ದರ್ಶನ್ ಅಭಿನಯದ “ಯಜಮಾನ’ ಇದೀಗ ಶತಕ ಬಾರಿಸಿದೆ. ಹೌದು, ಕಳೆದ ಮಾರ್ಚ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬಂದಿದ್ದ “ಯಜಮಾನ’ ನೂರು ದಿನಗಳ ಯಶಸ್ವಿ ಪ್ರದರ್ಶನವನ್ನು ಪೂರೈಸಿದೆ.
ಈ ವರ್ಷದಲ್ಲಿ ದರ್ಶನ್ ಅಭಿನಯಸಿದ್ದ ಮೊದಲ ಚಿತ್ರ ಶತದಿನ ಆಚರಿಸುತ್ತಿರುವುದು ಅಭಿಮಾನಿಗಳಿಗೂ ಖುಷಿತಂದಿದ್ದು, ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಚಿತ್ರ ನೂರು ದಿನ ಪೂರೈಸಿ ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ.
ಇನ್ನು ಯೂಟ್ಯೂಬ್‌ನಲ್ಲಿ ಅಪ್ ಲೌಡ್ ಆಗಿದ್ದ ಯಜಮಾನ ಟ್ರೇಲರ್ ಈಗ 20 ಮಿಲಿಯನ್ ವೀಕ್ಷಣೆ ಹೊಂದಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ಮೊದಲ ದಾಖಲೆ ಎನ್ನಲಾಗುತ್ತಿದೆ. ಸದ್ಯ “ಯಜಮಾನ’ನಿಗೆ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ “ಯಜಮಾನ’ನ ಶತದಿನೋತ್ಸವವನ್ನು ಕೂಡ ಭರ್ಜರಿಯಾಗಿಯೇ ಆಚರಿಸಿಕೊಂಡಿದೆ.
ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ನಾಯಕ ನಟ ದರ್ಶನ್, ನಿರ್ಮಾಪಕಿ ಶೈಲಜಾ ನಾಗ್, ಬಿ. ಸುರೇಶ್, ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು, ‘ಯಜಮಾನ’ನ ಯಶಸ್ಸಿಗೆ ಕಾರಣರಾದವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
“ಯಜಮಾನ’ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯರಾಗಿ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ಜೋಡಿಯಾಗಿದ್ದರು. ಚಿತ್ರದ ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.