Advertisement

ಯಕ್ಷ ಧ್ರುವ ಪಟ್ಲ ಸಂಭ್ರಮ: ಹಿರಿಯ- ಯುವ- ಎಳೆಯ ಕಲಾವಿದರ ಸಂಗಮ

04:31 PM Jun 06, 2019 | mahesh |

ಯಕ್ಷಗಾನದ ವೈಭವವೆಂದರೆ ಹಾಗೆ; ಅದು ಪರಿಪೂರ್ಣವಾದ ಕಲಾರಸದೌತಣ ಎಂದೇ ವರ್ಣಿತ. ಈ ಮಾತಿಗೆ ಪರಿಪೂರ್ಣವಾದ ನಿದರ್ಶನವಾಯಿತು ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿ ಅವರು ಸ್ಥಾಪಕಾಧ್ಯಕ್ಷರಾಗಿರುವ ಮಂಗಳೂರಿನ ಯಕ್ಷಧ್ರುವ ಫೌಂಡೇಶನ್‌ ಟ್ರಸ್ಟ್‌ನಿಂದ ಜೂ.6ರಂದು ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಜರಗಿದ “ಯಕ್ಷಧ್ರುವ ಪಟ್ಲ ಸಂಭ್ರಮ- 2019′. ಬೆಳಗ್ಗೆ 8ಕ್ಕೆ ಆರಂಭವಾಗಿ ಮರುದಿನ ಮುಂಜಾನೆಯ ಸಮೀಪದವರೆಗೂ ವೈವಿಧ್ಯಮಯವಾಗಿ ಸಾಗಿತು ಯಕ್ಷ ಸಂಭ್ರಮ. ಇದರ ಜತೆಯಲ್ಲಿ ಪ್ರತಿಷ್ಠಾನದ ವತಿಯಿಂದ ಅಶಕ್ತ ಕಲಾವಿದರಿಗೆ ನೆರವು ಮುಂತಾದ ಕಾರ್ಯಗಳು.

Advertisement

ತೆಂಕು- ಬಡಗು ತಿಟ್ಟುಗಳು ಸಂಗಮವಾಗಿ, ಪ್ರಖ್ಯಾತ ಹಿರಿಯರು- ಸಾಧಕ ಯುವಕರು- ಎಳೆಯ ಕಲಾವಿದರು ಜತೆಯಾಗಿ, ಪರಂಪರೆಗೆ ಅನುಗುಣವಾಗಿ ಈ ಸಂಭ್ರಮ ಏರ್ಪಟ್ಟಿತು ಎಂಬುದು ಉಲ್ಲೇಖನೀಯ. ದೇಶ ವಿದೇಶಗಳ ಕಲಾಭಿಮಾನಿಗಳು ಇಲ್ಲಿ ತುಂಬಿ ತುಳುಕಿದರು.

ಪರಂಪರೆಯಂತೆ ಮುಂಜಾನೆ ಚೌಕಿಪೂಜೆಯೊಂದಿಗೆ ಈ ಸಂಭ್ರಮ ಆರಂಭವಾಯಿತು. ವೇದಿಕೆಗೆ ಅಗರಿ ಶ್ರೀನಿವಾಸ ಭಾಗವತರ ಹೆಸರನ್ನು ಇರಿಸಲಾಗಿತ್ತು. ಬಳಿಕ ಸಂಪ್ರದಾಯಕವಾದ ಅಬ್ಬರ ತಾಳ. ಇದು ಇಲ್ಲಿನ ಆರಂಭಿಕ ವೈಶಿಷ್ಟ್ಯ ಕೂಡಾ. ಹಿಂದಿನ ಕಾಲದಲ್ಲಿ ಬೇರೆ ಬೇರೆ ಊರುಗಳಲ್ಲಿ ಟೆಂಟ್‌ ಮೇಳಗಳ ಯಕ್ಷಗಾನ ಬಯಲಾಟ ರಾತ್ರಿಪೂರ್ತಿ ನಡೆಯುತ್ತಿತ್ತು. ಆಗ, ಪ್ರದರ್ಶನಕ್ಕೆ ಪೂರ್ವಭಾವಿಯಾಗಿ, ಪಕ್ಕದ ಎತ್ತರದ ಪ್ರದೇಶದಲ್ಲಿ ಸ್ವಲ್ಪಕಾಲ ಚೆಂಡೆವಾದನ ನಡೆಸಲಾಗುತ್ತಿತ್ತು. ಊರವರಿಗೆಲ್ಲಾ ಇಲ್ಲಿ “ಆಟ’ ನಡೆಯುತ್ತಿದೆ ಎಂದು ತಿಳಿಸುವ ಮತ್ತು ನೆನಪಿಸುವ ಮಾಧ್ಯಮ ಕೂಡಾ ಇದಾಗಿತ್ತು. ಇದೇ ಅಬ್ಬರ ತಾಳ! ಅಬ್ಬರ ಎಂದರೆ ಮಾಹಿತಿ ಸೂಚಕ ಎಂಬರ್ಥವಿದೆ. ಹಳ್ಳಿಗಳಲ್ಲಿ ಈ ಕ್ರಮವನ್ನು “ಕೇಳಿ ಬೊಟ್ಟುನು’ ಎಂದು ತುಳುವಿನಲ್ಲಿ ಹೇಳುತ್ತಿದ್ದರು. ಕನ್ನಡದಲ್ಲಿ “ಕೇಳಿ’ ಎಂದೂ ತಿಳಿದುಕೊಳ್ಳಬಹುದಾಗಿತ್ತು. ಯಕ್ಷಗಾನ ಆರಂಭದ ಸುಮಾರು ಎರಡು ತಾಸುಗಳ ಮೊದಲು- ಸಾಧಾರಣ ಸಂಜೆ ಆರರ ವೇಳೆಗೆ ಅಬ್ಬರ ತಾಳ ಕೇಳಿ ಬರುತ್ತಿತ್ತು.

ಆ ಕಾಲದಲ್ಲಿ ವಿದ್ಯುತ್‌, ವಾಹನ ಮುಂತಾದ ಸವಲತ್ತುಗಳು ಇರಲಿಲ್ಲ. ಸಂಪರ್ಕ ಸಾಧನಗಳಿರಲಿಲ್ಲ. ಕತ್ತಲೆಯ ಮೌನವನ್ನು ಸೀಳಿ ಬರುತ್ತಿದ್ದ ಈ ಅಬ್ಬರ ತಾಳ ಯಕ್ಷಗಾನಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪೂರಕವಾಗಿತ್ತು.

ಈ ಬಾರಿ ಅಡ್ಯಾರ್‌ನಲ್ಲಿ ಮುಂಜಾನೆ ಮೊಳಗಿದ ಅಬ್ಬರ ತಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಳಗಿತು. ಗುರುಪ್ರಸಾದ್‌- ಪ್ರಶಾಂತ್‌ ಶೆಟ್ಟಿ- ತೆಂಕು- ಬಡಗಿನ ಚೆಂಡೆವಾದಕರು ಇದನ್ನು ನಡೆಸಿಕೊಟ್ಟರು.

Advertisement

ಆ ಬಳಿಕದ ಕಾರ್ಯಕ್ರಮ ಚೆಂಡೆ ಜುಗಲ್‌ ಬಂದಿ- ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ. ವಿಶೇಷವೆಂದರೆ, ಯಕ್ಷಗಾನ ಪರಂಪರೆಯಲ್ಲಿ ಸ್ತ್ರೀವೇಷಗಳ ಆರಂಭಿಕ ಪ್ರವೇಶವಿರುತ್ತದೆ. ಈ ಪರಂಪರೆಯನ್ನು ನೆನಪಿಸುವ ಸ್ವರೂಪದಲ್ಲಿ ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ ಪರಿಕಲ್ಪಿಸಲಾಗಿತ್ತು. ಬಲಿಪ ಶಿವಶಂಕರ ಭಟ್‌, ಬಲಿಪ ಗೋಪಾಲಕೃಷ್ಣ ಭಟ್‌ ಭಾಗವತಿಕೆಯಲ್ಲಿ ದೇಲಂತಮಜಲು, ಉಪಾಧ್ಯ, ಅಡೂರು, ವಗೆನಾಡು ಮುಂತಾದ ಕಲಾವಿದರು ಹಿಮ್ಮೇಳದಲ್ಲಿ ಹಾಗೂ ಮುಮ್ಮೇಳದಲ್ಲಿ ಮುಚ್ಚಾರು, ಅಜಿತ್‌ ಪುತ್ತಿಗೆ, ದತ್ತೇಶ್‌, ಮಂದಾರ್‌ ಭಾಗವಹಿಸಿದರು. ಯಕ್ಷಗಾನದ ಪೂರ್ವರಂಗದ ಬಗ್ಗೆ ಮಾಹಿತಿಯನ್ನು ಈ ಕಾರ್ಯಕ್ರಮ ತೆರೆದಿಟ್ಟಿತು.

ಯಕ್ಷಾ ಸಪ್ತಸ್ವರಪದ ಬಳಿಕ ಮಹಿಳಾ ಯಕ್ಷಗಾನ ಕಾರ್ಯಕ್ರಮ ವಿವಿಧ ಕಾರಣಗಳಿಗಾಗಿ ಗಮನ ಸೆಳೆಯಿತು. ಯಕ್ಷಧ್ರುವ, ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಕೇಂದ್ರ ಮಹಿಳಾ ಘಟಕದವರು ಪೂರ್ಣಿಮಾ ಯತೀಶ್‌ ಶೆಟ್ಟಿ ನಿರ್ದೇಶನದಲ್ಲಿ ಸುಮಂಗಲಾ ರತ್ನಾಕರ್‌ ನಿರೂಪಣೆಯಲ್ಲಿ ಪ್ರಸ್ತುತಪಡಿಸಿದರು. ಭವ್ಯಶ್ರಿ ಅಜೇರು, ಅಮೃತಾ ಅಡಿಗ ಭಾಗವತರು.

ಯಕ್ಷಗಾನ ಪ್ರಸಂಗಗಳ ಪರಂಪರೆಯ ಕೆಲವು “ಒಡ್ಡೋಲಗ’ಗಳನ್ನು ಈ ಯಕ್ಷನಾಟ್ಯ ದೃಶ್ಯ ಲಹರಿಯಲ್ಲಿ ಕಲಾವಿದೆಯರು ಪ್ರಸ್ತುತಪಡಿಸಿದರು. ಯಕ್ಷಗಾನ ಪರಂಪರೆಯಲ್ಲಿ ಒಡ್ಡೋಲಗಕ್ಕೆ ಪ್ರಾಧಾನ್ಯವಿದೆ. ಈ ಪರಂಪರೆಯನ್ನು ಕಾಲಮಿತಿಯೊಳಗೆ ಅವರು ನಿರ್ವಹಿಸಿ, ನೆನಪಿಸಿಕೊಟ್ಟರು. ಪಾಂಡವರ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ, ಹನುಮಂತನ ಒಡ್ಡೋಲಗಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕ ಬಣ್ಣದ ಶಿವಪೂಜೆ ಹಾಗೂ ಮಹಿಷಾಸುರ ವಧೆಯ ಕಥಾನಕ. ಮುಂದೆ ತಾಳಮದ್ದಲೆಯ ಬಳಿಕ ಯಕ್ಷಗಾನ ನೃತ್ಯ. ಸಾನ್ವಿ, ರಾಶಿ, ಹೃದಾನ್‌ ಪಟ್ಲ ನಡೆಸಿಕೊಟ್ಟರು.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next