Advertisement

ಯಕ್ಷಗಾನ ಬ್ಯಾಲೆಗೆ ಮನಸೋತ ಕಲಾಸಕ್ತರು

01:13 AM Jun 24, 2019 | Lakshmi GovindaRaj |

ಬೆಂಗಳೂರು: ಸಭಾಂಗಣದ ಹೊರಗೆ ಮಳೆಯ ತಂಪಿತ್ತು. ಒಳಗೆ ಸಂಗೀತ ಸುಧೆಯ ಕಂಪಿತ್ತು. ಹೀಗಾಗಿ, ತುಂತುರು ಮಳೆಯಲ್ಲಿ ಮಿಂದೆದ್ದು ಬಂದ ಅಸಂಖ್ಯಾತ ಕಲಾಸಕ್ತರು ಸಂಗೀತದ ರಸದೋಕುಳಿಯ ಸಿಂಚನದಲ್ಲಿ ತೇಲಿದರು.

Advertisement

ಏಕವ್ಯಕ್ತಿ ರಂಗ ಪ್ರಯೋಗಕೆ ತಲೆದೂಗಿ, ಯಕ್ಷಗಾನ ಬ್ಯಾಲೆಗೆ ಮನಸೋತರು. ವಿವಿಧ ರಾಗಗಳ ತೂಂತನಕ್ಕೆ ತಲೆದೂಗಿದರು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಭಾನುವಾರ ರವೀಂದ್ರ ಕಲಾಕ್ಷೇತ್ರ ಸಾಕ್ಷಿಯಾಯಿತು. ಕರ್ನಾಟಕ ಕಲಾದರ್ಶಿನಿ ಹಮ್ಮಿಕೊಂಡಿದ್ದ “ಶಿವರಾಮ ಕಾರಂತ ಉತ್ಸವ-2019′ ಕಾರಂತರ ಕನಸುಗಳನ್ನು ಮತ್ತೆ ತೆರೆದಿಟ್ಟಿತು.

ಉಡುಪಿಯ ಕೊಡವೂರಿನ ನೃತ್ಯ ನಿಕೇತನ ಪ್ರಸ್ತುತಿ ಪಡಿಸಿದ “ಏಕವ್ಯಕ್ತಿ ರಂಗ ಪ್ರಯೋಗ’ ಕಲಾಸಕ್ತರಿಗೆ ಮುದ ನೀಡಿತು. ವಿದೂಷಿ ಅನುಘಶ್ರೀ ಅವರ ನೃತ್ಯಗಾಥಾ ಹೊಸ ರೀತಿಯ ರಂಗ ಪ್ರಯೋಗಕ್ಕೆ ಸಾಕ್ಷಿಯಾಯಿತು. ಕಲಾಕ್ಷೇತ್ರದಲ್ಲಿ ನೆರೆದಿದ್ದ ಕಲಾಸಕ್ತರನ್ನು ಹಿಡಿದಿಡುವಲ್ಲಿ ಸಫ‌ಲವಾಯಿತು.

ನೆನಪಾದ ಕಾರಂತರು: ಕರಾವಳಿ ತೀರದಲ್ಲಿ ಯಕ್ಷಗಾನ ಬ್ಯಾಲೆಯ ಮೂಲಕ ವಿಭಿನ್ನ ರೀತಿಯ ಕಲಾ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದ ಕೋಟ ಶಿವರಾಮ ಕಾರಂತರು ಮತ್ತೆ ನೆನಪಾದರು. ಡಾ.ಶಿವರಾಮ ಕಾರಂತರು ವೇಷಭೂಷಣ, ನೃತ್ಯ ಸಂಯೋಜನೆ ಮಾಡಿದ ಯಕ್ಷಗಾನ ಬ್ಯಾಲೆ “ಚಿತ್ರಾಂಗದಾ’ ಪ್ರಸಂಗ, ವಿಧ್ವಾನ್‌ ಸುಧೀರ್‌ ರಾವ್‌ ಕೊಡವೂರು ಮರು ನಿರ್ದೇಶನದಲ್ಲಿ ಮೂಡಿ ಬಂದು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಕಲ್ಪನೆಯಲ್ಲಿ ಈ ಕಾರ್ಯಕ್ರಮ ಮೂಡಿಬಂತು.

ಕಾರಂತ ಪ್ರಶಸ್ತಿ ಪ್ರದಾನ: ಇದೇ ವೇಳೆ ಕರ್ನಾಟಕ ಕಲಾದರ್ಶಿನಿ ಸಂಸ್ಥೆ ನೀಡುವ ಈ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಕಾರ್ಕಳದ ಯಕ್ಷಗಾನ ಭಾಗವತ ಹಾಗೂ ಮೃದಂಗ ಚಂಡೆ ವಾದಕ ಎ.ಪಿ.ಪಾಠಕ್‌ ಭಾಜರಾದರು. ಹಾಗೆಯೇ ಎಚ್‌.ಎಲ್‌.ಭಟ್ಟ ಪ್ರಶಸ್ತಿಗೆ ಬ್ರಹ್ಮಾವರದ ಜಗನ್ನಾಥ ನಾಯಕ್‌ ಶ್ರೇಯಸ್ಕರಾದರು.

Advertisement

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟದವರಗೆ ಪರಿಚಯಿಸಿದ ಶ್ರೇಯಸ್ಸು ಶಿವರಾಮ ಕಾರಂತರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಅಕಾಡೆಮಿಗೆ ಧ್ವನಿಯಾಗಿ: ಈಗಾಗಲೇ ಜಾನಪದ ಅಕಾಡೆಮಿ ಸಾಧಕರಿಗೆ ಜಾನಪದ ಶ್ರೀ ಪ್ರಶಸ್ತಿ ನೀಡುತ್ತಿದ್ದು ಇದೇ ರೀತಿಯಲ್ಲಿ ಯಕ್ಷಗಾನ ಅಕಾಡೆಮಿ ಕೂಡ ಕಾರಂತರ ಹೆಸರಿನಲ್ಲಿ ಯಕ್ಷ ಸಾಧಕರಿಗೆ ಪ್ರಶಸ್ತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಹೀಗಾಗಿ ಅಕಾಡೆಮಿ ಕೂಗಿಗೆ ಧ್ವನಿಯಾಗಿ ಎಂದು ಯಕ್ಷಗಾನ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಯಕ್ಷಗಾನ ಕ್ಷೇತ್ರದಲ್ಲಿ ಇನ್ನೂ ಹಲವರು ಎಲೆಮರೆಯ ಕಾಯಂತೆ ಇದ್ದು ಅವರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಯಕ್ಷಗಾನವನ್ನು ಮತ್ತಷ್ಟು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಶ್ರಮಿಸುತ್ತಿದೆ ಎಂದರು.

ವಿದ್ವಾಂಸ ಡಾ.ಆನಂದರಾಮ ಉಪಾಧ್ಯಾಯ ಮಾತನಾಡಿ, ಯಕ್ಷಗಾನ ಕ್ಷೇತ್ರವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕು. ಶಾಲಾ-ಕಾಲೇಜುಗಳಲ್ಲಿ ಯಕ್ಷಗಾನ ಕಲಿಕೆ ಶುರುವಾಗಬೇಕು ಎಂದು ಹೇಳಿದರು.

ಉದ್ಯಮಿ ಡಿ.ಆರ್‌. ರಾಘವೇಂದ್ರ ಹತ್ವಾರ್‌, ಜಿ.ಶ್ರೀನಿವಾಸ್‌ ರಾವ್‌, ಶ್ರೀನಿವಾಸ ಸಸ್ತಾನ ಸೇರಿದಂತೆ ಮತ್ತಿತರರಿದ್ದರು. ಇದಾದ ಬಳಿಕ ಶ್ರೀನಿವಾಸ ಸಾಸ್ತಾನ ನಿರ್ದೇಶನದ “ವೀರ ಅಭಿಮನ್ಯು’ ಯಕ್ಷಗಾನ ಪ್ರಸ್ತುತ ಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next