Advertisement

ಯಕ್ಷಗಾನ, ಬಯಲಾಟ ಶ್ರೇಷ್ಠ ಕಲೆ: ಸಚಿವ ಪೂಜಾರಿ

12:40 AM Aug 26, 2019 | Lakshmi GovindaRaj |

ಬೆಂಗಳೂರು: ರಾತ್ರಿ ಇಡೀ ನಡೆಯುವ ಯಕ್ಷಗಾನ ಬಯಲಾಟ ಶ್ರೇಷ್ಠ ಕಲೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಕಲಾ ಕದಂಬ ಆರ್ಟ್‌ ಸೆಂಟರ್‌ ಭಾನುವಾರ ಚಾಮರಾಜಪೇಟೆಯ ಉದಯಭಾನು ಕಲಾಸಂಘದಲ್ಲಿ ಏರ್ಪಡಿಸಿದ್ದ ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ಕಟೀಲು ದೇವಸ್ಥಾನದಲ್ಲಿ 6 ಮೇಳಗಳಿದ್ದು, ಮುಂದಿನ 20 ವರ್ಷದವರೆಗೆ ಯಕ್ಷಗಾನ ಪ್ರದರ್ಶನಕ್ಕೆ ನೋಂದಣಿಯಾಗಿವೆ. ಮಂದಾರ್ತಿ ಮೇಳ 12 ವರ್ಷದವರೆಗೆ ನೋಂದಣಿಯಾಗಿದ್ದು, ಯಕ್ಷಗಾನ ಅದ್ಭುತ ಇತಿಹಾಸ ಮತ್ತು ಪರಂಪರೆ ಹೊಂದಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಮತ್ತೂಂದಿಲ್ಲ ಎಂದು ತಿಳಿಸಿದರು.

ಡಾ. ರಾಜ್‌ಕುಮಾರ್‌, ಅಂಬರೀಶ್‌, ವಿಷ್ಣುವರ್ಧನ್‌ ಸೇರಿ ಚಲನಚಿತ್ರ ನಟರಿಗೆ ಮಾತ್ರ ಅಭಿಮಾನಿಗಳ ಸಂಘಗಳಿದ್ದು, ಇತಿಹಾಸದಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಭಾಗವತರ ಹೆಸರಿನಲ್ಲಿ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ಹಾಗೇ ದಶಕದಿಂದ ಕಾಳಿಂಗ ನಾವಡ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಕಲಾ ಸಾಧಕರಿಗೆ ನೀಡುವ ಗೌರವವಾಗಿದೆ ಎಂದರು.

ಕಾಳಿಂಗ ನಾವಡ ಅವರು ಕಂಚಿನ ಕಂಠದ ಜತೆಗೆ ಯಕ್ಷಗಾನದ ಬದ್ಧತೆ ಹೊಂದಿದ್ದರು. ಅತ್ಯಂತ ಶ್ರೇಷ್ಠ ಭಾಗವತರಾಗಿ ಯಕ್ಷಗಾನದಲ್ಲಿ ದುಡಿದು ಕೊಡುಗೆ ನೀಡಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವ ಶ್ರೀಧರ ಹೆಬ್ಬಾರ್‌ ಅವರು ತೆಂಕು, ಬಡಗು ತಿಟ್ಟುಗಳೆರಡರಲ್ಲೂ ಸಮರ್ಥ ಭಾಗವತರಾಗಿ ಗುರುತಿಸಿಕೊಂಡು ಪ್ರಸಿದ್ಧಿಗೆ ಬಂದವರು ಎಂದು ಶ್ಲಾಘಿಸಿದರು.

ಪತ್ರಕರ್ತ ರವೀಂದ್ರ ಜಿ. ಭಟ್‌ ಮಾತನಾಡಿದರು. ಗಾಯಕಿ ಬಿ.ಕೆ.ಸುಮಿತ್ರಾ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎ.ಹೆಗಡೆ, ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೇಣುಗೋಪಾಲ್‌ ಭಟ್‌, ಹೋಟೆಲ್‌ ಉದ್ದಿಮೆದಾರರ ಸಹಕಾರ ಬ್ಯಾಂಕ್‌ ನಿರ್ದೇಶಕ ರಾಜೀವ್‌ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

ಡಾ.ಶಿವರಾಮ ಗರಡಿಯಲ್ಲಿ ಬೆಳೆದ ಶ್ರೀಧರ ಹೆಬ್ಬಾರ್‌: ಬಾಲ ಕಲಾವಿದರಾಗಿ ಯಕ್ಷಲೋಕಕ್ಕೆ ಕಾಲಿರಿಸಿದ ಶ್ರೀಧರ್‌ ಹೆಬ್ಬಾರ್‌, ಯಕ್ಷಗಾನ ನಾಟ್ಯದ ಜತೆಗೆ ಮದ್ದಳೆ ವಾದನ, ಭಾಗವತಿಕೆ ಅಭ್ಯಾಸ ಮಾಡಿದರು. ಡಾ.ಶಿವರಾಮ ಕಾರಂತರ ಯಕ್ಷ ಒಡನಾಟದಲ್ಲೇ ಬೆಳೆಯುತ್ತಾ ಹಾಂಕಾಂಗ್‌, ಬ್ಯಾಂಕಾಕ್‌, ಇಂಗ್ಲೆಂಡ್‌, ಇಟಲಿ, ರಷ್ಯಾ, ಫ್ರಾನ್ಸ್‌ ಮೊದಲಾದ ದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ್ದಾರೆ.

ತೆಂಕು ಹಾಗೂ ಬಡಗು ತಿಟ್ಟುಗಳೆರಡರಲ್ಲೂ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರಮತಿ, ದಮಯಂತಿ, ಮಾಯಾ ಪೂತನಿ ಮೊದಲಾದ ಗರತಿ, ಶೃಂಗಾರ ಸ್ತ್ರೀ ಪಾತ್ರಗಳನ್ನು ಮಾತ್ರವಲ್ಲದೇ ಸುಧ್ವನ, ತಾಮ್ರಧ್ವಜ, ರಾಮ ಮೊದಲಾದ ಪುರುಷ ಪಾತ್ರಗಳಲ್ಲಿಯೂ ಗಮನ ಸೆಳೆದಿದ್ದಾರೆ. ಪ್ರಸಕ್ತ ವರ್ಷದ ಕಾಳಿಂಗ ನಾವಡ ಪ್ರಶಸ್ತಿ ಪಡೆದಿದ್ದು, ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಫ‌ಲಕ ಹೊಂದಿದೆ.

ಐವತ್ತು ವರ್ಷದಿಂದ ಯಕ್ಷಗಾನ ಕೇತ್ರದಲ್ಲಿ ತೊಡಗಿಸಿಕೊಂಡಿದ್ದು, ಕಾಳಿಂಗ ನಾವಡ ಅವರ ಹೆಸರಿನ ಪ್ರಶಸ್ತಿ ಬಂದಿರುವುದು ನನ್ನ ಸೌಭಾಗ್ಯ. ಕಲಾ ಕದಂಬ ಆರ್ಟ್‌ ಸೆಂಟರ್‌ ಮತ್ತು ಕಾಳಿಂಗ ನಾವಡರ ಅಭಿಮಾನಿಗಳು ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಪುಣ್ಯದ ಕೆಲಸ ಮಾಡಿದ್ದಾರೆ.
-ಶ್ರೀಧರ ಹೆಬ್ಬಾರ್‌, ಕಾಳಿಂಗ ನಾವಡ ಪ್ರಶಸ್ತಿ ಪುರಸ್ಕೃತ

Advertisement

Udayavani is now on Telegram. Click here to join our channel and stay updated with the latest news.

Next