Advertisement

ಯಲಗೋಡ ಶಾಲೆಯಲ್ಲಿ ಶಿಕ್ಷಕರ ಕೊರತೆ

12:29 PM Jan 19, 2020 | Naveen |

ಯಡ್ರಾಮಿ: ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 416 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಇವರಿಗೆ ಕಲಿಸಲು ನಾಲ್ವರು ಶಿಕ್ಷಕರು ಇದ್ದು, ಇದರಲ್ಲೊಬ್ಬರು ಸಿಆರ್‌ಪಿಯಾಗಿ ನಿಯೋಜನೆಯಾಗಿದ್ದಾರೆ. ಹೀಗಾಗಿ ಕಳೆದೊಂದು ದಶಕದಿಂದ ಶಿಕ್ಷಕರ ಕೊರತೆ ಕಾಡುತ್ತಿದೆ.

Advertisement

ತಾಲೂಕು ಕೇಂದ್ರವಾದ ಯಡ್ರಾಮಿಯಿಂದ 14 ಕಿ.ಮೀ ದೂರದಲ್ಲಿರುವ ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಕಲ ಮೂಲಭೂತ ಸೌಕರ್ಯಗಳನ್ನು ಈ ಶಾಲೆ ಹೊಂದಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಮಂಗಳೂರು, ಅಣಜಗಿ, ನಂದಿಹಳ್ಳಿ ಗ್ರಾಮಗಳ ನೂರಾರು ಮಕ್ಕಳಿಗೆ ಇದೊಂದೆ ಹಿರಿಯ ಪ್ರಾಥಮಿಕ ಶಾಲೆ. ಪ್ರತಿ ವರ್ಷವೂ ಈ ಊರಿನ ಮಕ್ಕಳು ಆರನೇ ತರಗತಿಗೆ ಪ್ರವೇಶ ಪಡೆಯುತ್ತಾರೆ. ಹೀಗೆ ಮೂರ್‍ನಾಲ್ಕು ಕಿ.ಮೀ ನಡೆದು ಭವಿಷ್ಯದ ಕನಸುಗಳನ್ನು ಹೊತ್ತು ಬರುವ ಮಕ್ಕಳಿಗೆ ಪಾಠ  ಡಲು
ವಿಷಯವಾರು ಶಿಕ್ಷಕರೇ ಈ ಶಾಲೆಯಲ್ಲಿ ಇಲ್ಲ. ಇರುವ ಮೂವರಲ್ಲಿ ಒಬ್ಬರು ನಲಿ-ಕಲಿ ಶಿಕ್ಷಕ, ಉಳಿದಿಬ್ಬರು ಸಮಾಜ ವಿಜ್ಞಾನ ಶಿಕ್ಷಕರು.

ನಲಿ-ಕಲಿ ಶಿಕ್ಷಕರು ತಮ್ಮ ಪಾಠದ ಜೊತೆ ಹೆಚ್ಚುವರಿಯಾಗಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಇರುವ ಮೂವರು ಶಿಕ್ಷಕರು ಎಲ್ಲ ವಿಷಯಗಳನ್ನು ಮುಗಿಸಬೇಕಾದ ಒತ್ತಡವಿದೆ.

ಮುಖ್ಯವಾಗಿ ವಿಜ್ಞಾನ, ಗಣಿತ, ಹಿಂದಿ, ದೈಹಿಕ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಪೆಟ್ಟು ಬೀಳುತ್ತಿದೆ ಎನ್ನುವುದು ಪಾಲಕರ ಅಳಲಾಗಿದೆ. ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ಕೊಟ್ಟು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುವ ಬದಲು ವಿಷಯಗಳ ಕಾಯಂ ಶಿಕ್ಷಕರನ್ನು ನೇಮಿಸಿ, ಶಿಕ್ಷಕರ ಕೊರತೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಯಲಗೋಡ, ಮಂಗಳೂರು, ಅಣಜಗಿ, ನಂದಿಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪಾಲಕರ ಒತ್ತಾಯವಾಗಿದೆ.

ನಲಿ-ಕಲಿಗೆ 112 ಮಕ್ಕಳು ಇದ್ದಾರೆ. ಅದಕ್ಕೆ ಶಿಕ್ಷಕರಿಬ್ಬರ ಅವಶ್ಯವಿದೆ. ಶಾಲೆ ಮೂಲಭೂತ ಸೌಕರ್ಯ ಹೊಂದಿದೆ. ಆದರೆ ಕಾಯಂ ಶಿಕ್ಷಕರಿಲ್ಲದ ಕಾರಣ ಒಂದಿಷ್ಟು ಸಮಸ್ಯೆ ಇದೆ. ಅತಿಥಿ ಶಿಕ್ಷಕರ ಸಹಾಯದಿಂದ ಗಣಿತ, ವಿಜ್ಞಾನ, ಹಿಂದಿ ವಿಷಯಗಳನ್ನು ಬೋಧಿಸಲಾಗುತ್ತಿದೆ.
ನಾಗಪ್ಪ ಎಂ. ಸಜ್ಜನ,
ಮುಖ್ಯ ಶಿಕ್ಷಕ, ಸ.ಹಿ.ಪ್ರಾ. ಶಾಲೆ

ಗಣಿತ, ವಿಜ್ಞಾನ ಶಿಕ್ಷಕರ ಕೊರತೆ ತಾಲೂಕಿನ ಅನೇಕ ಶಾಲೆಗಳಲ್ಲಿದೆ. ಯಲಗೋಡ ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಿಸಿ, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ಶಿಕ್ಷಕರ ನೇಮಕಾತಿ ಕಡಿಮೆ ಆದದ್ದರಿಂದ ಸಮಸ್ಯೆ ಸಹಜವೇ ಆಗಿದೆ. ಮುಂದೆ ಕಾಯಂ ಶಿಕ್ಷಕರು ಬರುತ್ತಾರೆ.
ಶಾಂತಪ್ಪ ಹುಲಕಲ್‌,
ಬಿಇಒ, ಜೇವರ್ಗಿ

Advertisement

ಮೂರ್‍ನಾಲ್ಕು ಸಲ ಇಲಾಖೆಗೆ ಮನವಿ ಪತ್ರ ಕೊಟ್ಟಿದ್ದೇವೆ. ಕಾಯಂ ಶಿಕ್ಷಕರ ನೇಮಕ ಮಾಡಿ ಕಳಿಸಿದರೆ, ನಮ್ಮ ಮಕ್ಕಳ ಶಿಕ್ಷಣ ಉತ್ತಮವಾಗಿ ನಡೆಯುತ್ತದೆ. ಮಕ್ಕಳ ಭವಿಷ್ಯ ಗಮನಿಸಿ ಅಧಿ ಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕು.
ಸಿದ್ರಾಮಯ್ಯ ಗದ್ದಗಿಮಠ,
ಗ್ರಾ.ಪಂ ಸದಸ್ಯ

ಸಂತೋಷ ಬಿ. ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next