Advertisement

ಸುಂಗಠಾಣ ಪಲ್ಲಕ್ಕಿ ಉತ್ಸವದಲ್ಲಿ ಮದ್ಯವೇ ನೈವೇದ್ಯ!

05:01 PM Mar 12, 2020 | Naveen |

ಯಡ್ರಾಮಿ: ಜಾತ್ರೆಗಳಲ್ಲಿ ದೇವರುಗಳಿಗೆ ಹೋಳಿಗೆ, ಕಡಬು, ಮಾದಲಿ, ವಿವಿಧ ಸಿಹಿ ಖಾದ್ಯಗಳನ್ನು ನೈವೇದ್ಯವಾಗಿ ಕೊಡು ವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಬುಧವಾರ ನಡೆದ ಸುಂಗಠಾಣ ಸಿದ್ಧನ ಜಾತ್ರೆಯಲ್ಲಿ ಮದ್ಯವೇ ಪ್ರಧಾನ ನೈವೇದ್ಯವಾಗಿತ್ತು.

Advertisement

ಪ್ರತಿ ವರ್ಷದ ಪದ್ಧತಿಯಂತೆ ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದ ಕರಿದೇವರ (ಸಿದ್ಧಲಿಂಗೇಶ್ವರ) ಪಲ್ಲಕ್ಕಿಯು ಕೂಡಲಸಂಗಮದಲ್ಲಿ ಗಂಗಾಸ್ನಾನ ಪೂಜೆಗೆ ಹೋಗುವ ಮಾರ್ಗ ಮಧ್ಯೆ ಹೋಳಿ ಹುಣ್ಣಿಮೆ ಮರುದಿನ ಮಾಗಣಗೇರಿಯಲ್ಲಿ ಸೂರ್ಯೋದಯಕ್ಕೂ ಮುಂಚೆ ಊರ ಪ್ರವೇಶ ಮಾಡಿತು.

ಗ್ರಾಮದ ಸರ್ವ ಜನಾಂಗದವರು ಕರಿದೇವರ ಪಲ್ಲಕ್ಕಿಯನ್ನು ಕುಂಭ-ಕಳಸ, ಮಂಗಳ ವಾದ್ಯಗಳೊಂದಿಗೆ ಬರಮಾಡಿ ಕೊಂಡು ಊರಿನ ದಲಿತ ಕೇರಿಯ ಭಕ್ತರ ಜನರೆಲ್ಲ ಸೇರಿ ಮದ್ಯವನ್ನು ನೈವೇದ್ಯವಾಗಿ ಅರ್ಪಿಸಿದರು.

ಪಲ್ಲಕ್ಕಿಯೊಂದಿಗೆ ಬರುವ ಪರ ಊರಿನ ಪಾದಯಾತ್ರಿಗಳಿಗೆ ಗ್ರಾಮದವರು ಅನ್ನ ಪ್ರಸಾದ, ಜೋಳದ ಗಂಜಿ ವ್ಯವಸ್ಥೆ ಮಾಡಿದ್ದರು. ಪೂಜಾರಿಗಳು ದಿನಪೂರ್ತಿ ಡೊಳ್ಳಿನ ಪದ ಹಾಡಿದರು. ಸಂಜೆ 5 ಗಂಟೆಗೆ ಗ್ರಾಮದ ಪ್ರಮಖ ಬೀದಿಗಳಲ್ಲಿ ಬಾಜಾ-ಭಜಂತ್ರಿ, ಡೊಳ್ಳಿನ ವಾಲಗದೊಂದಿಗೆ ಪಲ್ಲಕ್ಕಿ ಉತ್ಸವ ಸಾಗಿತು. ಈ ವೇಳೆ ಹರಕೆ ಹೊತ್ತ ನೂರಾರು ಭಕ್ತರು ಅಡ್ಡ ಮಲಗಿ ಹರಕೆ ತೀರಿಸಿದರು.

ಮಂಗಳವಾದ್ಯಗಳೊಂದಿಗೆ ಕರಿದೇವರ ಪಲ್ಲಕ್ಕಿಯನ್ನು ಊರ ಸೀಮೆ ವರೆಗೂ ತೆಗೆದುಕೊಂಡು ಹೋಗಿ ಭಕ್ತಿಯಿಂದ ಕಳುಹಿಸಿ ಕೊಡಲಾಯಿತು. ಮುಂದೆ ಕರ್ನಾಳ, ಹುಣಸ್ಯಾಳ, ತಂಗಡಗಿ ಮಾರ್ಗವಾಗಿ ಸಂಗಮಕ್ಕೆ ತಲುಪುತ್ತೇವೆ ಎಂದು ದೇವರ ಪೂಜಾರಿ ತಿಳಿಸಿದರು.

Advertisement

ಮಾಗಣಗೇರಿ ಗ್ರಾಮವು ದೇವತಾ ಕಾರ್ಯಕ್ಕೆ ಹೆಸರುವಾಸಿಯಾಗಿದೆ. ಈ ದೇವರ ವಿಶಿಷ್ಟ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರಶಾಂತ ಎಂ. ಕುನ್ನೂರ,
ಶಿಕ್ಷಕ, ಮಾಗಣಗೇರಿ 

Advertisement

Udayavani is now on Telegram. Click here to join our channel and stay updated with the latest news.

Next