Advertisement

2018ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಘೋಷಣೆ

10:01 AM Jul 09, 2019 | keerthan |

ಮಂಗಳೂರು/ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2018ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ಪ್ರಶಸ್ತಿ ಪ್ರಕಟವಾಗಿದ್ದು, ಆಯ್ಕೆಯಾಗಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಯಕ್ಷಗಾನ ಕಲಾವಿದರ ಪರಿಚಯ ಇಲ್ಲಿದೆ.

Advertisement

ಮಾಂಬಾಡಿ ಸುಬ್ರಹ್ಮಣ್ಯ ಭಟ್‌
ವಿಟ್ಲ: ತೆಂಕುತಿಟ್ಟು ಹಿಮ್ಮೇಳದ ಶಿಕ್ಷಣಕ್ಕೊಂದು ಹೊಸ ಆಯಾಮ ಕೊಟ್ಟು, ಧರ್ಮಸ್ಥಳ “ಕೇಂದ್ರ’ದಲ್ಲಿ ಮೊತ್ತ ಮೊದಲ ಹಿಮ್ಮೇಳ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಜ್ಯಪ್ರಶಸ್ತಿ ಪುರಸ್ಕೃತ ಕೀರ್ತಿಶೇಷ ಮಾಂಬಾಡಿ ನಾರಾಯಣ ಭಾಗವತ ಅವರ ಪುತ್ರರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಜನಿಸಿದ್ದು 1949 ಮಾ. 27ರಂದು. ಅವರ ಮೊದಲ ವೃತ್ತಿ ಜೀವನ 14ನೇ ವಯಸ್ಸಿನಲ್ಲಿ ಕಟೀಲು ಮೇಳದಿಂದ ಪ್ರಾರಂಭ. ತಂದೆಯವರ ಬಾಲಪಾಠದ ಅನಂತರ ಕುದ್ರೆಕೋಡ್ಲು ರಾಮ ಭಟ್ಟ, ನೆಡ್ಲೆ ನರಸಿಂಹ ಭಟ್ಟರ ಸಾಹಚರ್ಯದಿಂದ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡ “ಸುಬ್ಬಣ್ಣ’, ಮೃದಂಗದ ನಡೆಗಳನ್ನು ಅಭ್ಯಸಿಸಿದ್ದು ಕಾಂಚನ ರಾಮ ಭಟ್ಟರಲ್ಲಿ. ಮೂಲ್ಕಿ ಮೇಳ, ಕೂಡ್ಲು ಮೇಳಗಳಲ್ಲಿ ತಲಾ ಎರಡೆರಡು ವರ್ಷ ವ್ಯವಸಾಯ ನಡೆಸಿದ್ದು ಕಲಾಸೇವೆಯ ಉಚ್ಛಾಯದ ಪರ್ವ.
9 ವರ್ಷ ಶ್ರೀ ಧರ್ಮಸ್ಥಳ ಮೇಳದ ತಿರುಗಾಟ ಹಾಗೂ ಕಡತೋಕ ಮಂಜುನಾಥ ಭಾಗವತರ ಜತೆಗಾರಿಕೆ. ಮುಂದೆ 3 ವರ್ಷ ಕದ್ರಿ ಮೇಳದಲ್ಲಿ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಜತೆಗಿನ ವ್ಯವಸಾಯ. 20 ವರ್ಷ ವ್ಯವಸಾಯಿಯಾಗಿದ್ದ ಮಾಂಬಾಡಿ ಅವರು ಜತೆ ಜತೆಗೇ ಹಿಮ್ಮೇಳ ಶಿಕ್ಷಣಕ್ಕೂ ಕೈ ಹಚ್ಚಿದ್ದು 1968ರಲ್ಲಿ.
ಪ್ರಶಸ್ತಿಗಳು: ಕಲಾಸೇವೆ ಗುರುತಿಸಿ ದೆಹಲಿ ಕನ್ನಡ ಸಂಘ, ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್‌, ದಕ್ಷಿಣ ಕನ್ನಡ ಜಿಲ್ಲಾಡ‌ಳಿತ ದಿಂದ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡದಲ್ಲಿ ನಡೆದ ಅಖೀಲ ಕರ್ನಾಟಕ ಸಾಹಿತ್ಯ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಗೌರವ, ಊರ ಪರವೂರ ಸಂಘಸಂಸ್ಥೆಗಳ ಸಮ್ಮಾನಗಳು ಲಭಿಸಿವೆ.

ಗುಂಡ್ಮಿ ಕೆ. ಸದಾನಂದ ಐತಾಳ
ಕೋಟ: ಗುಂಡ್ಮಿ ಕೆ. ಸದಾನಂದ ಐತಾಳ ಅವರು ಯಕ್ಷಗಾನದ ಸರ್ವಾಂಗದಲ್ಲೂ ಪರಿಣಿತ ವಿದ್ವಾಂಸರಾಗಿದ್ದು, ಯಕ್ಷಗಾನ ಗುರುಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ.
1952ರ ಡಿ.8ರಂದು ಸಾಸ್ತಾನ ಸಮೀಪ ಗುಂಡ್ಮಿಯಲ್ಲಿ ಜನಿಸಿದ ಅವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಐರೋಡಿಯಲ್ಲಿ ನಾರ್ಣಪ್ಪ ಉಪ್ಪೂರ ಅವರ ಗರಡಿಯಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಅಮೃತೇಶ್ವರಿ, ಮಾರಣಕಟ್ಟೆ, ಮಂದಾರ್ತಿ ಮೇಳಗಳಲ್ಲಿ ಭಾಗವತರಾಗಿ ವೃತ್ತಿ ನಡೆಸಿ, ಅನಂತರ ಹವ್ಯಾಸಿ ರಂಗದಲ್ಲಿ ನಿರಂತರ ನಾಲ್ಕು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ಕರಾವಳಿಯ ಅನೇಕ ಹವ್ಯಾಸಿ ಸಂಘ-ಸಂಸ್ಥೆಗಳಲ್ಲಿ ಗುರುಗಳಾಗಿ ದೇಶಾದ್ಯಂತ ವಿವಿಧ ತಂಡಗಳೊಡನೆ ಸಂಚರಿಸಿ ಪ್ರದರ್ಶನ ನೀಡಿದ್ದಾರೆ.

ನಾರಾಯಣ ಶಬರಾಯ, ರಾಘವೇಂದ್ರ ಮಯ್ಯ, ಸುರೇಶ ಶೆಟ್ಟಿ, ಮಂಜುನಾಥ ಗೌಡ, ಕೊಳಗಿ ಕೇಶವ ಹೆಗಡೆ, ಕಿಗ್ಗ ಹಿರಿಯಣ್ಣ ಆಚಾರ್‌ ಮುಂತಾದ ಶಿಷ್ಯರನ್ನು ಹೊಂದಿದ್ದಾರೆ.  ಪ್ರಸ್ತುತ ಯಕ್ಷಗಾನ ಕೇಂದ್ರ ಹಂಗಾರಕಟ್ಟೆ-ಐರೋಡಿಯ ಪ್ರಾಚಾರ್ಯರಾಗಿ, ಮೂಡುಬಿದಿರೆಯ ಆಳ್ವಾಸ್‌ ಪ್ರತಿಷ್ಠಾನದ ಬಡಗುತಿಟ್ಟು ಯಕ್ಷಗಾನದ ಗುರು ಹಾಗೂ ಕರ್ನಾಟಕ ಸರಕಾರದ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಹಿರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ: ಎಂ. ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಕಾಳಿಂಗ ನಾವುಡ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಕುಂಬಳೆ ಶ್ರೀಧರ ರಾವ್‌
ಬೆಳ್ತಂಗಡಿ: ತೆಂಕುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿ ಮೂಲತಃ ಕಾಸರಗೋಡಿನ ಕುಂಬಳೆ ಶ್ರೀಧರ ರಾವ್‌ ಯಕ್ಷಗಾನ ಸಾಮ್ರಾಜ್ಯದಲ್ಲಿ ಚಿರಪರಿಚಿತರು. ತನ್ನ 14ನೇ ವಯಸ್ಸಿನಿಂದ ಗುರುಗಳಾದ ಕಮಲಾಕ್ಷ ನಾಯಕ್‌ ಮೂಲಕ ಮುಜುಂಗಾವು ಪಾರ್ಥಸಾರಥಿ ದೇವಸ್ಥಾನದಲ್ಲಿ ಆರಂಭವಾದ ಯಕ್ಷಗಾನ ನೃತ್ಯ ಕಲಿಕೆ ಬಳಿಕ ಧರ್ಮಸ್ಥಳ ಮೇಳದಲ್ಲಿ 45 ವರ್ಷಗಳ ಕಾಲ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೆಚ್ಚಿನ ಕಲಾವಿದರಾಗಿ  ನಿರಂತರ ಕಲಾಸೇವೆ ನೀಡಿದ ಹೆಗ್ಗಳಿಕೆ ಅವರದು. 1962ರಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರಂತಹ ಹಿರಿಯರ ಜತೆಗಾರಿಕೆ. ಪಾತ್ರ ನಿರ್ವಹಿಸುತ್ತ ಕಲಿತ ಹೆಮ್ಮೆ ಅವರದು. 70ರ ಹರೆಯದ ಶ್ರೀಧರ ರಾವ್‌ ಅವರು ಧರ್ಮಸ್ಥಳ ಮೇಳದಲ್ಲಿ ಅಮ್ಮು ಬಲ್ಲಾಳ್ತಿ ಪಾತ್ರವನ್ನು ಎಟುಕದಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಕಲಾಸೇವೆ: ಮೂಲ್ಕಿ, ಇರಾ, ಧರ್ಮಸ್ಥಳ, ತೆಂಕುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿದ್ದಾರೆ. ಸ್ತ್ರೀಪಾತ್ರ ನಿರ್ವಹಣೆಯಲ್ಲಿ ಉತ್ತುಂಗದಲ್ಲಿದ್ದಾಗಲೇ ಪುರುಷ ಪಾತ್ರ ನಿಭಾಯಿಸಿ ಯಶಸ್ಸು ಪಡೆದು 20 ವರ್ಷಗಳಿಂದ ಅದೇ ಹಾದಿಯಲ್ಲಿದ್ದಾರೆ.
ಪ್ರಶಸ್ತಿ: ರಾಷ್ಟ್ರಪತಿ ಶಂಕರದಯಾಳ್‌ ಶರ್ಮ, ಶೃಂಗೇರಿ ವಿದ್ವತ್‌ ಪ್ರಶಸ್ತಿ, 2009ರಲ್ಲಿ ಶೇಣಿ ಹೆಸರಿನ ಸಮ್ಮಾನ, ಕೀಲಾರು ಗೊಪಾಲಕೃಷ್ಣಯ್ಯ ಪ್ರತಿಷ್ಠಾನ, ಎಡನೀರು ಸಂಸ್ಥಾನ, ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಸಮಯದಲ್ಲಿ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.

Advertisement

ಮೋಹನ ಬೈಪಾಡಿತ್ತಾಯ
ಬೆಳ್ತಂಗಡಿ: ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಲ್ಲೊಬ್ಬರಾದ ಮೋಹನ ಬೈಪಾಡಿತ್ತಾಯರು ಹಿಮ್ಮೇಳದ ಭಾಗವತಿಕೆಯಿಂದ ಹಿಡಿದು ಚೆಂಡೆ ಮದ್ದಳೆ ಎಲ್ಲ ಪ್ರಕಾರಗಳಲ್ಲೂ ನಿಷ್ಣಾತರು. ಅವರ ಗರಡಿಯಲ್ಲಿ ಪಳಗಿ ಹಿಮ್ಮೇಳ ಕಲಾವಿದರಾಗಿ ನೂರಾರು ವಿದ್ಯಾರ್ಥಿಗಳು ಪ್ರಸಿದ್ಧ ಕಲಾವಿದರಾಗಿ ಖ್ಯಾತಿ ಗಳಿಸಿದ್ದಾರೆ.
ಮೂಲತಃ ಕಡಬದವರಾದ ಅವರು ಪ್ರಸ್ತುತ ಉಜಿರೆ ಓಡಲದಲ್ಲಿ ನೆಲೆಸಿದ್ದು, 2011ರಲ್ಲಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಮುಂಭಾಗ ಯಕ್ಷಗಾನ ಹಿಮ್ಮೇಳ ಕಲಿಕಾ ಕೇಂದ್ರ ಸ್ಥಾಪಿಸಿ ಭಾಗವತಿಕೆಯಿಂದ ಹಿಡಿದು ಅರ್ಥಗಾರಿಕೆಯವರೆಗೆ ಎಲ್ಲ ಪ್ರಕಾರಗಳಲ್ಲೂ ತಮ್ಮ ಅನುಭವವನ್ನು ತರಬೇತಿ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಗುರು ಹರಿನಾರಾಯಣ ಬೈಪಾಡಿತ್ತಾಯರ ಮೂಲಕ ಹಿಮ್ಮೇಳ ಚತುರರಾಗಿ ಕಡಬದಲ್ಲಿ ಹವ್ಯಾಸಿ ಕಲಾವಿದರಾಗಿ ಆರಂಭಗೊಂಡ ವೃತ್ತಿ ಸೇವೆ ಬಳಿಕ ನಂದಾವರ, ಬಪ್ಪನಾಡು ಮೇಳದಲ್ಲಿ ಭಾಗವತಿಕೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಬೆಳ್ಮಣ್‌ನಲ್ಲಿ ಸಂಭವಿಸಿದ ಅಪಘಾತದ ಬಳಿಕ ಮರುಹುಟ್ಟು ಪಡೆದು 3 ವರ್ಷ ಹವ್ಯಾಸಿ ಕಲಾವಿದರಾಗಿ ತಿರುಗಾಟ ನಡೆಸಿ ಮುಂಬಯಿಯಲ್ಲಿ 9 ವರ್ಷಗಳ ಕಾಲ ಹೊರನಾಡು ಕನ್ನಡಿಗರಿಗೆ ಹಿಮ್ಮೇಳ ತರಬೇತಿ ನೀಡಿದ್ದರು.
ಪ್ರಶಸ್ತಿ: ಉಡುಪಿ ಕಲಾರಂಗ, ಯಕ್ಷಭಾರತಿ ಕನ್ಯಾಡಿ, ಅರ್ಕುಳ ಸುಬ್ರಾಯ ಪ್ರತಿಷ್ಠಾನ, ಆಂಜನೇಯ ಪುತ್ತೂರು ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸುಮಾರು 200ಕ್ಕೂ ಹೆಚ್ಚು ಕಲಾವಿದರು ಅವರ ಗರಡಿಯಲ್ಲಿ ಪಳಗಿ ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ.

ಎಂ.ಎನ್‌. ಮಧ್ಯಸ್ಥ
ಕೋಟ: ವಿದ್ಯಾರ್ಥಿಗಳು ಹಾಗೂ ಯುವಜನಾಂಗದಲ್ಲಿ ಯಕ್ಷಗಾನ ಕಲೆಯ ಕುರಿತು ಅಭಿರುಚಿ ಮೂಡಿಸಲು ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವವರು ಮಣೂರು ನರಸಿಂಹ ಮಧ್ಯಸ್ಥರು. ಕೋಟ ಸಮೀಪದ ಮಣೂರಿನಲ್ಲಿ 1954 ಜ. 2ರಂದು ಜನಿಸಿದ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಕೋಟದ ಶಾಂಭವೀ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ವೃತ್ತಿಯ ಜತೆಜತೆಗೆ ಯಕ್ಷಗಾನದ ಕುರಿತು ಅಭಿರುಚಿ ಹೊಂದಿದ್ದ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯಲ್ಲಿ 1976ರಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಸ್ಥಾಪಿಸುವ ಮೂಲಕ ಪರಿಸರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಕ್ಷಗಾನ ತರಬೇತಿ ನೀಡಲಾರಂಭಿಸಿದರು.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ಅವರ ನಿರ್ದೇಶನದಲ್ಲಿ ಮೂಡಿಬಂದ ಹಲವಾರು ಯಕ್ಷಗಾನ ಪ್ರದರ್ಶನಗಳು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿವೆೆ ಹಾಗೂ ಹಲವು ಹವ್ಯಾಸಿ, ವೃತ್ತಿ ಕಲಾವಿದರು ಕೇಂದ್ರದ ಮೂಲಕ ಸೃಷ್ಟಿಯಾಗಿದ್ದಾರೆ. 2001ರಲ್ಲಿ ಎಂ.ಎನ್‌. ಅಶ್ವಿ‌ನೀ ಮಧ್ಯಸ್ಥ ಸ್ಮಾರಕ ಶೈಕ್ಷಣಿಕ, ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಈ ಭಾಗದಲ್ಲಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಹಾಗೂ ಪರಿಸರದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ ಸ್ವೀಕರಿಸಿದ್ದಾರೆ.
ಮಣೂರು ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಮೂಲಕ ಆಕಾಶವಾಣಿ ಕಲಾವಿದರಾಗಿ ಗುರುತಿಸಿಕೊಂಡಿದ್ದರು ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳು, ಯಕ್ಷಗಾನ ಕಮ್ಮಟಗಳನ್ನು ಹಮ್ಮಿಕೊಳ್ಳುವ ಮೂಲಕ ಕಲೆಯ ಬೆಳವಣಿಗೆಗೆ ದುಡಿದಿದ್ದಾರೆ.

ಮದಂಗಲ್ಲು ಆನಂದ ಭಟ್‌
ಕುಂದಾಪುರ: ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೀಯಪದವು ಸಮೀಪದ ಮದಂಗಲ್ಲು ದಿ| ಕೃಷ್ಣ ಭಟ್‌ ದಿ| ಸಾವಿತ್ರಮ್ಮ ದಂಪತಿಯ ಪುತ್ರರಾಗಿರುವ 70ರ ಹರೆಯದ ಆನಂದ ಭಟ್‌ ಅಭಿಜಾತ ಯಕ್ಷಗಾನ ಕಲಾವಿದರು. ಪಣಂಬೂರು ಶ್ರೀಧರ ಐತಾಳರಿಂದ ಯಕ್ಷಗಾನ ನಾಟ್ಯ ಕಲಿತು, ಮಾವ ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠ್ಠಲ ಶಾಸ್ತ್ರೀ ಗಳ ಮಾರ್ಗದರ್ಶನದಿಂದ ಯಕ್ಷಗಾನದ ಸರ್ವ ಅಂಗಗಳಲ್ಲೂ ಪ್ರಾವೀಣ್ಯ ಪಡೆದಿದ್ದಾರೆ.  ಭಗವತಿ ಮೇಳ ಹಾಗೂ ಯಕ್ಷಗಾನ ರಂಗದಲ್ಲಿ ಅಪಾರ ಅನುಭವ ಹೊಂದಿರುವ ಅವರು ಉದ್ಯೋಗ ನಿಮಿತ್ತ ಮಹಾರಾಷ್ಟ್ರದ ಪುಣೆಗೆ
1982ರಲ್ಲಿ ತೆರಳಿದರು. ಅಲ್ಲೂ ನಾಲ್ಕು ದಶಕಗಳಿಂದ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ದುಡಿಯುತ್ತ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತ ಸಾವಿರಾರು ಶಿಷ್ಯರನ್ನು ಸಂಪಾದಿಸಿ ಯಕ್ಷಗಾನದ ಕಂಪನ್ನು ಮಹಾರಾಷ್ಟ್ರದಲ್ಲಿ ಹರಡಿದರು.  ಕನ್ನಡ, ತುಳು, ಹಿಂದಿ, ಮರಾಠಿ ಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಪುಣೆಯಲ್ಲಿ ಮಹಾಗಣಪತಿ ಯಕ್ಷಗಾನ ಮಂಡಳಿ ಸ್ಥಾಪಿಸಿದ್ದಾರೆ . ಖಾಸಗಿ ಕಂಪೆನಿಯಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ .
ಹೊತ್ತಗೆಯ ಗೌರವ: ಸಾಹಿತ್ಯಬಳಗ ಮುಂಬಯಿ ತನ್ನ ರಜತ ಮಹೋತ್ಸವ ಸಂದರ್ಭ ಸಾಧಕರಿಗೆ ನಮನ ಮಾಲಿಕೆಯಲ್ಲಿ ಐದನೇ ಕುಸುಮವಾಗಿ ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್‌ ಎನ್ನುವ ಅವರ ಜೀವನ ಪರಿಚಯ ಹಾಗೂ ಕಲಾ ಸೇವೆಯನ್ನು ಪರಿಚಯಿಸುವ ಹೊತ್ತಗೆಯನ್ನು ಪ್ರಕಟಿಸಿದೆ. ಇದು ಆನಂದ ಭಟ್ಟರ ಕಲಾ ಸೇವೆ ಸಾಧನೆಗೆ ಕೈಗನ್ನಡಿ.

Advertisement

Udayavani is now on Telegram. Click here to join our channel and stay updated with the latest news.

Next