ಯಡ್ರಾಮಿ: ಸಾರ್ವಜನಿಕರಿಗೆ, ಮಕ್ಕಳಿಗೆ ಕುಡಿಯಲು ಶುದ್ಧ ನೀರು ಕೊಡುವ ಮಹತ್ವದ ಕೆಲಸ ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿ ಆಗಿದೆ. ಆದರೆ ಅಳವಡಿಸಲಾದ ಕುಡಿಯುವ ನೀರಿನ ಘಟಕಗಳು ತಾಲೂಕು ಸೇರಿದಂತೆ ಮಳ್ಳಿ ಗ್ರಾಮದಲ್ಲಿ ಪ್ರಾರಂಭವಾಗದೇ ಹೆಸರಿಗಷ್ಟೇ ಸೀಮಿತವಾಗಿವೆ.
ಯಡ್ರಾಮಿ ಪಟ್ಟಣದ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿ ವರ್ಷ ಕಳೆಯುತ್ತಿದ್ದರೂ ಪ್ರಾರಂಭವಾಗಿಯೇ ಇಲ್ಲ. ಅಳವಡಿಸುವಾಗ ಈ ಘಟಕ ವಿದ್ಯಾರ್ಥಿಗಳಿಗೆ ಎಂದು ಹೇಳಲಾಗಿತ್ತು. ಅದನ್ನೀಗ ಸಾರ್ವಜನಿಕವಾಗಿ ಉಪಯೋಗಿಸಬೇಕು ಎಂದು ಸ್ಥಳೀಯ ಪಂಚಾಯತಿ ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನುವ ಆರೋಪ ಶಾಳೆಯ ಶಿಕ್ಷಕರದ್ದಾಗಿದೆ.
ಶಾಲೆ ಆವರಣದಲ್ಲಿ ನೀರಿನ ಘಟಕ ಅಳವಡಿಸಿ ಅದನ್ನು ಸಾರ್ವಜನಿಕವಾಗಿ ಬಳಸಿದರೆ ಶಾಲೆ ವಿದ್ಯಾರ್ಥಿಗಳ ಆಟ-ಪಾಠಕ್ಕೆ ತೊಂದರೆ ಆಗುತ್ತದೆ ಎನ್ನುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗಿಲ್ಲವೇ? ಎನ್ನುತ್ತಾರೆ ಸಾರ್ವಜನಿಕರು.
ಇದು ಪಟ್ಟಣದ ಸಮಸ್ಯೆಯಾದರೆ, ಮಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾದ ನೀರಿನ ಘಟಕವೂ ಪ್ರಾರಂಭವಾಗದೇ ಹಳೆಕಟ್ಟಡದಲ್ಲಿ ಅನಾಥವಾಗಿ ನಿಂತಿದೆ. ಸಾರ್ವಜನಿಕರಿಗೂ ಇಲ್ಲ, ಶಾಲೆಗೂ ಪ್ರಯೋಜನಕ್ಕೆ ಬಾರದೇ ಹಾಳಾಗತ್ತಿದೆ.
ಯೋಜನೆಗಳ ಹೆಸರಿನಲ್ಲಿ ಹಣ ಖರ್ಚು ಮಾಡಿ ಘಟಕಗಳನ್ನು ಅಳವಡಿಸಿದ ಮಾತ್ರಕ್ಕೆ ಕೆಲಸ ಮುಗಿಯಿತು ಎನ್ನುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಪರಿಶೀಲಿಸಬೇಕಿಗಿದೆ. ಅಳವಡಿಸಲಾದ ನೀರಿನ ಘಟಕಗಳು ಶಾಲೆಗಳಿಗಾಗಲಿ, ಸಾರ್ವಜನಿಕರಿಗಾಗಲಿ ಸದ್ಭಳಕೆ ಆದಲ್ಲಿ ಯೋಜನೆಗಳ ಕಾರ್ಯ ಸಾರ್ಥಕವಾಗುವುದು ಎನ್ನುವ ಅರಿವು ಸಂಬಂಧಪಟ್ಟವರಿಗೆ ಆಗಬೇಕಿದೆ.