Advertisement

ಸೇರಾಜೆಗೆ ಯಕ್ಷಲಹರಿ ಸಮ್ಮಾನ 

12:30 AM Jan 11, 2019 | Team Udayavani |

ಪದ್ಯಾಣ ಕುಟುಂಬಕ್ಕೆ ಸೇರಿದ ಸೇರಾಜೆಯಲ್ಲಿ ಅನೇಕ ಕಲಾಕುಸುಮಗಳು ಅರಳಿವೆ. ಈ ಮನೆಯಲ್ಲಿ ಹುಟ್ಟಿ ಬೆಳೆದು, ಆಟ-ಕೂಟಗಳಲ್ಲಿ ಮಿಂಚಿದ ಸೀತಾರಾಮ ಭಟ್‌ರು ಓರ್ವ ಕೃತಿಗಾರರಾಗಿಯೂ ಪ್ರಸಿದ್ಧರು. ಇವರು ಯಕ್ಷಗಾನದತ್ತ ಆಕರ್ಷಿತರಾದುದು ಆಕಸ್ಮಿಕವಲ್ಲ. ಅಜ್ಜನ ಮನೆ ಕುರಿಯದಲ್ಲಿ ನಾಟ್ಯಾರ್ಥಿಗಳ ಗಡಣವೇ ಸೇರುತ್ತಿದ್ದ ಕಾಲವದು. ತಮ್ಮದೇ ವಯಸ್ಸಿನ ಸಹೋದರರು, ಭಾವಂದಿರು, ಸ್ನೇಹಿತರು ಎಲ್ಲರೊಂದಿಗೆ ಸೀತಣ್ಣನೂ ನಾಟ್ಯಧಾರೆಗೆ ತಲೆಯೊಡ್ಡಿದರು. ಶ್ರದ್ಧೆಯಿಂದ ಕಲಿತರು.

Advertisement

    ವಿಠಲ ಶಾಸ್ರಿà ಶಿಷ್ಯವೃಂದದಲ್ಲಿ ಕೋಲು ಕಿರೀಟಕ್ಕೆ ತಲೆಕೊಟ್ಟು ಪಾತ್ರಗಳಿಗೆ ನ್ಯಾಯ ಒದಗಿಸುವಷ್ಟು ಬೆಳೆದ ಇವರು ಕಾಲೇಜು ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ವೇಷ ಮಾಡಿದರು. ಇವರು ಮೆರೆಸಿದ ವೇಷಗಳ ಪಟ್ಟಿ ದೊಡ್ಡದಿದೆ. ಅತಿಕಾಯ, ದೇವೇಂದ್ರ, ಕರ್ಣ, ಅರ್ಜುನ, ಕಾರ್ತವೀರ್ಯ, ರಕ್ತಬೀಜಾಸುರ, ಸುಧನ್ವ, ಹಿರಣ್ಯಾಕ್ಷ, ಮನ್ಮಥ, ಸೂರ್ಯ, ಅಕ್ರೂರ ಹೀಗೆ ಸಾಗುತ್ತದೆ. ದೇವಿ ಮಹಾತ್ಮೆ ಹಾಗೂ ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿ ದೇವಿಯಾಗಿಯೂ ಮಿಂಚಿದ್ದಾರೆ.

    ಪುರಾಣದ ಬಗ್ಗೆ ಇವರಿಗಿರುವ ಅಗಾಧ ಜ್ಞಾನ ತಾಳಮದ್ದಳೆ ಪಾತ್ರಧಾರಿಯಾದಾಗ ಅನಾವರಣಗೊಳ್ಳುತ್ತದೆ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಪಾತ್ರ ನಿರ್ವಹಿಸಬಲ್ಲ ಪ್ರೌಢ ಮಾತುಗಾರ ಸೀತಣ್ಣ ಬೇಡಿಕೆಯ ಕಲಾವಿದ. ಯಾವುದೇ ಪಾತ್ರಕ್ಕಾದರೂ ಜೀವ ತುಂಬುವ ಇವರು ಎದುರು ಪಾತ್ರದೊಂದಿಗೆ ಹೊಂದಾಣಿಕೆಯ ಮಾತಿಗೆ ಮುಂದಾಗುತ್ತಾರೆ. ವೈಯಕ್ತಿಕ ಪ್ರತಿಷ್ಠೆಗಾಗಿ ಪಾತ್ರಗಳನ್ನು ಕೊಲ್ಲುವವರಲ್ಲ. ಸೀತಾರಾಮ ಭಟ್ಟರು ಆಕಾಶವಾಣಿಯಲ್ಲಿಯೂ ತಾಳಮದ್ದಳೆ, ಚಿಂತನೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಹಿಂದಿ ಭಾಷೆಯ ಪಂಚವಟಿ ಪ್ರಸಂಗದ ರಾಮನಾಗಿಯೂ ರಂಜಿಸಿದ್ದ ಸೀತಣ್ಣನ ಸಾಧನೆ ಇಷ್ಟೇ ಅಲ್ಲ.

    ಹಾಗೆಯೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಂತೆ ನಡೆಸಿಕೊಟ್ಟ ಪ್ರವಚನ ಕಾರ್ಯಕ್ರಮಗಳು ಸಾವಿರಾರು. ಮೇಲಾಗಿ ಯಕ್ಷಗಾನ ಪ್ರಸಂಗ ರಚನೆಯಲ್ಲಿ ಸೀತಣ್ಣನ ಸಾಧನೆ ಶ್ಲಾಘನೀಯ. ವೀರವರ ಶಕ್ರಜತು, ವಸುಂಧರಾತ್ಮಜೆ, ಶತಾಕ್ಷೀ ಸರ್ವಮಂಗಳೆ, ದಂಡಧರ ವೈಭವ ಹಾಗೂ ಮಹಾಬಲಿ ಯಾದವೇಂದ್ರ ಎನ್ನುವ ಪ್ರಸಂಗಗಳನ್ನು ಒಳಗೊಂಡ ಪ್ರಸಂಗ ಪಂಚಕ ಸಂಕಲನ ಮುದ್ರಿಸಲ್ಪಟ್ಟಿದೆ. 

    ಭಾಗವತ ಆಧಾರಿತ ನೃಗನರಾಧಿಪ ಹಾಗೂ ರಾಜಾ ರಂತಿದೇವ ಇವರ ಅಪ್ರಕಟಿತ ಕೃತಿಗಳು. ಅಲ್ಲದೆ ಹವ್ಯಕ ಭಾಷೆಯಲ್ಲಿ ಸನ್ಯಾಸಿ ಮದಿಮ್ಮಾಯ ಮತ್ತು ಕುಶಲಿನ ಲಡಾಯಿ ಅನುಕ್ರಮವಾಗಿ ಪಾರ್ಥ ಸನ್ಯಾಸಿ ಹಾಗೂ ಕೃಷ್ಣಾರ್ಜುನ ಕಾಳಗ ಪ್ರಸಂಗಗನ್ನು ರಚಿಸಿದ್ದಾರೆ.ಜನವರಿ 15ರಂದು ಯಕ್ಷಲಹರಿ (ರಿ.) ಯುಗಪುರುಷ ಕಿನ್ನಿಗೋಳಿ ಸಂಸ್ಥೆ ಸೀತಣ್ಣನವರನ್ನು ಸಮ್ಮಾನಿಸಲಿದೆ.

Advertisement

 ಶ್ರೀನಿವಾಸ ಭಟ್‌ ಸೇರಾಜೆ 

Advertisement

Udayavani is now on Telegram. Click here to join our channel and stay updated with the latest news.

Next