Advertisement

ಯಕ್ಷಗಾನ ಕ್ಷೇತ್ರ: ಸಮರ್ಪಕ ದಾಖಲೆ ಕೇಳದ ಹಿನ್ನೆಲೆ; ಅನರ್ಹರಿಗೆ ದಕ್ಕಿದೆ ಸೌಲಭ್ಯ!

02:49 PM Aug 30, 2020 | sudhir |

ಕೋಟ : ಕೋವಿಡ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ತೆಂಕು, ಬಡಗಿನ ಯಕ್ಷಗಾನ ಕಲಾವಿದರಿಗೆ ಸರಕಾರವು ತಲಾ 2 ಸಾವಿರ ರೂ.ಗಳಂತೆ ಪರಿಹಾರ ಧನ ಪ್ಯಾಕೇಜ್‌ ಘೋಷಿಸಿತ್ತು. ಆದರೆ ಮಾಹಿತಿ ಕೊರತೆಯಿಂದ ಹಲವು ಅರ್ಹ ಕಲಾವಿದರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಜಿ ಹಾಕಿದವರಿಗೆಲ್ಲ ನೀಡಿದ್ದರಿಂದ ಅನರ್ಹರಿಗೂ ಪರಿಹಾರ ಧನ ಒಲಿದಿದೆ!

Advertisement

ಕಲಾವಿದರ ಪರ ಕೆಲಸ ಮಾಡುವ ಹಲವು ಸಂಸ್ಥೆಗಳು ಪರಿಹಾರಧನಕ್ಕೆ ಅರ್ಜಿಗಳನ್ನು ಇಲಾಖೆಗೆ ತಲಪಿಸುವ ಕಾರ್ಯ ಮಾಡಿದ್ದವು. 2 ಸಾವಿರಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು 40 ಲಕ್ಷ ರೂ.ಗೂ ಹೆಚ್ಚಿನ ಮೊತ್ತದ ಪರಿಹಾರ ಧನ ಪಡೆದಿದ್ದಾರೆ. ಕಲಾವಿದ ಎನ್ನುವುದನ್ನು ಸಾಬೀತುಪಡಿಸುವ ಮತ್ತು 10 ವರ್ಷದ ಸೇವಾವಧಿಯನ್ನು ದೃಢೀಕರಿಸುವ ಪೂರಕ ದಾಖಲೆಗಳನ್ನು ಪಡೆಯದ ಕಾರಣ ಬೇರೆ-ಬೇರೆ ಉದ್ಯೋಗದಲ್ಲಿದ್ದ ನೂರಾರು ಮಂದಿ ತಾವು ಕೂಡ ಕಲಾವಿದರೆಂದು ಘೋಷಿಸಿ ಪರಿಹಾರ ಪಡೆದುಕೊಂಡಿದ್ದಾರೆ.

ಸಂಘಟನೆ ಕೊರತೆ
ತೆಂಕು-ಬಡಗು ತಿಟ್ಟಿನಲ್ಲಿ ವೃತ್ತಿ ಮತ್ತು ಹವ್ಯಾಸಿ ಕಲಾವಿದರಾಗಿ ದುಡಿಯುತ್ತಿರುವ ಕಲಾವಿದರ ಬಗ್ಗೆ ನಿಖರ ದಾಖಲೆಗಳಿಲ್ಲ. ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸಂಘಟಿಸುವ ಸಂಘಟನೆಗಳ ಕೊರತೆಯೂ ಇದೆ. ಅನರ್ಹರು ಪರಿಹಾರ ಧನ ಪಡೆದಿರುವ ಕುರಿತು ತನಿಖೆಯಾಗಬೇಕೆನ್ನುವುದು ಕಲಾವಿದರ ಆಗ್ರಹ.

ಯಕ್ಷಗಾನ ಅಕಾಡೆಮಿಗೆ ಬಂದ ಅರ್ಜಿ ರವಾನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಪರಿಹಾರ ಧನ ನೀಡಲಾಗಿದ್ದು, ಯಕ್ಷಗಾನ ಅಕಾಡೆಮಿಗೆ ನೇರ ಸಂಬಂಧವಿಲ್ಲ. ಅರ್ಹರಿಂದ ಅರ್ಜಿಗಳನ್ನು ಪಡೆದು ಸಂಸ್ಕೃತಿ ಇಲಾಖೆಗೆ ರವಾನಿಸುವ ಕೆಲಸವನ್ನು ಅಕಾಡೆಮಿ ಪ್ರಾಮಾಣಿಕವಾಗಿ ಮಾಡಿದೆ. ಈ ನಡುವೆ ಮಾಹಿತಿ ಕೊರತೆ, ಬ್ಯಾಂಕ್‌ ಖಾತೆ, ಮೊಬೈಲ್‌ ಇಲ್ಲದಿರುವುದು, ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡದಿರುವ ಕಾರಣಕ್ಕೆ ಹಲವು ಅರ್ಹರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸದ ಕಾರಣ ಅನರ್ಹರೂ ಅನುದಾನ ಪಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
– ಎಂ.ಎ. ಹೆಗ್ಡೆ , ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಮಾಹಿತಿಯ ಕೊರತೆೆ
ಸರಕಾರದ ಯೋಜನೆಗಳ ಕುರಿತು ಕಲಾವಿದರಿಗೆ ಸೂಕ್ತ ಮಾಹಿತಿ ನೀಡುವ ಸಂಘಟನೆಗಳ ಕೊರತೆ ಇದೆ. ಸರಿಯಾದ ದಾಖಲೆಗಳನ್ನು ಕೇಳಿರದ ಕಾರಣ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳದ ಅನೇಕ ಮಂದಿ ಅನುದಾನ ಪಡೆದಿದ್ದಾರೆ, ಹಲವು ಅರ್ಹರು ವಂಚಿತರಾಗಿದ್ದಾರೆ.
– ಸದಾಶಿವ ಅಮೀನ್‌, ಯಕ್ಷಗಾನ ಕಲಾವಿದ

Advertisement
Advertisement

Udayavani is now on Telegram. Click here to join our channel and stay updated with the latest news.

Next