ಯಕ್ಷಗಾನ ಮತ್ತು ಸಿನಿಮಾ ಎರಡೂ ಶ್ರೇಷ್ಠ ಕಲೆಗಳು. ಆದರೆ ಯಕ್ಷಗಾನದಲ್ಲಿ ಸಿನಿಮೀಯತೆ ಎನ್ನುವ ವಿಚಾರ ಬಂದಾಗ ಸಾಂಪ್ರದಾಯಿಕ ಪ್ರೇಕ್ಷಕರು ಆಕ್ಷೇಪಿಸುವುದು ಸಹಜ. ಏನೇ ವಿರೋಧ, ಆಕ್ಷೇಪಗಳಿದ್ದರೂ ಅದೆಷ್ಟೋ ಸಿನಿಮಾ ಕಥೆಗಳು, ಸಿನಿಮಾ ಹಾಡುಗಳು ಯಕ್ಷಗಾನ ರಂಗಕ್ಕೆ ಬಂದು ಭರ್ಜರಿ ಪ್ರದರ್ಶನ ಕಂಡು ಹೊಸ ಬಗೆಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ, ಗಲ್ಲಾಪೆಟ್ಟಿಗೆ ಸೂರೆಗೈಯುವಲ್ಲಿ ಯಶಸ್ವಿಯಾಗಿವೆ.
ಆರಾಧನಾ ಕಲೆಯಾಗಿರುವ ತನ್ನದೇ ಆದ ವಿಭಿನ್ನತೆಯನ್ನು ಒಳಗೊಂಡಿರುವ ಯಕ್ಷಗಾನ ಕಲೆಯು ಸೀಮಿತ ಪ್ರದೇಶಕ್ಕೆ ಸೀಮಿತ ಪ್ರೇಕ್ಷಕರಿಗೆ ಮೀಸಲಾಗಿರುವುದಾದರೂ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರದರ್ಶನ ಕಂಡು ಇಂದಿಗೂ ಹೊಸ ಬಗೆಯ ಜೀವಂತಿಕೆಯನ್ನು ತನ್ನದೇ ಆದ ಪ್ರಾಬಲ್ಯವನ್ನೂ ಉಳಿಸಿಕೊಂಡು ವೈಭವಕ್ಕೆ ಸಾಕ್ಷಿಯಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ‘ಕುಂದಾಪುರ ಕನ್ನಡ ಹಬ್ಬ’ದಲ್ಲಿ ಅದ್ದೂರಿ ಜೋಡಾಟವೊಂದು ನಡೆದ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಯಕ್ಷಗಾನೀಯವಾಗಿರುವ ಚಿತ್ರವೊಂದನ್ನು ಬೆಳ್ಳಿ ತೆರೆಯ ಮೇಲೆ ಬಿಡುಗಡೆ ಮಾಡುವ ಸಾಹಸಕ್ಕೆ ಸಿದ್ಧವಾಗಿದ್ದಾರೆ. ಈಗಾಗಲೇ ಯಕ್ಷಗಾನ ರಂಗದಲ್ಲಿ ಭಾರೀ ಪ್ರಮಾಣದಲ್ಲಿ ಸ್ಥಿತ್ಯಂತರಗಳು, ಬದಲಾವಣೆಗಳ ಗಾಳಿ ವಿಪರೀತವಾಗಿ ಬೀಸುತ್ತಿರುವ ಕಾಲದಲ್ಲಿ
‘ವೀರ ಚಂದ್ರಹಾಸ’ ಎಂಬ ಚಿತ್ರದ ಟೀಸರ್ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಬಯಲಾಟವಾಗಿದ್ದ ಯಕ್ಷಗಾನವು ರಂಗಸ್ಥಳಕ್ಕೆ ಬಂದು ವಾಣಿಜ್ಯೀಕರಣಗೊಂಡು ದಶಕಗಳೇ ಕಳೆದು ಹೋಯಿತು. ಸದ್ಯ ಅನೇಕ ವಾಣಿಜ್ಯ ಉದ್ದೇಶದ ಮೇಳಗಳು ರಂಗದಿಂದ ಮರೆಯಾಗಿ ಬಡಗುತಿಟ್ಟಿನಲ್ಲಿ ಒಂದೆರಡು ಮೇಳಗಳು ಮಾತ್ರ ಉಳಿದುಕೊಂಡಿವೆ. ಸದ್ಯ ಯಕ್ಷಗಾನ ರಂಗದಲ್ಲಿ ಅನೇಕ ಹರಕೆ ಮೇಳಗಳು, ಬಯಲಾಟ ಮೇಳಗಳಿದ್ದರೂ ಪ್ರೇಕ್ಷಕರ ಕೊರತೆಯೂ ಎದ್ದು ಕಾಣುತ್ತಿದೆ. ಕಾಲಮಿತಿಯ ಪರಿಧಿಯೊಳಗೆ ಯಕ್ಷಗಾನ ಬಂದು ನಿಲ್ಲುವ ಅನಿವಾರ್ಯತೆಯೂ ಎದುರಾಗಿದೆ. ಈ ಸಂದರ್ಭದಲ್ಲಿ ಟೈಟಲ್ ಮೂಲಕವೇ ಕುತೂಹಲ ಮತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿರುವುದು ‘ವೀರ ಚಂದ್ರಹಾಸ’.
ಸಾಮಾನ್ಯವಾಗಿ ಯಕ್ಷಗಾನ ಪ್ರೇಕ್ಷಕರಿಗೆ ‘ಭಕ್ತ ಚಂದ್ರಹಾಸ’ ಎನ್ನುವ ಪ್ರಸಂಗ ಚಿರಪರಿಚಿತ. ಮಹಾಮಂತ್ರಿ ದುಷ್ಟಬುದ್ದಿಯ ಅಧಿಕಾರದ ಆಸೆಗಾಗಿ ಬಲಿಯಾಗಬೇಕಿದ್ದ ಅನಾಥ ರಾಜಮನೆತನದ ಬಾಲಕ ಚಂದನಾವತಿಯಲ್ಲಿ ಚಂದ್ರಹಾಸನಾಗಿ ಸಾತ್ವಿಕ ಗುಣ ಸಂಪನ್ನನಾಗಿ ಕಾಣಿಸಿಕೊಂಡು ಬದುಕಿನಲ್ಲಿ ಏಳಿಗೆ ಕಂಡುಕೊಳ್ಳುವ ಕಥೆ. ಅನೇಕ ರೋಚಕ ತಿರುವಿನ ಕಥೆಗಳಿಂದ ಕೂಡಿ ಕೊನೆಗೆ ಸುಖಾಂತ್ಯ ಕಾಣುವ ಪ್ರಸಂಗ. ‘ಚಂದ್ರಹಾಸ ಚರಿತ್ರೆ’, ‘ಮಹಾಮಂತ್ರಿ ದುಷ್ಟಬುದ್ದಿ’ ಎನ್ನುವ ಹೆಸರೂ ಪ್ರಸಂಗಕ್ಕೆ ಸಂದರ್ಭಾನುಸಾರವಾಗಿ ನೀಡಲಾಗಿದೆ. ಆದಿಯಿಂದ ಅಂತ್ಯದ ವರೆಗೆ ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಯಕ್ಷಗಾನದ ಸಾರ್ವಕಾಲಿಕ ಅತ್ಯುತ್ತಮ ಆಗ್ರ ಹತ್ತು ಪ್ರಸಂಗಗಳಲ್ಲಿ ಚಂದ್ರಹಾಸ ಚರಿತ್ರೆ ಒಂದು ಎನ್ನುವುದು ಅತಿಶಯೋಕ್ತಿ ಅಲ್ಲ. ಇಂದಿಗೂ ಆ ಪ್ರಸಂಗ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಹಿಂದೂ ಪುರಾಣಗಳಲ್ಲಿ ಕುಂತಲ ಸಾಮ್ರಾಜ್ಯದ ರಾಜ ಚಂದ್ರಹಾಸನ ಕಥೆ ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ವಿವರಿಸಲಾಗಿದೆ. ಯುಧಿಷ್ಠಿರನ ಅಶ್ವಮೇಧಕ್ಕೆ ಬೆಂಬಲ ನೀಡಿ ಶ್ರೀ ಕೃಷ್ಣನ ಜತೆಯಲ್ಲಿದ್ದ ಅರ್ಜುನನೊಂದಿಗೆ ಚಂದ್ರಹಾಸ ಸ್ನೇಹ ಬೆಳೆಸುತ್ತಾನೆ. ಚಂದ್ರಹಾಸನು ತನ್ನ ಮಗ ಮಕರಾಕ್ಷನನ್ನು ರಾಜನಾಗಿ ಅಭಿಷೇಕ ಮಾಡಿದ ಬಳಿಕ ಅಶ್ವಮೇಧಕ್ಕೆ ಸಹಾಯ ಮಾಡಲು ಅರ್ಜುನನ ಸೈನ್ಯದೊಂದಿಗೆ ಸೇರುತ್ತಾನೆ.
ಚಂದ್ರಹಾಸನ ಕಥೆಯನ್ನು ಕವಿ ಲಕ್ಷ್ಮೀಶನ ಕನ್ನಡ ಮಹಾಕಾವ್ಯ ಜೈಮಿನಿ ಭಾರತದಲ್ಲೂ ಚಿತ್ರಿಸಲಾಗಿದೆ. ರಾಜಕುಮಾರ ಚಂದ್ರಹಾಸನ ಜನಪ್ರಿಯ ಕಥೆ ಈಗಾಗಲೇ 1965 ರಲ್ಲಿ ಚಲನಚಿತ್ರವೂ ಆಗಿದೆ. ಬಿ.ಎಸ್. ರಂಗ ನಿರ್ದೇಶನ ಮತ್ತು ನಿರ್ಮಿಸಿದ ಚಿತ್ರದಲ್ಲಿ ಡಾ.ರಾಜಕುಮಾರ್ , ಉದಯಕುಮಾರ್ , ಕೆ.ಎಸ್. ಅಶ್ವಥ್ ,ನರಸಿಂಹರಾಜು, ಲೀಲಾವತಿ, ಜಯಂತಿ ಅವರಂತಹ ದಿಗ್ಗಜ ನಟ, ನಟಿಯರು ನಟಿಸಿದ್ದರು.
ಸಿನಿಮಾದಲ್ಲಿ ಯಕ್ಷಗಾನ..ಯಕ್ಷಗಾನದಲ್ಲಿ ಸಿನಿಮಾ ಹೊಸದೇನಲ್ಲ…!!!
ಸಿನಿಮಾದಲ್ಲಿ ಯಕ್ಷಗಾನ ವೇಷಭೂಷಣಗಳು, ಯಕ್ಷಗಾನ ಸನ್ನಿವೇಶಗಳು ಸೇರಿಸಿರುವುದು ಇದೆ ಮೊದಲೇನಲ್ಲ. ಅನೇಕ ಸಿನಿಮಾಗಳ ಹಾಡುಗಳಲ್ಲಿ ಅತ್ಯಾಕರ್ಷಕವಾಗಿರುವ ಯಕ್ಷಗಾನ ವೇಷಭೂಷಣಗಳನ್ನು ಧರಿಸಿದ್ದವರನ್ನು ಕುಣಿಸಲಾಗಿತ್ತು. ಈ ಬಗ್ಗೆ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ ದೈವಾರಾಧನೆಯ ವಿಚಾರದಲ್ಲಿ ಯಾರಾದರೂ ಅಣಕ ಮಾಡಿದಾಗ ತೋರುವ ರೀತಿಯಲ್ಲಿ ವಿರೋಧ ತೋರುವ ಧೈರ್ಯ ಮತ್ತು ಒಗ್ಗಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಇಲ್ಲವೆನ್ನುವುದು ಸ್ಪಷ್ಟ.
ಹಲವು ಭಾಷೆಗಳಲ್ಲಿ ಯಶಸ್ಸಿನ ಮೂಲಕ ಗಲ್ಲಾಪೆಟ್ಟಿಗೆ ಸೂರೆಗೈದಿದ್ದ ‘ನಾಗವಲ್ಲಿ’ಯ ಕಥೆ ಯಕ್ಷಗಾನವಾಗಿ ಹೊಸದೊಂದು ಕ್ರಾಂತಿ ಎಬ್ಬಿಸಿತ್ತು. ‘ಬಾಹುಬಲಿ’ ಚಿತ್ರದ ಕಥೆಯೂ ಯಕ್ಷಗಾನ ಪ್ರಸಂಗವಾಗಿ ಹೊಸತನದ ಮೂಲಕ ಸೂಪರ್ ಹಿಟ್ ಎನ್ನುವ ಪಟ್ಟ ಗಳಿಸಿಕೊಳ್ಳುವಲ್ಲಿ, ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ದೈವದ ಮಹಿಮೆ, ಭೂತಾರಾಧನೆಯ ವೈಭವ ವಿಶ್ವಕ್ಕೆ ತೆರೆದಿಟ್ಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ಬಳಿಕ ಯಕ್ಷಗಾನದ ಕುರಿತಾಗಿ ಬರುತ್ತಿರುವ ‘ವೀರ ಚಂದ್ರಹಾಸ’ ಸಹಜವಾಗಿ ಚಿತ್ರರಂಗದಲ್ಲಿ ಅಲ್ಲದಿದ್ದರೂ ಯಕ್ಷಗಾನ ರಂಗದಲ್ಲಿ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅದಕ್ಕೆ ಟೀಸರ್ ಕೂಡ ಕಾರಣವಾಗಿದೆ. ಕಲಾವಿದರ ಕಥೆಯೋ? ಚಂದ್ರಹಾಸನ ಕಥೆಯೋ ಎನ್ನುವುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಕರಾವಳಿಯ ಪ್ರತಿಭಾ ಸಂಪನ್ನ ತಾರೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಯಕ್ಷಗಾನದ ಮೇಲಿನ ಪ್ರೀತಿಗೆ ಯಾರೂ ಮೆಚ್ಚಲೇ ಬೇಕು. ಯಕ್ಷಗಾನ ರಂಗದ ಪ್ರತಿಭಾವಂತ ಯುವ ಕಲಾವಿದರನ್ನು ಬಳಸಿಕೊಂಡು ಚಿತ್ರ ಮಾಡುತ್ತಿರುವುದು ಭರವಸೆ ಮೂಡಿಸಿದೆ. ಪರಿಪೂರ್ಣವಾಗಿ ತಾಳ, ಮದ್ದಳೆ, ಚಂಡೆ ಸದ್ದಿನಲ್ಲೆ ಮೇಳೈಸುವ ಯಕ್ಷಗಾನದ ಸಂಗೀತ ಚಿತ್ರದಲ್ಲಿ ಹೇಗಿರಲಿದೆ? ಎನ್ನುವುದು ಯಕ್ಷ ಪ್ರೇಕ್ಷಕರ ಪ್ರಶ್ನೆಯಾಗಿದೆ.
ಚಿತ್ರದ ತಾರಾಗಣದಲ್ಲಿ ಪ್ರಸಿದ್ಧ ಕಲಾವಿದರಾದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಹೆಗಡೆ ಕಡಬಾಳ, ಹಾಸ್ಯಗಾರರಾದ ಶ್ರೀಧರ್ ಕಾಸರಕೋಡು, ರವೀಂದ್ರ ದೇವಾಡಿಗ ಕಮಲಶಿಲೆ, ಸಿನಿಮಾ ಮತ್ತು ಕಿರುತೆರೆಯಲ್ಲೂ ಮಿಂಚಿರುವ ನಾಗಶ್ರೀ ಜಿ.ಎಸ್., ಶಿಥಿಲ್ ಶೆಟ್ಟಿ,ನಾಗರಾಜ್ , ಗುಣಶ್ರೀ ಎಂ ನಾಯಕ್, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಸೇರಿ ಅನೇಕರು ಬಣ್ಣ ಹಚ್ಚಿರುವುದರಿಂದ ಎಲ್ಲರ ಅಭಿಮಾನಿಗಳ ಮೂಲಕ ಈಗಾಗಲೇ ಒಂದು ಹಂತದ ಪ್ರಚಾರವೂ ಚಿತ್ರಕ್ಕೆ ದೊರಕಿದೆ.
ಯಕ್ಷಗಾನ ರಂಗದಲ್ಲಿ ಕಾಲಾನುಕಾಲಕ್ಕೆ ಅನೇಕ ಬದಲಾವಣೆಗಳು ನಡೆಯುತ್ತಾ ಬಂದಿರುವುದು ಸಹ್ಯ ಎಂದು ಅನೇಕರು ಹೇಳಿದರೂ ನೈಜ ಯಕ್ಷಗಾನ ಚಿತ್ರಣಕ್ಕೆ ಹೊಡೆತಗಳೂ ಬಿದ್ದಿದೆ ಎನ್ನುವುದು ಹಿರಿಯ ಕಲಾವಿದರು ಮತ್ತು ಯಕ್ಷಾಭಿಮಾನಿಗಳ ನೋವು. ‘ಕಾಂತಾರ’ ಚಿತ್ರದಿಂದ ದೊಡ್ಡ ಮಟ್ಟದ ಯಶಸ್ಸು,ಖ್ಯಾತಿ ಚಿತ್ರ ರಂಗಕ್ಕೆ ದೊರಕಿತ್ತು. ಅಪಾರ ಶ್ರಮ ಮತ್ತು ದಣಿವಿನಿಂದ ಬೆಳೆದು ಬಂದಿರುವ ಆರಾಧನಾ ಕಲೆ ಯಕ್ಷಗಾನಕ್ಕೆ ಚಲನ ಚಿತ್ರವೊಂದು ಎಷ್ಟರ ಮಟ್ಟಿಗೆ ಲಾಭ ಮಾಡಿಕೊಡಲಿದೆ? ಯಾವ ರೀತಿಯಲ್ಲಿ ಯಕ್ಷಗಾನದ ಮಹಿಮೆಯನ್ನು, ಮಹತ್ವಿಕತೆಯನ್ನು, ವೈಭವವನ್ನು ಸಾರಲಿದೆ ಎನ್ನುವ ನಿರೀಕ್ಷೆ ಯಕ್ಷರಂಗದ್ದು, ಚಿತ್ರರಂಗದ್ದು.
*ವಿಷ್ಣುದಾಸ್ ಪಾಟೀಲ್ ಗೋರ್ಪಾಡಿ