ಉಡುಪಿ: ಯಕ್ಷಗಾನ ರಂಗದ ತೆಂಕು ಮತ್ತು ಬಡಗುತಿಟ್ಟು ಉಭಯ ಪ್ರಕಾರಗಳಲ್ಲಿ ಸ್ತ್ರೀ ವೇಷಧಾರಿಯಾಗಿ ಸವ್ಯಸಾಚಿ ಎನಿಸಿಕೊಂಡಿದ್ದ ಹಿರಿಯ ಕಲಾವಿದ ಉದ್ಯಾವರ ಜಯಕುಮಾರ ಗಾಣಿಗ ಅವರು ಸೋಮವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ನೇಪಥ್ಯಕ್ಕೆ ಸರಿದಿದ್ದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಯಕ್ಷಗಾನಕ್ಕೆ ಗಣನೀಯ ಕೊಡುಗೆ ನೀಡಿದ ಹಾರಾಡಿ ಮತ್ತು ಉದ್ಯಾವರ ಗಾಣಿಗ ಕುಟುಂಬದ ಪ್ರತಿನಿಧಿಯಾಗಿ ಗುರುತಿಸಲ್‌ಪಟ್ಟಿದ್ದ ಕಲಾವಿದ ಜಯಕುಮಾರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವೊಂದರಲ್ಲೇ ಸುಧೀರ್ಘ ತಿರುಗಾಟ ಮಾಡಿದ್ದರು.
41 ವರ್ಷಗಳ ಕಾಲ ಸ್ತ್ರೀವೇಷಧಾರಿಯಾಗಿ ತೆಂಕು ತಿಟ್ಟಿನ ಧರ್ಮಸ್ಥಳ, ಸುರತ್ಕಲ್, ಎಡನೀರು, ಕದ್ರಿ, ಬಡಗು ತಿಟ್ಟಿನ ಸಾಲಿಗ್ರಾಮ, ಮಾರಣಕಟ್ಟೆ, ಸೌಕೂರು ಮೇಳಗಳಲ್ಲಿ ಕಲಾಸೇವೆ ನಡೆಸಿದ್ದರು.
ಜಯಕುಮಾರ್ ನಿಧನಕ್ಕೆ ಯಕ್ಷರಂಗದ ಒಡನಾಡಿಗಳು ಮತ್ತು ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ಪತ್ನಿ ವಾರಿಜ ಮತ್ತು ಮೂವರು ಮಕ್ಕಳನ್ನು ಜಯಕುಮಾರ್ ಅವರು ಅಗಲಿದ್ದಾರೆ.