಗಾತ್ರದ ಗಣಪತಿ ಮೂರ್ತಿಯ ಪೂರಕ ವಿಗ್ರಹಗಳಾದ ತೆಂಗಿನಕಾಯಿ, ಹಾವು, ಇಲಿ, ನವಿಲು, ಆಯುಧಗಳು ಇತ್ಯಾದಿಗಳು ಹಬ್ಬದ ನಂತರ ಪಟ್ಟಣದಲ್ಲಿನ ಮನೆಗಳ ಶೋಕೇಸ್‌ ಸೇರುತ್ತಿದ್ದವು. ಪ್ರತಿವರ್ಷ ತಿಂಗಳುಗಳ ಮುಂಚೆಯೇ ಅದನ್ನು ಕಾಯ್ದಿರಿಸಲು ಪೈಪೋಟಿ ಇರುತ್ತಿತ್ತು.  ಅಂದರೆ, ಅಷ್ಟು ಬೇಡಿಕೆಯಿತ್ತು. ಸುಂದರವಾದ ಮಣ್ಣಿನ ಮೂರ್ತಿ ನಿರ್ಮಾಣ ಕಲೆ ಕೃಷ್ಣ ಹಾಸ್ಯಗಾರರಲ್ಲಿತ್ತು.

ಆನಿ ಆನಿ ಅಜ್ಜ
ನನ್ನ ತಂದೆ ಪಿ. ವಿ.  ಹಾಸ್ಯಗಾರ ಮತ್ತು ಅಜ್ಜ ವರದ ಹಾಸ್ಯಗಾರರು ಹೊನ್ನಾವರದಲ್ಲಿ ಉದ್ಯೋಗದ ನಿಮಿತ್ತ ಒಂದು ಬಾಡಿಗೆಯ ಮನೆ ಮಾಡಿ ಅಲ್ಲಿ ಸಂಸಾರ ಸಮೇತ ವಾಸವಾಗಿದ್ದರು. ಅದು ನಮ್ಮ ಕರ್ಕಿಯ ಮನೆಮಂದಿಗೆಲ್ಲ ಬಿಡಾರವೇ ಆಗಿತ್ತು. ಶಾಲೆಯಲ್ಲಿ ನಿವೃತ್ತರಾಗುವ ತನಕ ಕೃಷ್ಣ ಹಾಸ್ಯಗಾರರು ಮಧ್ಯಾಹ್ನ ನಮ್ಮ ಬಿಡಾರಕ್ಕೆ ಭೋಜನಕ್ಕೆ ಬರುತ್ತಿದ್ದ ಕಾರಣ ದಿನಕ್ಕೆ ಒಮ್ಮೆಯಾದರೂ ಅವರನ್ನು ಕಾಣುವ ಅವಕಾಶ ನನಗೆ ಸಿಗುತ್ತಿತ್ತು. ಮತ್ತೆ ಕರ್ಕಿ ಮೂಲ ಮನೆಯಲ್ಲಿ, ಯಕ್ಷಗಾನ ಮೇಳದ ಜೊತೆ ಹೋದಾಗ ಹೀಗೆ ಅವರನ್ನು ಮೇಲಿಂದ ಮೇಲೆ ಕಾಣುತ್ತಿದ್ದುದರಿಂದ ಸಹಜವಾಗಿ ಸಲುಗೆ ಇತ್ತು. ಅವರನ್ನು ನಾವು ಕರೆಯುವುದು “ಆನಿ ಆನಿ ಅಜ್ಜ’ ಎಂದು. ಐರಾವತ ಪ್ರಸಂಗದಲ್ಲಿ ಆನೆ ಮಾವುತನಾಗಿ ಬಂದು “ಆನೆ ಬಂತೊಂದು ಆನೆ’… ಹೀಗೆ ಹೇಳುತ್ತ¤ ಅವರ ಪ್ರವೇಶ. ಇನ್ನೂ ಎಳೆವೆಯಲ್ಲಿದ್ದ ನನ್ನ ಹಿರಿಯ ಅಕ್ಕ  “ಆನಿ ಆನಿ ಅಜ್ಜ’ ಎಂದದ್ದರಿಂದ ನಾವೆಲ್ಲ ಹಾಗೆ ಕರೆಯುವುದು ರೂಢಿ ಆಯಿತು. ಒಮ್ಮೆ ನನ್ನ ಹಟಕ್ಕೆ ಒಪ್ಪಿ ಮರಿ ಸಿಂಹದ ಮುಖವಾಡ ನನಗೆ ಮಾಡಿ ತಂದುಕೊಟ್ಟಿದ್ದರು. ನನಗೆ ಸುಮಾರು 5-6 ವರ್ಷ ಇ¨ªಾಗ ಚಿತ್ರಾಪುರದಲ್ಲಿ ಬಾಲಗೋಪಾಲ ವೇಷಕ್ಕೆ ಪೊಗಡೆ ಅಥವಾ ಕೇದಗೆಮುಂದಲೆ ಕಟ್ಟಿ ಕೊಟ್ಟಿದ್ದರು. ಆಗ ನಮ್ಮಲ್ಲಿ ರಟ್ಟು ಮತ್ತು ಅಟ್ಟೆಯಿಂದ ಮಾಡಿದ ಪೊಗಡೆ ಬಳಕೆಯಲ್ಲಿತ್ತು. ಬಿಗಿದಾಗ ತಲೆನೋವು ಬರುತ್ತಿತ್ತು. ಆದರೆ, ಕೃಷ್ಣ ಹಾಸ್ಯಗಾರರ ಪೊಗಡೆ ಕಟ್ಟುವಿಕೆಯಿಂದ ಸ್ವಲ್ಪವೂ ನೋವಾಗುತಿ ¤ರಲಿಲ್ಲ. ಆ ದಿನದ ನೆನಪು ಮತ್ತು ಅವರ ಪ್ರಸಾಧನ ಕೌಶಲ್ಯ ಅಥವಾ ನ್ಯಾಕ್‌ ಎಂದಿಗೂ ಮರೆಯಲಾಗದು. ಒಮ್ಮೆ ಧರ್ಮಶಾಲೆಯಲ್ಲಿ ಭೂಕೈಲಾಸ ಪ್ರಸಂಗದ ಬಾಲಗಣಪತಿ ಯಾಗಿ ನನ್ನನ್ನು ತಯಾರು ಮಾಡಿದ್ದರು. ಹತ್ತಿಯನ್ನು ಅಂಟಿಸಿ ಸಹಜವಾಗಿ ಕಾಣುವ ಸೊಂಡಿಲನ್ನು ಮಾಡಿದ್ದರು.  ಹೊನ್ನಾವರದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ನನಗೆ ರಾಘವೇಂದ್ರ ಸ್ವಾಮಿಯವರ ವೇಷ ಮಾಡಿಸಿ ಮೊದಲ ಬಹುಮಾನ ಸಿಗುವಂತೆ ಮಾಡಿದ್ದರು. ಇನ್ನೊಮ್ಮೆ ಶಿವಾಜಿ, ಮತ್ತೂಮ್ಮೆ ಶಿವ, ಮಗದೊಮ್ಮೆ ವೃದ್ಧ – ಹೀಗೆ ಹಲವು ರೀತಿಯ ವೇಷಗಳನ್ನು ನನಗೆ ತೊಡಿಸಿದರು. ಅತಿಥಿ ಕಲಾವಿದರಾಗಿ ಕಾರ್ಯಕ್ರಮಕ್ಕೆ ಹೋಗುವಾಗ ಒಮ್ಮೆ ತನ್ನ ಜೊತೆ ಕಟೀಲು ಮೇಳದ ದೇವಿ ಮಹಾತ್ಮೆ  ಆಟಕ್ಕೆ ದಕ್ಷಿಣಕನ್ನಡಕ್ಕೆ, ಇನ್ನೊಮ್ಮೆ ಸಾಲಿಗ್ರಾಮ ಮೇಳದ ಆಟಕ್ಕೆ ಮಂಕಿಗೆ, ಮತ್ತೂಂದು ಸಲ ಕುಮಟಾಕ್ಕೆ ಕರೆದೊಯ್ದಿದ್ದು ಇನ್ನೂ ನೆನೆಪಿನಲ್ಲಿ ಹಸಿಯಾಗಿದೆ. ಹೀಗೆ, ಕೃಷ್ಣ ಹಾಸ್ಯಗಾರರ ಜೊತೆಗಿನ ನನ್ನ ಚಿಕ್ಕಂದಿನ ನೂರಾರು ಇಂತಹ ಸಂಗತಿಗಳು ಮನಃಪಟಲದಲ್ಲಿ ಅಚ್ಚೊತ್ತಿವೆ.

ಕೃಷ್ಣ ಹಾಸ್ಯಗಾರರ ಕುರಿತು ಹಲವರಿಗೆ ತಿಳಿದಿರದ ಇನ್ನೂ ಕೆಲವು ರೋಚಕ ಸಂಗತಿಗಳಿದ್ದುವು. ನಾಗರ ಹಾವುಗಳನ್ನು ಹಿಡಿಯುವುದು ಅವರ ಒಂದು ಹವ್ಯಾಸವಾಗಿತ್ತು. ಮನೆಗೆ ಮತ್ತು ಊರು, ಕೇರಿಗಳಲ್ಲಿ ಆಗಾಗ ಅಯಾಚಿತವಾಗಿ ಆಗಮಿಸುತ್ತಿದ್ದ ಅತಿಥಿ ನಾಗರಾಜನನ್ನು ಯಾವುದೇ ಭಯವಿಲ್ಲದೆ ಕೈಯಿಂದ ಹಿಡಿದು, ಚೀಲದಲ್ಲಿ ತುಂಬಿ, ಕಾಡಿಗೆ ಬಿಟ್ಟು ಬರುತ್ತಿದ್ದರು. ಅವರ ಸುರಕ್ಷತತೆಯ ದೃಷ್ಟಿಯಿಂದ ಮನೆಯಲ್ಲಿ ಇತರರಿಂದ ಈ ಹವ್ಯಾಸಕ್ಕೆ ಉತ್ತೇಜನ ಸಿಗುತ್ತಿರಲಿಲ್ಲ. ಆದರೆ ನಮ್ಮಲ್ಲಿಗೆ ಬರುವ ವಿಷದ ಹಾವುಗಳ ನಿವಾರಣೆಗೆ ಹೊರಗಿನವರನ್ನು ಕರೆಯುವ ಪರಿಪಾಠ ಇರಲಿಲ್ಲ. ಕೃಷ್ಣ ಹಾಸ್ಯಗಾರರ ಸಾಕುಪ್ರಾಣಿಗಳ ಮೇಲಿನ ಪ್ರೀತಿ ಅಪಾರ. ಸ್ವತ್ಛತೆಯ ಬಗ್ಗೆ ಅಧಿಕ ಕಾಳಜಿ ಇದ್ದರೂ, ಮನೆಯ ನಾಯಿ, ಬೆಕ್ಕುಗಳು ಲಾಲನೆ, ಪಾಲನೆಯ ಹೊಣೆ ಅವರದ್ದೇ ಆಗಿತ್ತು. ನಾಯಿಯನ್ನು ಹಿಡಿದು ವಾಕಿಂಗ್‌ ಹೋಗುವುದು ಅವರ ಅತೀ ನೆಚ್ಚಿನ ಕಾಯಕವಾಗಿತ್ತು. ಅದರಲ್ಲಿ ಅವರು ಆನಂದವನ್ನು ಅನುಭವಿಸುತ್ತಿದ್ದರು. ತಾವೇ ಸ್ವತಃ ಉತ್ತರ ಕನ್ನಡ ಯಕ್ಷಗಾನ ಪರಂಪರೆಯ ಪಾತಿನಿಧಿಕ ಬಣ್ಣದ ವೇಷದ ಹಿರಿಯ ಕಲಾವಿದರಾಗಿದ್ದರೂ, ತೆಂಕುತಿಟ್ಟಿನ ಬಣ್ಣದ ವೇಷ ಮತ್ತು ಕಲಾವಿದರ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ತೆಂಕಿನ ಬಣ್ಣದ ವೇಷದ ಆಡ್ಯತೆ, ಬಣ್ಣಗಾರಿಕೆ ನಮ್ಮ ಬಡಾಬಡಗು ತಿಟ್ಟಿನ ಬಣ್ಣದ ವೇಷಕ್ಕಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತಿದ್ದರು. ಅದು ಅವರ ಗುಣಗ್ರಾಹಿತ್ವಕ್ಕೆ ನಿದರ್ಶನ. ಅವರಂತೆ ನವರಸಗಳ ಅಭಿವ್ಯಕ್ತಿಯನ್ನು ಮಾಡುವವರು ದುರ್ಲಭ. ಭಾವಾಭಿವ್ಯಕ್ತಿಗೆ ಕಣ್ಣುಗಳು ಸಹಕಾರಿಯಾಗಿದ್ದುವು. ಸುಲಲಿತವಾದ ಕಣ್ಣುಗಳ ಚಲನೆ ಅವರಿಗೆ ಸಿದ್ಧಿಸಿತ್ತು. ಕೃಷ್ಣ ಹಾಸ್ಯಗಾರರು ಪ್ರತಿವರ್ಷ ಸೈಂಟ್‌ ಥಾಮಸ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ನವೀನವಾದ, ವಿಭಿನ್ನ ರೀತಿಯ, ಲಘು ವಿಡಂಬನೆಯ ಸ್ಕಿಟ್‌ ಮಾಡುವುದು ಪದ್ಧತಿಯಾಗಿತ್ತು. ಪ್ರೇಕ್ಷಕರು ಕೊನೆಯಲ್ಲಿ ಬರುವ ಈ ವಿಶೇಷ ಆಕರ್ಷಣೆಗಾಗಿ ಕೌತುಕದಿಂದ ಕಾಯುತ್ತಿದ್ದರು. ಪ್ರಯಾಣಕ್ಕೆ ಹೊರಡುವ ಮುನ್ನ ತಯಾರಾಗುವ ನಯನಾಜೂಕಿನ ಯುವತಿಯ ಅಭಿನಯ ಒಂದು ವರ್ಷದ ಆಕರ್ಷಣೆಯಾದರೆ, 10 ನಿಮಿಷದಲ್ಲಿ 5-6 ರೀತಿಯ ವೇಷಗಳನ್ನು ಕ್ಷಿಪ್ರವಾಗಿ ಬದಲಿಸಿಕೊಂಡು ಬಂದು ಯುವತಿಯನ್ನು ಒಲಿಸಲು ಯತ್ನಿಸುವ ಯುವಕ ಇನ್ನೊಂದು ವರ್ಷದ ವಿಶೇಷ. ಹೀಗೆ ಅವರದ್ದೇ ಆದ ಕಲ್ಪನೆ, ಸಂಯೋಜನೆ ಮತ್ತು ನಟನೆ. ಅವುಗಳಲ್ಲಿ ರಾಮನಿಗಾಗಿ ಕಾದಿರುವ ಶಬರಿಯ ಪಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಇದೆ. ಅದು ಬೇಡಿಕೆಯಿಂದ ಹಲವು ಸಲ ಪ್ರದರ್ಶನಗೊಂಡಿತ್ತು. ಶಾಲೆಯ ಸುವರ್ಣ ಮಹೋತ್ಸವಕ್ಕೆ ಶಾಲೆಯ ಪ್ರವೇಶದ್ವಾರವನ್ನು ಮೈಸೂರು ಅರಮನೆಯ ಮುಖ್ಯದ್ವಾರವನ್ನೇ ಹೋಲುವ ರೀತಿಯಿಂದ ಅಣಿಗೊಳಿಸಿ ಅತಿಥಿಯಾಗಿ ಬಂದಿದ್ದ ಮೈಸೂರು ಮಹಾರಾಜರ ಶ್ಲಾಘನೆಗೆ ಪಾತ್ರರಾಗಿದ್ದರು. 

ಸಭಾಹಿತ ಮಟ್ಟು 
ಸ್ಪಷ್ಟೋಕ್ತಿಯಲ್ಲಿ ಹೇಳುವುದಾದರೆ, ಕರ್ಕಿ ಯಕ್ಷಗಾನ ಪರಂಪರೆಯೇ ಉತ್ತರಕನ್ನಡದ ಸಭಾಹಿತ ಮಟ್ಟು (ಬಡಾಬಡಗು ತಿಟ್ಟು). ಕರ್ಕಿ ಮೇಳದಷ್ಟು ದೀರ್ಘ‌ಕಾಲ ಮತ್ತು ತೀರಾ ಇತ್ತೀಚಿನವರೆಗೆ ಸಭಾಹಿತ ಮಟ್ಟನ್ನು ಇತರ ತಿಟ್ಟುಗಳ ಮಿಶ್ರಣವಿಲ್ಲದೆ ಮೂಲಸ್ವರೂಪದಲ್ಲಿ ಪ್ರದರ್ಶಿಸಿದ ಮತ್ತೂಂದು ಮೇಳ ಇಲ್ಲ. ಕರ್ಕಿ ಮೇಳದವರ ಕುಣಿತ, ಒಡ್ಡೋಲಗ ಕ್ರಮ, ಅಭಿನಯ, ಮುದ್ರೆಗಳು, ಆಹಾರ್ಯ, ಉತ್ತರ ಕನ್ನಡದ ವಿಶಿಷ್ಟ ಪ್ರಸಂಗ ಪ್ರತಿಗಳು ಮತ್ತು ಇತರ ಅಂಶಗಳು ಇದಕ್ಕೆ ಸಾಕ್ಷಿಯಾಗಿವೆ. ಇವು ಪುಸ್ತಕಗಳಲ್ಲಿ ದಾಖಲಾಗಿವೆ ಮತ್ತು ಅಲ್ಲಲ್ಲಿ ಕಾಣುವ ವಿಡಿಯೋಗಳಲ್ಲೂ ಸು#ಟವಾಗಿ ಪ್ರಕಟವಾಗುತ್ತವೆ. ಉತ್ತರ ಕನ್ನಡದ ಘಟ್ಟದ ಮೇಲೆ ಮತ್ತು ಇತರೆಡೆ ಹಿಂದೆ ಇದ್ದ ಕಲಾವಿದರು ಕರ್ಕಿಯವರಿಂದಲೇ ಕಲಿತವರು, ಅವರಿಂದ ಪ್ರಭಾವಿತರಾದವರು ಅಥವಾ ಅವರನ್ನೇ ಅನುಸರಿಸಿದವರು. 

Advertisement

ಕೃಷ್ಣ ಹಾಸ್ಯಗಾರರು ಈ ಪ್ರಾಚೀನ ಪರಂಪರೆಯ ಬಣ್ಣದ ವೇಷದ ಕೊನೆಯ ಕೊಂಡಿ ಎಂಬ ವಾಸ್ತವ ಖೇದಕರ ಸಂಗತಿ. ಅವರ ಬಣ್ಣದ ವೇಷಗಳಲ್ಲಿ ಕಾಣುತ್ತಿದ್ದ ವಿಭಿನ್ನತೆ ಮತ್ತು ಪಾರಂಪರಿಕ ಸೌಂದರ್ಯ ಉತ್ತರ ಕನ್ನಡದ ಬೇರೆ ಯಾವ ಸಮಕಾಲೀನ ಕಲಾವಿದರಲ್ಲೂ ಕಂಡದ್ದಿಲ್ಲ. ಸಿಂಹ, ಪ್ರೇತ, ಬೇತಾಳ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಮಾಡಿ ಅವುಗಳನ್ನು ಯಕ್ಷಗಾನದ ಚೌಕಟ್ಟಿಗೆ ಅಳವಡಿಸಿದರೂ, ಬಣ್ಣದವೇಷ, ಹಾಸ್ಯವೇಷ ಮತ್ತು ಇತರ ವೇಷಗಳನ್ನು ಪರಂಪರೆಯ ನಿಷ್ಠೆಯಿಂದಲೇ ಮುಂದುವರಿಸಿಕೊಂಡು ಬಂದವರು. ಇತರ ತಿಟ್ಟುಗಳ ಅಂಶಗಳನ್ನು ತಮ್ಮ ಬಡಾಬಡಗು ತಿಟ್ಟಿನಲ್ಲಿ ಬೆರೆಸದೆ ಉತ್ತರ ಕನ್ನಡ ಯಕ್ಷಗಾನ ಕಲೆಯ ಮೂಲ ಸ್ವರೂಪವನ್ನು ಉಳಿಸಿಕೊಂಡವರು. ಹಾಸ್ಯಗಾರ ಕುಟುಂಬದ ಇತರ ಕಲಾವಿದರಂತೆ ಯಾವುದೇ ರಾಜ್ಯ ಅಥವಾ ರಾಷ್ಟ್ರ ಸರಕಾರಗಳ ಅತಿ ಉನ್ನತ ಪ್ರಶಸ್ತಿಗೆ ಇವರು ಭಾಜನರಾಗಲಿಲ್ಲ. ಈ ಪ್ರಶಸ್ತಿಗಳಿಗೆ ಬೇಕಾದ ಪ್ರತಿಭೆ ಇದ್ದರೂ ಅದಕ್ಕೆ ಬೇಕಾದ ರಾಜಕೀಯ ವಲಯದ ಪ್ರಯತ್ನ ಇರಲಿಲ್ಲ. ಅದರ ಹಿಂದೆ ಬಿದ್ದವರಲ್ಲ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು. ಹಲವು ವರ್ಷಗಳ ನಂತರ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಅನೇಕ ವೈಯಕ್ತಿಕ ಮತ್ತು ಸಂಘಸಂಸ್ಥೆಗಳ ಸನ್ಮಾನ, ಪ್ರಶಸ್ತಿಗಳು ಕೃಷ್ಣ ಹಾಸ್ಯಗಾರರನ್ನು ಅರಸಿ ಬಂದಿದ್ದುವು. ದೇಶದ ವಿವಿಧ ರಾಜ್ಯಗಳಲ್ಲಿಯೂ ಪ್ರದರ್ಶನಗಳನ್ನು ನೀಡಿದ್ದರು. ಕರ್ಕಿ ಮೇಳದ ಹೊರತಾಗಿ ಹಲವು ವೃತ್ತಿ ಮೇಳಗಲ್ಲಿ ಅತಿಥಿ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ವ್ಯಕ್ತಿಯಾಗಿ ಕೃಷ್ಣ ಹಾಸ್ಯಗಾರರು ಸರಳ, ಹಸನ್ಮುಖೀ. ಕೆಲವೊಮ್ಮೆ ಮುಗ್ಧ, ಸ್ನೇಹಜೀವಿ, ದೈವಭಕ್ತ. ಹಾಸ್ಯ ಎಂಬುದು ಅವರ ಜೀವನದ ಅವಿಭಾಜ್ಯ ಸ್ವಭಾವ. ಅಬಾಲವೃದ್ಧರ ತನಕ ಪ್ರತಿಯೊಬ್ಬರಲ್ಲೂ ಪ್ರೀತಿಯಿಂದ ಮಾತನಾಡುತ್ತಿದ್ದ ಅವರ ಸಮಯಸ್ಫೂರ್ತಿ ಮತ್ತು ತಿಳಿಹಾಸ್ಯವನ್ನು ಎಂದಿಗೂ ಮರೆಯಲು ಅಸಾಧ್ಯ. ದುಶ್ಚಟಗಳು ಇವರ ಹತ್ತಿರಕ್ಕೆ ಎಂದಿಗೂ ಸುಳಿಯಲಿಲ್ಲ. ಸದಾ ಆರೋಗ್ಯದ ಕುರಿತು ವಿಶೇಷ ಕಾಳಜಿ ಇದ್ದ ಅವರು ಇಳಿವಯಸ್ಸಿನಲ್ಲೂ ಪ್ರತಿನಿತ್ಯ ಕಠಿಣವಾದ ವ್ಯಾಯಾಮ ಮತ್ತು ಆಹಾರಸೇವನೆಯಲ್ಲಿ ಸಂಯಮ ಇವುಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು 87ನೇ ವಯಸ್ಸಿನವರೆಗೂ ಪೂರ್ಣಪ್ರಮಾಣದ ಸಿಂಹ, ಪ್ರೇತ, ಬಣ್ಣದವೇಷ ಮಾಡುತ್ತಿದ್ದರು. ನಮ್ಮ ಕುಟುಂಬದಲ್ಲಿ ಕೆಲವು ಹಿರಿಯರು ದೀರ್ಘಾಯುಷಿಗಳಾಗಿದ್ದರೂ ಶತಕದ ಗಡಿಯನ್ನು ದಾಟಿರಲಿಲ್ಲ. ಕೃಷ್ಣ ಹಾಸ್ಯಗಾರರ ಆರೋಗ್ಯವನ್ನು ಕಂಡಾಗ ಅವರು ಶತಾಯುಷಿಗಳಾಗುವ ಬಲವಾದ ನಿರೀಕ್ಷೆ ನಮಗೆ ಇತ್ತು. ಆದರೆ ಕಳೆದೈದು ವರ್ಷಗಳಲ್ಲಿ ಮಡದಿಯ ಅಗಲುವಿಕೆ, ನಂತರ ಹಿರಿಯ ಮಗನ ಅಕಾಲ ಮರಣದಿಂದ ಮೌನಕ್ಕೆ ಜಾರಿದ ಕೃಷ್ಣ ಹಾಸ್ಯಗಾರರು, ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋದರು. 94ನೇ ವರ್ಷದ ಅಂಚಿನಲ್ಲಿ ನಮ್ಮನ್ನು ಅಗಲಿದರು. 

ಹಳೆಯ ಬಡಾಬಡಗು ಸಭಾಹಿತ ಮಟ್ಟಿನ ಪ್ರತ್ಯಕ್ಷದರ್ಶಿಗಳಾಗಿದ್ದ ಅವರಲ್ಲಿ ಹಿಂದಿನ ಉತ್ತರ ಕನ್ನಡ ಯಕ್ಷಗಾನ ಪರಂಪರೆಯ ಕುರಿತ ಹಲವು ಅಮೂಲ್ಯ ವಿಷಯಗಳು ಇದ್ದುವು. ಮೂರು ವರ್ಷಗಳ ಹಿಂದೆ ಸಂದರ್ಶನ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಅವರ ಜ್ಞಾನವನ್ನು ಸಾಧ್ಯವಾದಷ್ಟರ ಮಟ್ಟಿಗೆ ದೃಶ್ಯಮಾಧ್ಯಮದಲ್ಲಿ ದಾಖಲಿಸುವ ಪ್ರಯತ್ನವನ್ನು ನಾನು ಮಾಡಿದ್ದೆ. ಎಲ್ಲವೂ ಸಜ್ಜಾಗಿದ್ದ ಕಾಲದಲ್ಲಿ ಅವರ ಅನಿರೀಕ್ಷಿತ ಅನಾರೋಗ್ಯ ಮತ್ತು ಕೆಲವು ಸ್ಥಳೀಯ ತಾಂತ್ರಿಕ ಕಾರಣಗಳಿಂದ ಆ ಆಸೆ ಈಡೇರಲಿಲ್ಲ. ಆ ನಿರಾಸೆ ನನ್ನಲ್ಲಿ ಇಂದಿಗೂ ಉಳಿದುಕೊಂಡಿದೆ.

ಕರ್ಕಿ ಆನಂದ ಹಾಸ್ಯಗಾರ, ಅಮೆರಿಕ

Advertisement

Udayavani is now on Telegram. Click here to join our channel and stay updated with the latest news.

Next