Advertisement

ಎಳರಾಮೆ ಪ್ರಥಮ ನುಡಿತೇರು ಎಳೆಯುವವರು ಯಾರು?

10:01 AM Aug 14, 2019 | Naveen |

ಸಂತೋಷ ನವಲಗುಂದ
ಯಡ್ರಾಮಿ:
ನೂತನ ಯಡ್ರಾಮಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ರಚನೆಯಾದ ಬಳಿಕ ಅದ್ಧೂರಿ ಉದ್ಘಾಟನೆಗೆ ಅನೇಕ ತೊಡಕುಗಳು ಉಂಟಾದವು. ವರುಷ ಕಳೆದರೂ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸಲು ಆಗಲಿಲ್ಲ. ಒಂದರ ಮೇಲೊಂದು ಚುನಾವಣೆ, ಸ್ಥಳೀಯ ಜಾತ್ರಾ, ಉತ್ಸವಗಳು ಹೀಗೆ ಅನೇಕ ಸಂಗತಿಗಳು ಕಾರಣವಾಗಿರಬಹುದು. ಈ ಬಾರಿಯಾದರೂ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸಲೇಬೇಕು ಎಂಬ ತಾಲೂಕು ಸಾಹಿತ್ಯ ಪರಿಷತ್‌ ನಿರ್ಧಾರದಿಂದ ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆದಿವೆ.

Advertisement

ತಾಲೂಕು ಕೇಂದ್ರ ಯಡ್ರಾಮಿ, ಅರಳಗುಂಡಗಿ ಹಾಗೂ ಇಜೇರಿ ಒಳಗೊಂಡಂತೆ ಮೂರು ಜಿಪಂ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ಈಗ ನಡೆಸಲಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಆಯ್ಕೆ ಮಾಡುವುದು ಪರಿಷತ್‌ನ ಅತಿ ದೊಡ್ಡ ಜವಾಬ್ದಾರಿಯಾಗಿದೆ. ಯಾವುದೇ ಜಾತಿ, ಮತ, ಕುಲ, ಧರ್ಮ ಎನ್ನದೇ ಸೂಕ್ತವಾದ ವ್ಯಕ್ತಿ ಆಯ್ಕೆ ಮಾಡಿದರೆ ಪರಿಷತ್ತಿನ ಮೌಲ್ಯ ಹೆಚ್ಚಾಗುತ್ತದೆ ಎಂದು ತಾಲೂಕಿನ ಅನೇಕ ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ. ಕನ್ನಡ ನುಡಿ ತೇರನ್ನೆಳೆಯುವವರು ಯಾರು ಎಂಬ ಕುತೂಹಲವಂತೂ ಸಾಹಿತ್ಯ ಪ್ರೇಮಿಗಳಲ್ಲಿ ಕಾಣಬರುತ್ತಿದೆ.

ಅರಳಗುಂಡಗಿ ವಲಯದಲ್ಲಿ ಶರಣ ಸಾಹಿತಿ ಭೀಮರಾಯಗೌಡ, ಇಜೇರಿ ವಲಯದಲ್ಲಿ ಪ್ರೊ| ಪ್ರಭಾಕರ ಸಾಥಖೇಡ, ಯಡ್ರಾಮಿ ವಲಯದಲ್ಲಿ ಮಲ್ಲಿಕಾರ್ಜುನ ಕಡಕೋಳ ಹಾಗೂ ಎಸ್‌.ಕೆ. ಬಿರಾದಾರ, ಮಳ್ಳಿ ವಲಯದಲ್ಲಿ ಡಾ| ಪ್ರಧಾನೆಪ್ಪ ಕೊಕಟನೂರ, ಡಾ| ಶಾಂತಪ್ಪ ಡಂಬಳ, ಮಡಿವಾಳಪ್ಪ ನಾಗರಹಳ್ಳಿ, ಅಮೃತ ದೊಡಮನಿ ಹಾಗೂ ಕೆ.ಕೆ. ದೇಸಾಯಿ ಹೀಗೆ ಅನೇಕ ಸಾಹಿತಿಗಳ ಪಟ್ಟಿಯೇ ಸಿಗುತ್ತದೆ. ಮುಖ್ಯವಾಗಿ ನಾಟಕಕಾರ, ಸಾಹಿತಿ, ಹಿರಿಯ ಕಲಾವಿದ ಪ್ರೊ| ಪ್ರಭಾಕರ ಸಾಥಖೇಡ ಅವರು ಅವಿಭಜಿತ ಜೇವರಗಿ ತಾಲೂಕು ಸಮ್ಮೇಳನಗಳಲ್ಲಿನ ಸರ್ವಾಧ್ಯಕ್ಷತೆಗಾಗಿ ಮುಂಚೂಣಿಯಲ್ಲಿ ಚರ್ಚೆಗೊಳಪಟ್ಟು ಅಲ್ಲಿನ ಪರಿಷತ್ತಿನ ಏಕಮುಖ ನಿರ್ಧಾರದಿಂದ ವಂಚಿತರಾದರು. ಈಗ ಯಡ್ರಾಮಿ ತಾಲೂಕು ಆಗಿರುವುದರಿಂದ ಅವರನ್ನು ಇಲ್ಲಿ ನಡೆಯುವ ಸಮ್ಮೇಳನದಲ್ಲಿಯಾದರು ಆಯ್ಕೆ ಮಾಡಬೇಕು ಎಂಬುದು ಕೆಲವರ ಅಭಿಪ್ರಾಯ. ಪ್ರಗತಿಪರ ಚಿಂತಕ, ಸಾಹಿತಿ, ದಾವಣಗೆರೆ ರಂಗಾಯಣ ಸದಸ್ಯ, ಮಲ್ಲಿಕಾರ್ಜುನ ಕಡಕೋಳ ಆಗಬೇಕು ಎಂಬ ಕೂಗು ಕೆಲವರದ್ದಾಗಿದೆ. ಜತೆಗೆ ಶಿಕ್ಷಕ ಅಮೃತ ದೊಡಮನಿ ಆಗಲಿ ಎಂಬ ಅಭಿಪ್ರಾಯಗಳು ಸಹ ಇವೆ. ಏನೇ ಇರಲಿ ಹಿರಿತನ, ಸಾಹಿತ್ಯಕೃಷಿ ಹಾಗೂ ವಿವಿಧ ರಂಗಗಳಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆ ಹಾಗೂ ಈ ನೆಲದ ಜನರೊಂದಿಗಿನ ಒಡನಾಟ ಪರಿಗಣಿಸಿ ಎಲ್ಲರ ಒಮ್ಮತದ ಮೇರೆಗೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂಬುದು ಈ ಭಾಗದ ಸಾಹಿತ್ಯಾಭಿಮಾನಿಗಳ ಒತ್ತಾಸೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next