Advertisement

ಯಕ್ಷಗಾನ, ಬೀದಿನಾಟಕದಿಂದ ಮತದಾನ ಅರಿವು

10:18 PM Mar 31, 2019 | Team Udayavani |

ಉಡುಪಿ: ಜಿಲ್ಲಾ ಸ್ವೀಪ್‌ ಸಮಿತಿ ಕಳೆದ ಬಾರಿ ಜಿಲ್ಲೆಯಲ್ಲಿ ನಡೆದ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನ ನಡೆದ ಮತಗಟ್ಟೆಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಯಕ್ಷಗಾನ ಮತ್ತು ಬೀದಿ ನಾಟಕಗಳನ್ನು ನಡೆಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಕೂಲಿ ಕಾರ್ಮಿಕರಲ್ಲದೇ, ಮತದಾನ ದಿನದಂದು ರಜೆ ಮಾಡಿ ಪ್ರವಾಸಕ್ಕೆ ಹೋಗುವ ನೌಕರರು, ರಜಾ ದಿನವಿಡೀ ಕ್ರಿಕೆಟ್‌ ಆಟವಾಡುವ ಯುವಕರಿಗೆ, ಚುನಾವಣೆಯಲ್ಲಿ ರಾಜಕೀಯ ಅಭ್ಯರ್ಥಿಗಳು ನೀಡುವ ಹಣ, ಮದ್ಯದ ಆಮಿಷಕ್ಕೆ ಒಳಗಾಗಿ, ಮತದಾನ ಮಾಡುವ ಇಚ್ಛೆ ಇದ್ದರೂ ಕುಡಿತದ ಅಮಲಿನಲ್ಲಿ ಮತದಾನ ಮಾಡದೇ ಮತ ವಂಚಿತರಾಗುವವರಿಗೆ ಅರಿವು ಮೂಡಿಸುವ ಪ್ರಸಂಗಗಳ ಮೂಲಕ ಎಲ್ಲ ವರ್ಗದ ಜನರಿಗೆ ಈ ಬೀದಿ ನಾಟಕ ಅರಿವು ಮೂಡಿಸಲಿದೆ. ಸುರತ್ಕಲ್‌ನ ಕರಾವಳಿ ಜಾನಪದ ಕಲಾ ವೇದಿಕೆ ಮೂಲಕ ಬೀದಿ ನಾಟಕ ಏರ್ಪಡಿಸಲಾಗುತ್ತಿದೆ. ಬೀದಿ ನಾಟಕದಲ್ಲಿ ಮತದಾನ ಕುರಿತು ಜಾಗೃತಿಯಲ್ಲದೇ ಮತದಾರರ ಸಹಾಯವಾಣಿಯ ಬಗ್ಗೆ, ಜಿಲ್ಲಾಡಳಿತದಿಂದ ಮತದಾರರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ಕಲಾ ವೇದಿಕೆಯ ಗಿರೀಶ್‌ ನಾವಡ ಬೀದಿ ನಾಟಕ ರಚಿಸಿದ್ದು, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್‌ ಪ್ರಾಯೋಗಿಕವಾಗಿ ಬೀದಿ ನಾಟಕ ವೀಕ್ಷಿಸಿ, ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ಸಮಿತಿಯಿಂದ ಸಿದ್ದಪಡಿಸಿರುವ ಯಕ್ಷಗಾನ ಕಥಾ ಪ್ರಸಂಗದಲ್ಲಿ ಮತದಾನ ಮಾಡುವ ಬಗ್ಗೆ ಅಲ್ಲದೇ, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಅರ್ಹರನ್ನು ಆಯ್ಕೆ ಮಾಡುವ ಬಗ್ಗೆ ಮಹಾರಾಜನ ಮೂಲಕ ಜನತೆಗೆ ಸಂದೇಶ ನೀಡಲಾಗುತ್ತಿದೆ.
ಕರಾವಳಿಯಲ್ಲಿ ಯಕ್ಷಗಾನವು ವೈಶಿಷ್ಟತೆಯೊಂದಿಗೆ ಹೆಚ್ಚು ಜನಪ್ರಿಯವಾಗಿದೆ.

Advertisement

ಇದರ ಮೂಲಕ ನೀಡುವ ಸಂದೇಶಗಳು ಶೀಘ್ರವಾಗಿ ಸಾರ್ವಜನಿಕರಿಗೆ ತಲುಪುವುದರಿಂದ ಸ್ವೀಪ್‌ ಸಮಿತಿ ಇದನ್ನು ಆಯ್ಕೆ ಮಾಡಿದೆ. ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ನಿವೃತ್ತ ಅಧಿಕಾರಿ ನಾಗೇಶ್‌ ಶಾನುಭಾಗ್‌ ಪ್ರಸಂಗ ರಚಿಸಿದ್ದು, ಕೋಟದ ಕಲಾಪೀಠ ತಂಡದ ಕಲಾವಿದರು ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next