Advertisement

ಇವ ಪ್ರೀತಿ-ಕಾಳಜಿಯ “ಯಜಮಾನ’

05:19 AM Mar 02, 2019 | Team Udayavani |

“ತುಳಿದವರನ್ನು ತುಳ್ಕೊಂಡು, ತಡೆದವರನ್ನು ತಳ್ಕೊಂಡೇ ಮಾರ್ಕೇಟ್‌ಗೆ ಬಂದಿರೋನು ನಾನು  …’ ಹೀಗೆ ಹೇಳುತ್ತಲೇ ಅಡ್ಡ ಬಂದವರನ್ನು ಅಡ್ಡಡ್ಡ ಉರುಳಿಸುತ್ತಾ ಮುಂದೆ ಸಾಗಿಬರುತ್ತಾನೆ ಕೃಷ್ಣ. ಆತನ ಸವಾಲಿಗೆ ನೂರಾರು ಅಡೆತಡೆಗಳು ಬಂದರೂ ಅವೆಲ್ಲವನ್ನು ದಾಟಿ ಆತ ಮುನ್ನುಗ್ಗುತ್ತಲೇ ಇರುತ್ತಾನೆ. ಅಷ್ಟಕ್ಕೂ ಆತನಿಗೆಗ ಎದುರಾಗುವ ಸವಾಲುಗಳು ಏನು, ಸವಾಲು ಹಾಕುವವರು ಯಾರು ಎಂಬ ಕುತೂಹಲವಿದ್ದರೆ ನೀವು “ಯಜಮಾನ’ ನೋಡಬೇಕು. 

Advertisement

ದರ್ಶನ್‌ ಸಿನಿಮಾ ಬಿಡುಗಡೆಯಾಗದೇ ಸುಮಾರು ಒಂದೂವರೆ ವರ್ಷವೇ ಆಗಿತ್ತು. ತಮ್ಮ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಏನು ಬೇಕೋ ಆ ಎಲ್ಲಾ ಅಂಶಗಳೊಂದಿಗೆ ದರ್ಶನ್‌ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಒಬ್ಬ ಸ್ಟಾರ್‌ ನಟನ, ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಹೇಗಿರಬೇಕೋ, ಆ ಎಲ್ಲಾ ಅಂಶಗಳು “ಯಜಮಾನ’ದಲ್ಲಿವೆ. ಕಲರ್‌ಫ‌ುಲ್‌ ಹಾಡು, ಫೈಟ್‌, ಒಂದು ಮಜವಾದ ಕಥೆ …

ಹೀಗೆ ಪಕ್ಕಾ ಎಂಟರ್‌ಟೈನ್‌ಮೆಂಟ್‌ ಪ್ಯಾಕೇಜ್‌ ಸಿನಿಮಾವಾಗಿ “ಯಜಮಾನ’ ನಿಮ್ಮನ್ನು ರಂಜಿಸುತ್ತಾನೆ. ಸ್ಟಾರ್‌ಗಳ ಸಿನಿಮಾದಲ್ಲಿ ಕಥೆ ಇರೋದಿಲ್ಲ, ಬರೀ ಸನ್ನಿವೇಶಗಳಲ್ಲೇ ಸಿನಿಮಾ ಮುಗಿಸಿಬಿಡುತ್ತಾರೆಂಬ ಮಾತಿದೆ. ಆದರೆ, “ಯಜಮಾನ’ ಮಾತ್ರ ಅದರಿಂದ ಹೊರತಾಗಿದೆ. ಚಿತ್ರದಲ್ಲಿ ಒಂದು ಗಟ್ಟಿಕಥೆ ಇದೆ. ವಾಸ್ತವತೆಗೆ ತೀರಾ ಹತ್ತಿರವಿರುವ ಕಥೆಯಲ್ಲಿ ಮುಗ್ಧ ರೈತರು, ಹಳ್ಳಿ ಜನ ಯೋಚಿಸಬೇಕಾದ ಗಂಭೀರ ಅಂಶದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಹಾಗಂತ ಇಡೀ ಸಿನಿಮಾ ಗಂಭೀರವಾಗಿ ಸಾಗುತ್ತದೆಯೇ ಎಂದರೆ ಖಂಡಿತಾ ಇಲ್ಲ. ದರ್ಶನ್‌ ಅಭಿಮಾನಿಗಳನ್ನು ಖುಷಿಪಡಿಸಲು ಎಲ್ಲೆಲ್ಲಿ, ಏನೇನು ಸೇರಿಸಬೇಕೋ ಅವೆಲ್ಲವನ್ನು ಸೇರಿಸಿದ ಪರಿಣಾಮ, ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಜೋರಾಗಿ ಕೇಳಿಬರುತ್ತದೆ. ಇಂಟ್ರೋಡಕ್ಷನ್‌ ಫೈಟ್‌, ಸಾಂಗ್‌ ಮೂಲಕ ಆರಂಭವಾಗುವ ಸಿನಿಮಾ, ಮಧ್ಯಂತರದ ಹೊತ್ತಿಗೆ ಹೆಚ್ಚು ಸೀರಿಯಸ್‌ ಆಗುತ್ತದೆ. ಅಲ್ಲಿಂದ ಕಥೆಯ ಮತ್ತಷ್ಟು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ದೊಡ್ಡ ಸ್ಟಾರ್‌ ಸಿನಿಮಾ ಎಂದರೆ ನಾಯಕನಿಗಷ್ಟೇ ಹೆಚ್ಚು ಪ್ರಾಮುಖ್ಯತೆ ಇರುತ್ತವೆ, ಇತರ ಪಾತ್ರಗಳು ಹಾಗೆ ಬಂದು ಹೀಗೆ ಹೋಗುತ್ತವೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಆದರೆ, “ಯಜಮಾನ’ ಸಿನಿಮಾ ನೋಡಿದಾಗ ಅಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಕೂಡಾ ನೆನಪಿನಲ್ಲಿ ಉಳಿಯುತ್ತದೆ. ಆ ಮಟ್ಟಿಗೆ ನಿರ್ದೇಶಕರು  ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ, ಇಡೀ ಕಥೆಯನ್ನು ಹೊತ್ತು ಸಾಗೋದು ಮಾತ್ರ ದರ್ಶನ್‌.

Advertisement

ಕಥೆಯ ಜೊತೆ ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲಿ ಡೈಲಾಗ್‌ ಕೂಡಾ ಒಂದು. ಪಂಚಿಂಗ್‌ ಸಂಭಾಷಣೆ ಮೂಲಕ ಸಿನಿಮಾವನ್ನು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಲಾಗಿದೆ. ಹುಲಿದುರ್ಗ ಎಂಬ ಹಳ್ಳಿಯ ರೈತರು ತಯಾರಿಸಿ, ಅವರಿಂದಲೇ ಮಾರಾಟವಾಗುವ ಎಣ್ಣೆಗೆ ಇಂಟರ್‌ನ್ಯಾಶನಲ್‌ ಕಂಪೆನಿಯೊಂದು ಕನ್ನ ಹಾಕುವ ಮೂಲಕ ಇಡೀ ಕಥೆ ತೆರೆದುಕೊಳ್ಳುತ್ತದೆ. ಸಾಕಷ್ಟು ಟ್ವಿಸ್ಟ್‌ಗಳ ಮೂಲಕ ಸಾಗುವ ಕಥೆಯಲ್ಲಿ ಕಾಮಿಡಿಗೂ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ.

ಚಿತ್ರದ ಕೆಲವು ದೃಶ್ಯಗಳನ್ನು ಟ್ರಿಮ್‌ ಮಾಡಿದ್ದರೆ, ವೇಗ ಇನ್ನಷ್ಟು ಹೆಚ್ಚುತ್ತಿತ್ತು. ಜೊತೆಗೆ ಸಣ್ಣಪುಟ್ಟ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ “ಯಜಮಾನ’ ಮಜವಾಗಿದೆ. ನಾಯಕ ದರ್ಶನ್‌ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಊರಿನ ಜನರ ಬಗ್ಗೆ ಕಾಳಜಿ ಇರುವ ಮಗನಾಗಿ, ಪ್ರೇಮಿಯಾಗಿ, ಅಡ್ಡ ಬಂದವರನ್ನು ಮಟ್ಟ ಹಾಕುವ ನಾಯಕನಾಗಿ … ಹೀಗೆ ವಿವಿಧ ಶೇಡ್‌ಗಳಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದು, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು, ಹಾಡಿನಲ್ಲಿ ದರ್ಶನ್‌ ಸಖತ್‌ ಆಗಿ ಸ್ಟೆಪ್‌ ಹಾಕಿದ್ದಾರೆ.

ಅದರಲ್ಲೂ “ಬಸಣ್ಣಿ  …’ ಹಾಡಿನಲ್ಲಿ ಅಭಿಮಾನಿಗಳೂ ಎದ್ದು ಕುಣಿಯುವ ಮಟ್ಟಕ್ಕೆ ದರ್ಶನ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್‌. ಇಬ್ಬರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಅನೂಪ್‌ ಸಿಂಗ್‌ ಠಾಕೂರ್‌, ರವಿಶಂಕರ್‌, ದೇವರಾಜ್‌, ದತ್ತಣ್ಣ, ಸಾಧುಕೋಕಿಲ ಸೇರಿದಂತೆ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಹರಿಕೃಷ್ಣ ಎಲ್ಲಾ ಹಾಡುಗಳು ಚೆನ್ನಾಗಿವೆ. 

ಚಿತ್ರ: ಯಜಮಾನ
ನಿರ್ಮಾಣ: ಮೀಡಿಯಾ ಹೌಸ್‌
ನಿರ್ದೇಶನ: ವಿ.ಹರಿಕೃಷ್ಣ, ಪಿ.ಕುಮಾರ್‌
ತಾರಾಗಣ: ದರ್ಶನ್‌, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್‌, ದೇವರಾಜ್‌, ಅನೂಪ್‌ ಸಿಂಗ್‌ ಠಾಕೂರ್‌, ರವಿಶಂಕರ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next