Advertisement

ಯಕ್ಷಗಾನ ರಂಗದ ಸವ್ಯಸಾಚಿ ಸುಜಯೀಂದ್ರ ಹಂದೆ

10:48 PM Mar 04, 2020 | mahesh |

ರಂಗದಲ್ಲಿ ಪಾತ್ರಕ್ಕೆ ತಕ್ಕಂತೆ ನಿಲುವು, ಶಾರೀರ, ಶ್ರುತಿಬದ್ಧ ಮನೋಜ್ಞ ಅರ್ಥಗಾರಿಕೆ, ಪಾತ್ರೋಚಿತ ರಂಗಚಲನೆ, ಹಿತಮಿತವಾದ ಅಭಿನಯದ ಮೂಲಕ ಯಕ್ಷಗಾನ ರಂಗದಲ್ಲಿ ಮೆರೆಯುವವರು ಹಂದಟ್ಟಿನ ಸುಜಯೀಂದ್ರ ಹಂದೆಯವರು.

Advertisement

ಭಾಗವತ, ಯಕ್ಷಗಾನ ತಜ್ಞ, ಚಿಂತನಶೀಲ, ಯಕ್ಷಗಾನ ಲೇಖಕ, ರಂಗನಟನಾಗಿದ್ದು ಯಕ್ಷಗಾನದಲ್ಲಿ ಮೇಕಪ್‌ನಿಂದ ಹಿಡಿದು ಹಿಮ್ಮೇಳದವರೆಗೆ ಯಕ್ಷಗಾನದ ಎಲ್ಲ ರೀತಿಯ ಕೆಲಸಗಳನ್ನು, ಅದರ ಉದ್ದಗಲವನ್ನು ಬಲ್ಲವರು.

ಮಕ್ಕಳ ಮೇಳದಲ್ಲಿ ವೃಷಸೇನ ಪಾತ್ರದ ಮೂಲಕ ರಂಗ ಪ್ರವೇಶಿಸಿದ ಸುಜಯೀಂದ್ರ ಹಂದೆಯವರಿಗೆ ತಂದೆಯೇ ಪ್ರಥಮ ಗುರು. ನಂತರ ಕೆಲವೊಂದು ಹೆಜ್ಜೆಗಾರಿಕೆಯನ್ನು ಬ್ರಹ್ಮಾವರದ ಕೃಷ್ಣಸ್ವಾಮಿ ಜೋಯಿಸರಿಂದ ಅಭ್ಯಾಸ ಮಾಡಿದರು. ಹಂದೆಯವರು ಚಿಟ್ಟಾಣಿ ರಾಮಚಂದ್ರ ಹೆಗಡೆ, ದಿ| ಮಹಾಬಲ ಹೆಗಡೆ ಹೀಗೆ ಯಕ್ಷಗಾನದ ಹಿರಿಯ ಕಲಾವಿದರೊಂದಿಗೆ ವೇಷ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಾಳಮದ್ದಳೆಗಳಲ್ಲೂ ಅವರು ಭಾಗವಹಿಸುತ್ತಿದ್ದು ಛಾಪು ಮೂಡಿಸಿದ್ದಾರೆ.

ಇವರ ಸುಧನ್ವ, ಅರ್ಜುನ, ತಾಮ್ರಧ್ವಜ, ಬಬ್ರು ವಾಹನ, ಭೀಷ್ಮ, ಪರಶುರಾಮ, ಕೃಷ್ಣ ಪಾತ್ರಗಳು ದಿ| ಹಾರಾಡಿ ರಾಮ ಗಾಣಿಗರನ್ನು ನೆನಪಿಸುವಂತೆ ಮಾಡುತ್ತವೆೆ. ಅಪರೂಪಕ್ಕೆ ಕಸೆ ಸ್ತ್ರೀವೇಷ ಮಾಡುವ ಸುಜಯೀಂದ್ರ ಹಂದೆಯವರು ಹೆಚ್ಚಾಗಿ ಎಲ್ಲಾ ಪೌರಾಣಿಕ ಪ್ರಸಂಗಗಳಲ್ಲಿ ವೇಷ ಮಾಡಿದ ಅನುಭವ ಇವರದ್ದಾಗಿದೆ.

ಕನ್ನಡ ಎಂ.ಎ. ಪದವೀಧರರಾದ ಹಂದೆಯವರು ವೃತ್ತಿ ಕಲಾವಿದರಿಗೆ ಕಡಿಮೆಯಿಲ್ಲದಂತಹ ಪ್ರದರ್ಶನ ನೀಡಬಲ್ಲವರು. ರಂಗದಲ್ಲಿ ಕೆಲವೊಂದು ಸಂದರ್ಭ ಎದುರು ವೇಷಧಾರಿ ತಪ್ಪಿದರೆ, ಪ್ರೇಕ್ಷಕರಿಗೆ ತಿಳಿಯದಂತೆ ಅವರನ್ನು ಸರಿಪಡಿಸುವ ಕಲೆಗಾರಿಕೆ ಹೊಸ ಕಲಾವಿದರಿಗೆ ಪ್ರೋತ್ಸಾಹದಾಯಕವಾಗಿದೆ.

Advertisement

1974ರಲ್ಲಿ ಕೋಟದ ಹಂದಟ್ಟಿನಲ್ಲಿ ಎಚ್‌. ಶ್ರೀಧರ ಹಂದೆ, ವಸುಮತಿಯವರಿಗೆ ಜನಿಸಿದ ಸುಜಯೀಂದ್ರ ಹಂದೆಯವರು ಗಂಗೊಳ್ಳಿಯ ಸರಸ್ವತಿ ಜ್ಯೂನಿಯರ್‌ ಕಾಲೇಜಿನಲ್ಲಿ ಉಪನ್ಯಾಸಕರು. ಅವರ ತಂದೆ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾಗಿದ್ದು ತಂದೆಯೊಂದಿಗೆ ಹಂದೆಯವರೂ ಕೆಲಸ ನಿರ್ವಹಿಸುತ್ತಾರೆ. ಅವರ ಪತ್ನಿ ವಿನುತಾ ಅವರು ಆಂಗ್ಲ ಶಾಲೆ ಅಧ್ಯಾಪಕಿಯಾಗಿದ್ದು ಪುತ್ರಿ ಕಾವ್ಯಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ತಂದೆ ಶ್ರೀಧರ ಹಂದೆಯವರಂತೆ ಯಕ್ಷಗಾನದಲ್ಲಿ ನಿಪುಣತೆಯನ್ನು ಮೈಗೂಡಿಸಿಕೊಂಡ ಇವರು ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿದ್ದಾರೆ. “ಬಂಜೆ ಹೆತ್ತ ನೋವು’ ಎಂಬ ಕವನ ಸಂಕಲನ, ಯಕ್ಷಗಾನದ ಮಿಂಚು ಹಾರಾಡಿ ಕೃಷ್ಣ ಗಾಣಿಗರ ಬಗ್ಗೆ ಗುರು ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರರ ಬಗ್ಗೆ ಕೃತಿಗಳು, ವಿವಿಧ ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ.

ಮುಖವಾಡ ರಚನೆ, ತರಬೇತಿ ಶಿಬಿರ, ಯಕ್ಷಗಾನ ಹಾಗೂ ನಾಟಕಗಳಿಗೆ ಮೇಕಪ್‌ ಕಲಾವಿದನಾಗಿ, ಗಮಕ ವಾಚನ ಮತ್ತು ವ್ಯಾಖ್ಯಾನ, ಭಾಷಣ ಮತ್ತು ಸಂವಹನ ಕಲೆಯ ಕುರಿತಂತೆ ತರಬೇತಿ, ಕಮ್ಮಟಗಳಲ್ಲೂ ಭಾಗಿಯಾಗಿದ್ದಾರೆ.

ಮಕ್ಕಳ ಮೇಳದೊಂದಿಗೆ ಡೆಲ್ಲಿ, ಕಲ್ಕತ್ತಾ, ಮದ್ರಾಸ್‌, ಬೊಂಬಾಯಿ, ಗುಜರಾತ್‌, ಕೇರಳದಲ್ಲಿ ಕಾರ್ಯಕ್ರಮ ನೀಡಿದ ಇವರು ಬೆಹರಿನ್‌, ಲಂಡನ್‌, ಮ್ಯಾಂಚೆಸ್ಟರ್‌, ಕುವೈತ್‌ಗೂ ತೆರಳಿದ್ದಾರೆ. ಬಹ್ರೈನ್‌, ಕುವೈತ್‌, ದಿಲ್ಲಿ ಕನ್ನಡ ಸಂಘ, ಮುಂಬಯಿ ಕನ್ನಡ ಸಂಘಗಳು, ಅಂಬಲಪಾಡಿ ಯಕ್ಷಗಾನ ಸಂಘ, ಕೋಟ ವೈಕುಂಠ “ಯಕ್ಷ ಸೌರಭ’ ಪುರಸ್ಕಾರಗಳೂ ಲಭಸಿವೆ.

-  ಸುದರ್ಶನ ಉರಾಳ

Advertisement

Udayavani is now on Telegram. Click here to join our channel and stay updated with the latest news.

Next