Advertisement

ಯಕ್ಷರೇ, ನಿಮ್ಮ ವೈಯಕ್ತಿಕ ಬದುಕಿಗೂ ಪುಟ್ಟ ಸ್ಪೇಸ್‌ ಕೊಡಿ

12:30 AM Mar 16, 2019 | Team Udayavani |

ಯಕ್ಷಗಾನ ಕಲಾವಿದರಿಗೆ ಪಯಣದ ಒತ್ತಡವಲ್ಲದೇ ಆರ್ಥಿಕ ಸ್ಥಿತಿಗತಿ, ಕುಟುಂಬದ ನಿರ್ವಹಣೆಯ ಒತ್ತಡವೂ  ಹೆಚ್ಚುವರಿಯಾಗಿ ಜಮೆಯಾಗುತ್ತದೆ. ಬೇಡಿಕೆಯ ಕಲಾವಿದರನ್ನು ಹೊರತುಪಡಿಸಿ ಉಳಿದವರ ಜೀವನ ಮಟ್ಟ ಅತ್ಯಂತ ದಯನೀಯ ಸ್ಥಿತಿಯಲ್ಲಿರುತ್ತದೆ. ಸಾಲದ ಸುಳಿಯಲ್ಲಿ ಸಿಲುಕುವ ಕಲಾವಿದರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಇನ್ನು ಕೆಲವು ಕಲಾವಿದರು ಹೀಗೆ ಏರ್ಪಡುವ ಬಹುಮುಖೀ ಒತ್ತಡದಿಂದ ಹೊರ ಬರಲು ವಿವಿಧ ವ್ಯಸನಕ್ಕೆ ತುತ್ತಾಗುತ್ತಾರೆ. 

Advertisement

ಅವರು ಯಕ್ಷರಂಗದ ಎವರ್‌ಗ್ರೀನ್‌ ಸ್ಟಾರ್‌ ಕಾಳಿಂಗನಾವಡ. ಹಿಂದಿನ ರಾತ್ರಿ ಸಾಗರದಲ್ಲಿ ಯಕ್ಷಗಾನ ಮುಗಿಸಿ ಬಂದು,  ಹಗಲು ಬೈಕ್‌ನಲ್ಲಿ ಪ್ರಯಾಣಿಸುತ್ತಿರುವಾಗ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆಗ ಅವರ ವಯಸ್ಸು ಕೇವಲ 32. ಶಿರಿಯಾರ ಮಂಜು ನಾಯ್ಕ ಎಂಬ ನಡುತಿಟ್ಟಿನ ಅಪ್ರತಿಮ ಕಲಾವಿದ, ಪರಶುರಾಮನ ವೇಷದಲ್ಲಿಯೇ ಬದುಕಿನ ವೇಷ ಕಳಚಿದರು. ಯಕ್ಷರಾಮ ಕೆರೆಮನೆ ಶಂಭುಹೆಗಡೆ, ತನ್ನ ನೆಚ್ಚಿನ ರಾಮನ ಪಾತ್ರದಲ್ಲಿಯೇ ನಿರ್ಯಾಣ ಹೊಂದಿದರು. ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಅಸುರನ ಪಾತ್ರದಲ್ಲಿ ಅಂತ್ಯವಾದರು. ಈ ಸಾಲಿಗೆ ಇತ್ತೀಚಿನ ಸೇರ್ಪಡೆಯಾದವರು ಯುವಕಲಾವಿದ ಹುಡಗೋಡು ಚಂದ್ರಹಾಸ. ಮೊನ್ನೆಯಷ್ಟೆ ಸಾಲ್ವನ ಪಾತ್ರದಲ್ಲಿ ರಂಗದಲ್ಲೇ ಕುಸಿದ ಚಂದ್ರಹಾಸರ ಸಾವು, ಯಕ್ಷಕಲಾವಿದರ ಬದುಕು ಬವಣೆಯ ರೂಪಕದಂತೆ ತೋರುವಲ್ಲಿ ಅಚ್ಚರಿ ಇಲ್ಲ. 

ಒಂದು ಕಾಲದಲ್ಲಿ, ಯಕ್ಷಕಲಾವಿದರು ರಾತ್ರಿ ರಂಗಸ್ಥಳದಲ್ಲಿ ಯಕ್ಷ, ಕಿನ್ನರ, ಕಿಂಪುರುಷ, ಕುಬೇರ… ಎಲ್ಲವೂ. ಆದರೆ ಹಗಲು, ಕಿತ್ತು ತಿನ್ನುವ ಬಡತನದ ಬದುಕಿನೊಂದಿಗೆ ಏದುಸಿರು. ಹಾಗಿತ್ತು ಅವರ ಬದುಕು.  ಯಕ್ಷ ತಿರುಗಾಟಕ್ಕೆಂದು ಆರಂಭದಲ್ಲಿ ಮನೆ ಬಿಟ್ಟರೆ,  ಪುನಃ ಗೂಡು ಸೇರುತ್ತಿದ್ದುದು 6 ತಿಂಗಳ ನಂತರವೇ. 

 ಈಗ ಕಾಲ ಬದಲಾಗಿದೆ.
ಈ ಸ್ಮಾರ್ಟ್‌ ಯುಗದಲ್ಲಿ ಯಕ್ಷ ಕಲಾವಿದನೂ ಅಪ್‌ಡೇಟ್‌ ಆಗಿದ್ದಾನೆ. ಎಲ್ಲರ ಕೈಲೂ ಸ್ವಂತ ವಾಹನವಿದೆ. ಬಹುತೇಕರು ತಮ್ಮ ಮನೆಗಳಿಂದಲೇ ನಾಲ್ಕು ಜಿಲ್ಲೆಯಲ್ಲಿ ವ್ಯಾಪಿಸಿರುವ ಯಕ್ಷಗಾನದ ನೆಲೆ ಇರುವ ವಿವಿಧ ಊರುಗಳಿಗೆ ಪ್ರತಿದಿನವೂ ಪ್ರಯಾಣಿಸುತ್ತಾರೆ. ನೂರಾರು ಮೈಲಿ ದೂರದ ಮತ್ತು ಕ್ಲುಪ್ತ ಕಾಲಕ್ಕೆ ಜಾಗವನ್ನು ತಲುಪಬೇಕದ ಒತ್ತಡದಲ್ಲಿ ಈ ಪ್ರಯಾಣವಿರುತ್ತದೆ. ಕೆಲವು ತಿಂಗಳ ಹಿಂದೆ, ಮೂವರು ಯುವ ಕಲಾದರು ಬೈಕ್‌ ಅಪಘಾತದಲ್ಲಿ ನಿಧನರಾಗಿದ್ದು ಇನ್ನೂ ಹಸಿರಾಗಿದೆ. ತಾರಾಮೌಲ್ಯದ ಕಲಾವಿದರಂತೂ ಹಗಲು ಎರಡು ಪಾಳಿಯಲ್ಲಿ ದುಡಿದು, ರಾತ್ರಿ ತಾವು ಕಾರ್ಯನಿವಹಿìಸುವ ಮೇಳದ ಕಾರ್ಯಕ್ರಮಕ್ಕೆ ಸೇರಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಪ್ರಯಾಣಿಸುತ್ತಿರುತ್ತಾರೆ. ಹೀಗೆ, ಸದಾ ಒತ್ತಡವನ್ನು ಹೇರಿಕೊಳ್ಳುವ ಕಲಾವಿದರು ರಾತ್ರಿ ನಿದ್ರೆ ಬಿಟ್ಟ ಕಾರಣಕ್ಕೆ ತಮ್ಮ ಆರೋಗ್ಯದಲ್ಲಿ ಅವರದೇ ಆದ ಸಮಸ್ಯೆಗಳನ್ನು ತಂದುಕೊಳ್ಳುವುದು ಸಹಜವೇ ಆಗಿದೆ. ಈಗಂತೂ, ಕೆಲವು ಮೇಳಗಳು ರಾತ್ರಿ – ಬೆಳಗ್ಗಿನವರೆಗೆ ಮತ್ತು ಕೆಲವು ಮೇಳಗಳು ಕಾಲಮಿತಿಯ ಪ್ರಯೋಗದಲ್ಲಿ ತೊಡಗಿರುತ್ತವೆ. ಅರ್ಧರಾತ್ರಿಗೆ ಪ್ರದರ್ಶನ ಮುಗಿದರೂ ಬೆಳಗ್ಗಿನವರೆಗೆ ತಾಳ್ಮೆ ವಹಿಸದೇ ರಾತ್ರಿ ಪ್ರಯಾಣವನ್ನು ಕೈಗೊಳ್ಳುವ ಕಲಾವಿದರೂ ಇದ್ದಾರೆ. ಈ ಪಯಣದ ಒತ್ತಡವಲ್ಲದೇ ಆರ್ಥಿಕ ಸ್ಥಿತಿಗತಿ ಮತ್ತು ಮನೆಯ ನಿರ್ವಹಣೆಯ ಒತ್ತಡವೂ ಯಕ್ಷಕಲಾವಿದರಿಗೆ ಹೆಚ್ಚುವರಿಯಾಗಿ ಜಮೆಯಾಗುತ್ತದೆ. ಬೇಡಿಕೆಯ ಕಲಾವಿದರನ್ನು ಹೊರತುಪಡಿಸಿ ಉಳಿದವರ ಜೀವನ ಮಟ್ಟ ಅತ್ಯಂತ ದಯನೀಯ ಸ್ಥಿತಿಯಲ್ಲಿರುತ್ತದೆ. ಸಾಲದ ಸುಳಿಯಲ್ಲಿ ಸಿಲುಕುವ ಕಲಾವಿದರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಇನ್ನು ಕೆಲವು ಕಲಾವಿದರು ಹೀಗೆ ಏರ್ಪಡುವ ಬಹುಮುಖೀ ಒತ್ತಡದಿಂದ ಹೊರ ಬರಲು ವಿವಿಧ ವ್ಯಸನಕ್ಕೆ ತುತ್ತಾಗುತ್ತಾರೆ. ಅದೆಷ್ಟೋ ಕಲಾವಿದರು ಅದ್ಭುತ ಪ್ರತಿಭೆ ಹೊಂದಿದ್ದು, ವ್ಯಸನದ ಕಾರಣಕ್ಕೆ ಅಕಾಲಿಕ ಮರಣವನ್ನಪ್ಪಿ ಕಲಾ ಮಾತೆಯನ್ನು ಅಷ್ಟರ ಮಟ್ಟಿಗೆ ಬಡವಾಗಿಸಿದ್ದಾರೆ.

    ಹೀಗೆ ಒಟ್ಟು ಬದುಕಿನ ಸುವ್ಯವಸ್ಥೆಗೆ ಯಾವುದೇ ಉತ್ತರದಾಯಿತ್ವ ಇಲ್ಲದೇ 
ಯಕ್ಷಕಲಾವಿದನ ತೆರೆಯ ಮರೆಯ ಬದುಕು ದಾರುಣವಾಗುತ್ತಿದೆ. ಈ ಬಗೆಯ ಅಸ್ಥಿರತೆ, ನಿರಂತರ ಒತ್ತಡ, ಪ್ರಯಾಣದ ಆಯಾಸ  ಇಂತಹ ಹಲವು ಕಾರಣಗಳಿಂದಾಗಿ ಕಲಾವಿದರು ಕಾಲನ ಕರೆಗೆ ಓಗೊಡುತ್ತಿರುವುದು ದುರಂತವೇ ಸರಿ. 
    ಯಕ್ಷಗಾನದ ವ್ಯವಸಾಯೀ ಕ್ಷೇತ್ರ ಆಧುನಿಕ ಜಾಲತಾಣದ ಭರಾಟೆಯಲ್ಲಿ ಸಂಘಟನಾತ್ಮಕವಾಗಿ ದಿನದಿಂದ ದಿನಕ್ಕೆ ಸವಾಲಿನತ್ತ ಸಾಗುತ್ತಿದೆ. ಮೇಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಆದರೆ, ಪ್ರೇಕ್ಷಕರ ಸಂಖ್ಯೆ ಬೆರಳೆಣಿಕೆಯಾಗುತ್ತಿದೆ. 

Advertisement

    ಕಂಪೆನಿ ನಾಟಕಗಳಂತೆ ವೃತ್ತಿಪರ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯ ಜೊತೆಗೆ ಕಲಾವಿದರನ್ನು ವೃತ್ತಿಪರರನ್ನಾಗಿಸುವ ಮತ್ತು ಅವರ ಒತ್ತಡವನ್ನು ನಿವಾರಿಸಿ ಬದುಕಿನ ಸುರಕ್ಷತೆ ಏರ್ಪಡಿಸುವ ಬಗ್ಗೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಸರ್ಕಾರ ಶೀಘ್ರ ಗಮನ ಹರಿಸಲಿ. ಕಲಾವಿದರೂ ಕೂಡ, ಒತ್ತಡಮುಕ್ತವಾದ ವಾತಾವರಣವನ್ನು ಸ್ವಯಂ ಏರ್ಪಡಿಸಿಕೊಂಡು ಸಂಭಾವ್ಯ ದುರಂತದಿಂದ ಪಾರಾಗಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಿಕೊಳ್ಳಬೇಕಿದೆ. ಯಕ್ಷಕಲಾವಿದರೆ  ದಯಮಾಡಿ ನಿಮ್ಮ ವೈಯಕ್ತಿಕ ಬದುಕಿಗೆ ಒಂದು ಪುಟ್ಟ ಸ್ಪೇಸ್‌ ಮೀಸಲಾಗಿಡಿ.

ರಮೇಶ್‌ ಬೇಗಾರ್‌

Advertisement

Udayavani is now on Telegram. Click here to join our channel and stay updated with the latest news.

Next