Advertisement

ಯಕ್ಷಮಂಡಲದ ವಿಜಯನಾಥ

03:50 AM Mar 24, 2017 | Team Udayavani |

ಮಣಿಪಾಲದ ಪಾರಂಪರಿಕ ಗ್ರಾಮ ನಿರ್ಮಾಣ, ಅದಕ್ಕೂ ಮೊದಲು ಹಸ್ತಶಿಲ್ಪ ವಸ್ತುಸಂಗ್ರಹ ಸಂಪದ – ಇವುಗಳ ಮೂಲಕ ಸಂಸ್ಕೃತಿ ಸೇವೆಯಲ್ಲಿ ಮಾದರಿ ಕೆಲಸವನ್ನು ಮಾಡಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮನ್ನಣೆ ಹೊಂದಿದ್ದವರು ವಿಜಯನಾಥ ಶೆಣೈ. ಅವರ ಅಷ್ಟೊಂದು ಪರಿಚಯವಿಲ್ಲದ ಇನ್ನೊಂದು ಮುಖ ಅವರ ತೀವ್ರವಾದ ಯಕ್ಷಗಾನ ಅಭಿಮಾನ. ಮನಸ್ಸಿಗೆ ಒಪ್ಪಿದ ಯಾವುದನ್ನೇ ಆದರೂ ತೀರ ಹಚ್ಚಿಕೊಂಡು ಕೆಲಸ ಮಾಡುವುದು ಅವರ ಸ್ವಭಾವ. ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ, ಸಾಧಕರ ಬಗೆಗಿನ ಕೆಲಸ – ಎಲ್ಲದರಲ್ಲೂ ಶೆಣೈ ಚಿಂತಕ – ಭಾವುಕ ರಸಿಕ, ಅವಧೂತ.

Advertisement

1970-1990 ದಶಕಗಳಲ್ಲಿ ಸಕ್ರಿಯವಾಗಿದ್ದ ಅವರ ನೇತೃತ್ವದ ಯಕ್ಷಮಂಡಲ ಮಣಿಪಾಲ- ಒಂದು ಧ್ಯೇಯಬದ್ಧ ಸಂಘಟನ ಸಂಸ್ಥೆ. ಅದು ಸಂಘಟಿಸಿದ ಹತ್ತಾರು ಕಾರ್ಯಕ್ರಮಗಳು ವಿಶಿಷ್ಟ. ಆ ಸಮಯದಲ್ಲಿ ಅವರೊಂದಿಗೆ ಸಹಕರಿಸಿದ ಅನುಭವಗಳು ಆಪ್ಯಾಯಮಾನ.

ಮಂಗಳೂರು ಪುರಭವನದಲ್ಲಿ ಅವರು ನಿರೂಪಿಸಿದ್ದ ಹಿರಿಯ ಕಲಾವಿದರ ತಾಳಮದ್ದಲೆ ಕೂಟ ಅಂತಹ ಒಂದು ವಿಶಿಷ್ಟ ಪ್ರಯತ್ನ. ಅಗರಿ ಶ್ರೀನಿವಾಸ ಭಾಗವತರು (ದಿವಾಣ, ಪಾಂಗಣ್ಣಾಯರ ಹಿಮ್ಮೇಳ), ಕೀರಿಕ್ಕಾಡು ಮಾಸ್ತರರು, ಪೊಲ್ಯ ದೇಜಪ್ಪ ಶೆಟ್ಟಿ, ಮಟ್ಟಿ ಸುಬ್ಬರಾವ್‌, ದೇರಾಜೆ ಸೀತಾರಾಮಯ್ಯ, ಪುಂಡೂರು ಗೋಪಾಲಕೃಷ್ಣ ಪುಣಿಂಚತ್ತಾಯರು, ಕೊರಕ್ಕೋಡು ಭವಾನಿಶಂಕರ ರಾವ್‌, ಕೋಟಿಕುಂಜ ನಾರಾಯಣ ಶೆಟ್ಟರು ಮತ್ತು ಶೇಣಿಯವರು (ಅವರೇ ಆ ತಂಡದ ಕಿರಿಯ ಅರ್ಥಧಾರಿ ಕಲಾವಿದ!-70 ವರ್ಷಕ್ಕೆ ಸಮೀಪ) ಇವರನ್ನು ಸೇರಿಸಿದ ನಮ್ಮ ಅಂದಿನ ಸಾಹಸ, ಸಾರ್ಥಕ್ಯ – ನೆನಪಿನ ಸಿಹಿಬುತ್ತಿ.

ಉದಯವಾಣಿ ಪತ್ರಿಕೆ ತನ್ನ ವಿಂಶತಿ ಆಚರಣೆಯ ಅಂಗವಾಗಿ ಏರ್ಪಡಿಸಿದ್ದ ಬಯಲಾಟಗಳ ಸಂಯೋಜನೆಯಲ್ಲೂ ಶೆಣೈ ಮುಖ್ಯರಾಗಿದ್ದರು. ಕಲಾ ಸನ್ನಿವೇಶಗಳ ಕುರಿತು, ಕಲಾವಿದರ ಕುರಿತು ಮಾತಾಡು ವಾಗ ವಿಜಯನಾಥರ ಭಾವ, ಭಂಗಿ ರೀತಿ – ಅದೇ ಒಂದು ಕಲಾನುಭವ. ಕಣ್ಣುಮುಚ್ಚಿ ಮೇಲೆ ನೋಡಿ, ವರ್ಣಿಸುತ್ತ “”ವೈರೇ, …… ಕಸ್‌ನೆÅà, ತೇಂ – ಮಳಾರಿ- ಅದ್ಭುತರೇ.., ಕಳ್ವೆàಂ” (ನೋಡು… ಆಹಾ ಎಂಥದದು… ಅಂದ್ರೆ… ಅದ್ಭುತ ಗೊತ್ತಾಯ್ತಾ!) ಎನ್ನುತ್ತ, ವೀಳ್ಯದ ರಸದೊಟ್ಟಿಗೆ ಕಲಾರಸಾಸ್ವಾದನೆ ಮಾಡುತ್ತಿದ್ದ ಶೆಣೈ ಓರ್ವ ಲೀನ ರಸಿಕ.

ಶೆಣೈ ಅವರ ಮಾತಿನ ರೀತಿ ವಿಚಿತ್ರ, ತುಂಡು ತುಂಡು… ಬಿಟ್ಟ ಪದ ನಾವು ತುಂಬಿಸಬೇಕು. ಆದರೆ ಅವರ ಪತ್ರಗಳು ಅತ್ಯಂತ ವ್ಯವಸ್ಥಿತ ವಿವರ ವಿವರ. ಚಿತ್ತಿಲ್ಲದ ಬರಹ, ಆಲಸ್ಯವಿಲ್ಲದ ಬರವಣಿಗೆ. ನಾನು ಅವರ ಪತ್ರಗಳನ್ನು ಕಾಯ್ದುಕೊಂಡಿಲ್ಲ ಎಂಬುದು ಬೇಸರದ ವಿಚಾರ. ದೇವಾಲಯದ ಶಿಲ್ಪ ಶೈಲಿ ಇತ್ಯಾದಿಗಳ ಕುರಿತು ಅವರು, ಸಂಶೋಧಕ ಮಂಜೇಶ್ವರ ಮುಕುಂದ ಪ್ರಭುಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಪ್ರಕಟವಾಗಿದ್ದು, ವಿಚಾರದ ನಿಧಿಯಂತಿದೆ.

Advertisement

ಹಸ್ತಶಿಲ್ಪ ಸಂಗ್ರಹದಲ್ಲಿ, ಪಾರಂಪರಿಕ ಗ್ರಾಮದಲ್ಲಿ, ಪತ್ರ, ಮಿತ್ರ ಹೃದಯಗಳಲ್ಲಿ ಶೆಣೈ ವಿಜಯಿ, ಜೀವಂತ, ಪ್ರೇರಕ.

ಡಾ| ಎಂ. ಪ್ರಭಾಕರ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next