ಯಡ್ರಾಮಿ: ಕೋವಿಡ್ ಲಾಕ್‌ಡೌನ್ ಸಡಿಲಿಕೆ ಆದ ಬೆನ್ನಲ್ಲೆ ಬೇರೆ-ಬೇರೆ ಕಡೆಗಳಿಂದ ತಮ್ಮ ತವರುಗಳಿಗೆ ಮರಳಿದ ಜನರಿಗಾಗಿ ಪಟ್ಟಣ ಸೇರಿದಂತೆ ಇಡೀ ತಾಲೂಕಿನ ಹಲವು ಗ್ರಾಮಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.
ಪಟ್ಟಣ ಸೇರಿದಂತೆ ಮಳ್ಳಿ, ಕುರುಳಗೇರಾ, ಕೊಂಡಗೂಳಿ, ಯಾಳವಾರ, ಇಜೇರಿ ಗ್ರಾಮಗಳಲ್ಲಿ ಸಾವಿರಾರು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಪಟ್ಟಣವೊಂದರಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಡಾ| ಅಂಬೇಡ್ಕರ್ ಭವನ, ಅಲ್ಪಸಂಖ್ಯಾತ ವಸತಿ ನಿಲಯ, ಯುಕೆಪಿ ಕ್ಯಾಂಪ್ ಸೇರಿದಂತೆ ಒಟ್ಟು 4 ಕೇಂದ್ರಗಳಲ್ಲಿ 250 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸ್ಥಳೀಯ ಗ್ರಾಪಂ ವತಿಯಿಂದ ಕ್ವಾರಂಟೈನ್ ಆದ ಜನರ ನಿತ್ಯ ಜೀವನದ ನಿರ್ವಹಣೆ ವ್ಯವಸ್ಥಿತವಾಗಿ ಸಾಗುತ್ತಿದ್ದರೂ ಕ್ವಾರಂಟೈನ್‌ನಲ್ಲಿದ್ದ ಕೆಲವರು ಪಂಚಾಯಿತಿ ಹಾಗೂ ತಾಲೂಕಾಡಳಿತ ಸಿಬ್ಬಂದಿ ಜೊತೆಗೆ ಅಸಹಕಾರ ನೀಡುತ್ತಿರುವುದು ಸಿಬ್ಬಂದಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇದು ಒಂದು ಸಮಸ್ಯೆಯಾದರೆ, ನಾಲ್ಕನೇ ಹಂತದ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆ ಆದ ಕಾರಣ ವಲಸೆ ಹೋದ ಜನ ಮರಳಿ ಬರುತ್ತಿರುವುದರಿಂದ ಕ್ವಾರಂಟೈನ್ ಮಾಡಲು ಪಟ್ಟಣದ ಹೊರವಲಯದಲ್ಲಿ ಕಟ್ಟಡಗಳ ಕೊರತೆ ಕಂಡುಬರುತ್ತಿದೆ. ಪಟ್ಟಣದ ಹೊರವಲಯದ ಅಲ್ಲೊಂದು ಇಲ್ಲೊಂದು ಇರುವ ಕಟ್ಟಡ ಕೇಳಿದರೆ ಖಾಸಗಿ ವ್ಯಕ್ತಿಗಳು ಸಹಕಾರ ನೀಡದಿರುವುದು ತಾಲೂಕಾಡಳಿತಕ್ಕೆ ಇನ್ನೊಂದು ಸಮಸ್ಯೆಯಾಗಿದೆ. ಸಾಮಾಜಿಕ ಕಳಕಳಿಯ ಉದ್ದೇಶಕ್ಕಾಗಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳು ಕ್ವಾರಂಟೈನ್ ಹೊಂದುವ ಜನತೆಗೆ ಕೆಲಕಾಲ ಆಶ್ರಯ ನೀಡಿದರೆ, ಕೋವಿಡ್ ತಂದೊಡ್ಡಿದ ಬಿಕ್ಕಟ್ಟಿಗೆ ಪರಿಹಾರವಾಗಿ ನಿಂತಂತಾಗುತ್ತದೆ. ಜೊತೆಗೆ ನಮಗೆ ಸಹಕಾರ ನೀಡುವುದು ಅಷ್ಟೇ ಅಗತ್ಯವಾಗಿದೆ ಎಂಬುದು ತಾಲೂಕಾಡಳಿತ ಸಿಬ್ಬಂದಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಒಕ್ಕೊರಲಿನ ಕೂಗಾಗಿದೆ.
ಕ್ವಾರಂಟೈನ್ ಆದ ಜನರಿಗೆ ಪಂಚಾಯಿತಿ ಇಂದಲೇ ಉತ್ತಮ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೂ ಅಲ್ಲಿದ್ದ ಕೆಲವರು ತಮಗಿಷ್ಟವಾದ ಆಹಾರ ತರುವಂತೆ ಸಿಬ್ಬಂದಿ ಜೊತೆ ಕಿರಿಕಿರಿ ಮಾಡುವುದು ಸರಿಯಲ್ಲ. ಕ್ವಾರಂಟೈನ್ ಆದ ಜನರು ಕೆಲ ದಿನಗಳ ಮಟ್ಟಿಗೆ ಸಹಕಾರ ನೀಡುವುದು ಮುಖ್ಯವಾಗಿದೆ.
ಬಾಬುಗೌಡ,
ಯಡ್ರಾಮಿ ಗ್ರಾಪಂ ಪಿಡಿಒ
ವಲಸೆ ಹೋದ ಜನರ ಆಗಮನ ದಿನದಿಂದ-ದಿನಕ್ಕೆ ಹೆಚ್ಚುತ್ತಿರುವುದರಿಂದ ಲಭ್ಯವಿದ್ದ ಸರ್ಕಾರಿ ಕಟ್ಟಡಗಳು ಭರ್ತಿಯಾಗಿವೆ. ಇನ್ನು ಮುಂದೆ ಆಗಮಿಸುವ ಜನರನ್ನು ಕ್ವಾರಂಟೈನ್ ಮಾಡಲು ಖಾಸಗಿ ಕಟ್ಟಡಗಳ ಮಾಲೀಕರ ಸಹಕಾರ ತುಂಬಾ ಅಗತ್ಯವಾಗಿದೆ.
ಬಸಲಿಂಗಪ್ಪ ನೈಕೋಡಿ,
ತಹಶೀಲ್ದಾರ್ ಯಡ್ರಾಮಿ