ಉಡುಪಿ: ಯಕ್ಷಗಾನ ಸಹಿತ ಕಲಾಪ್ರಕಾರಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ನಡೆದಾಗ ಕಲೆಯು ಇನ್ನಷ್ಟು ಪ್ರಚುರಗೊಂಡು ಕಲಾಭಿವೃದ್ಧಿಗೆ ಪೂರಕವಾಗಲಿದೆ ಎಂದು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು.
ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಸರ್ಪಂಗಳ ಯಕ್ಷೋತ್ಸವ ದಶಮ ಸಂಭ್ರಮದ ಪ್ರಯುಕ್ತ ಶುಕ್ರವಾರ ರಾಜಾಂಗಣದಲ್ಲಿ ನಡೆದ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಪಂಗಳ ಯಕ್ಷೋತ್ಸವ ವಾರ್ಷಿಕ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ಮತ್ತು ವಾರ್ಷಿಕ ಪುರಸ್ಕಾರವನ್ನು ಚಕ್ರತಾಳ ವಾದಕ ವಸಂತ ವಾಮದಪದವು ಅವರಿಗೆ ಪ್ರದಾನ ಮಾಡಲಾಯಿತು.
ಇದನ್ನೂ ಓದಿ:ಗ್ರಾಮೀಣ ಅಭ್ಯರ್ಥಿಗಳಲ್ಲಿ ಸಂತಸ; ಡಿಪ್ಲೊಮಾ ಅರ್ಹತೆ ಪಿಯುಸಿಗೆ ತತ್ಸಮಾನವೆಂದು ಪರಿಗಣನೆ
ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ,
ಜತೆಕಾರ್ಯದರ್ಶಿ ಪ್ರೊ| ನಾರಾಯಣ ಎಂ. ಹೆಗಡೆ ಸಮ್ಮಾನಿತರ ಪಟ್ಟಿ ವಾಚಿಸಿದರು. ಯಕ್ಷೋತ್ಸವದ ಪೋಷಕರಾದ ಸುಬ್ರಹ್ಮಣ್ಯ ಭಟ್ ಪತ್ನಿ ನಳಿನಿ ಎಸ್.ಭಟ್, ಪುತ್ರಿ ಡಾ| ಶೈಲಜಾ, ಡಾ| ನರೇಂದ್ರ ಶೆಣೈ ಉಪಸ್ಥಿತರಿದ್ದರು.