Advertisement

ಗುಡುಗು ಸಹಿತ ಮಳೆ: ನೆಲಕಚ್ಚಿದ ಭತ್ತದ ಬೆಳೆ

12:14 PM Apr 09, 2020 | Naveen |

ಯಡ್ರಾಮಿ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದ್ದು, ಲಾಕ್‌ಡೌನ್‌ ಜತೆಯಲ್ಲಿ ಮತ್ತೂಂದು ಬರೆ ಎಳೆದಂತಾಗಿದೆ. ಕೊರೊನಾ ಲಾಕ್‌ಡೌನ್‌ನಿಂದ ಕಲ್ಲಂಗಡಿ, ಟೊಮ್ಯಾಟೋ, ಮೆಣಸಿನಕಾಯಿ ಬೆಳೆದ ರೈತರು ಅವುಗಳನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ಸಾಗಿಸಲಾಗದೇ ಅಸಹಾಯಕರಾಗಿ ದನಕರುಗಳಿಗೆ ತಿನ್ನಲು ಹಾಕುತ್ತಿರುವುದು ಒಂದೆಡೆಯಾದರೆ, ಇತ್ತ ಭತ್ತ ನಾಟಿ ಮಾಡಿದ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ.

Advertisement

ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ತಮ್ಮ ಗದ್ದೆಗಳಲ್ಲಿ ಹುಲುಸಾಗಿ ಬೆಳೆದ ಭತ್ತವನ್ನು ಇನ್ನೇನು ಒಂದೇ ವಾರದಲ್ಲಿ ಕಟಾವು ಮಾಡಿ, ರಾಶಿ ಮಾಡಬೇಕೆಂದಿದ್ದರು. ಇನ್ನೇನು ಲಾಕ್‌ಡೌನ್‌ ಮುಗಿಯುತ್ತದೆ, ವಾಹನಗಳ ಓಡಾಟ ಸುಗಮವಾಗಿ, ಪಂಜಾಬಿ ಮಷೀನ್‌ ಗಳನ್ನು ಗದ್ದೆಗಳಿಗೆ ಇಳಿಸಿಬಿಡಬೇಕು ಎನ್ನುವ ಆತುರದಲ್ಲಿದ್ದರು. ಆದರೆ ವಿಧಿ ಯಾಟವೇ ಬೇರೆ ಆಗಿತ್ತು.

ಮಂಗಳವಾರ ಸಂಜೆ ಗುಡುಗು ಮಿಂಚು, ಬಿರುಗಾಳಿ ಜೊತೆಗೆ ಸುರಿದ ಅಕಾಲಿಕ ಮಳೆ, ಅನ್ನದಾತನ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಕುರುಳಗೇರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುಮಾರು 600ಕ್ಕೂ ಹೆಚ್ಚಿನ ಎಕರೆ ವಿಸ್ತೀರ್ಣದ ಭತ್ತದ ಬೆಳೆ ಮಳೆ-ಬಿರುಗಾಳಿಗೆ ನೆಲಕ್ಕುರುಳಿ ಅಪಾರ ನಷ್ಟವುಂಟಾಗಿದೆ. ಮುಂಗಾರಿನಲ್ಲಿ ಬೆಳೆದ ಭತ್ತದ ಖರ್ಚುನ್ನು ಈ ಹಿಂಗಾರಿನ ಬೆಳೆ ತೂಗಿಸಿಕೊಂಡು ಹೋಗುತ್ತದೆ. ಈ ಹಿಂಗಾರಿ ಪೀಕು ಒಂದಿಷ್ಟು ಲಾಭವನ್ನು ಕೊಡುತ್ತಿತ್ತು. ಆದರೆ ಮಳೆ-ಗಾಳಿಯಿಂದ ಇದಕ್ಕೂ ಕುತ್ತ ಬಂದಿದೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next