ಯಾದಗಿರಿ: ನಗರ ಪೊಲೀಸ್ ಅಧಿಕಾರಿಗಳ ತಂಡ ಬೀಸಿದ ಬಲೆಗೆ ಏಳುವರೇ ಲಕ್ಷ ರೂ. ಮೌಲ್ಯದ ಒಟ್ಟು 22 ಬೈಕ್ಗಳು (ದ್ವೀಚಕ್ರ ವಾಹನ) ವಶಪಡಿಸಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ಶಂಕರ್ ತಿಳಿಸಿದರು.
ಶನಿವಾರ ಸಂಜೆ ನಗರ ಪೊಲೀಸ್ ಠಾಣೆಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಕ್ ಕಳ್ಳತನ ಪ್ರಕರಣದಲ್ಲಿ ಕಲಬುರಗಿ ತಾಲೂಕಿನ ಆಜಾದಪುರದ ಬಾಲಾಜಿ ಹಾಗೂ ಆಳಂದ ತಾಲೂಕಿನ ಯಳಸಂಗಿಯ ಗುರುಶಾಂತ ಎಂಬ ಅರೋಪಿಗಳು ಕಳೆದ ಎರಡು ವರ್ಷಗಳಿಂದ ಬೈಕ್ಗಳನ್ನು ಕಳ್ಳತನ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆಂದು ಹೇಳಿದರು.
ಕಳೆದ ಮೇ 29ರಂದು ನಗರದ ರೈಲ್ವೆ ನಿಲ್ದಾಣದ ಮುಂದೆ ಕುಮಲಯ್ಯ ಕಾವಲಿ ಎಂಬುವವರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಪತ್ತೆಗೆ ತಮ್ಮ ಹಾಗೂ ಹೆಚ್ಚುವರಿ ಎಸ್ ಪಿ ಧರಣೇಶ, ಡಿವೈಎಸ್ ಪಿ ಅರುಣಕುಮಾರ ಕೊಳುರು ಮಾರ್ಗದರ್ಶನದಲ್ಲಿ ಸಿಪಿಐ ಸುನೀಲ ಮೂಲಿಮನಿ ಹಾಗೂ ಪಿಎಸ್ ಐ ಮಂಜನಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ತನ್ನ ಸಿಬ್ಬಂದಿಯೊಂದಿಗೆ ಎಲ್ಲಡೆ ತನಿಖೆ ನಡೆಸಿ ಈ ಇಬ್ಬರು ಆರೋಪಿಗಳಿಂದ 22 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹತಿ ನೀಡಿದರು.
ಯಾದಗಿರಿ ನಗರದ ಏಳು ಮತ್ತು ಕಲಬುರಗಿ ಸೇರಿದಂತೆಯೇ ವಿವಿಧಡೆ ಕಳ್ಳತನವಾಗಿರುವ ಬೈಕ್ಗಳು ಸೇರಿವೆ. ಈ ಪ್ರಕರಣದ ಬೇದಿಸಿದ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ, ಜಗನ್ಮಾಥರಡ್ಡಿ, ದಾವಲಸಾಬ್, ವೆಂಕಟೇಶ್, ಗೋವಿಂದ ಇದ್ದರು.
ಯಾದಗಿರಿ ನಗರದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಬಂಧಿತ ಆರೋಪಿಗಳ ವಿರುದ್ಧ ಕಲಬುರಗಿ ಚೌಕ್, ಬ್ರಹ್ಮಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಸಿಪಿಐ ಸುನೀಲ್ಕುಮಾರ್ ಮೂಲಿಮನಿ ತಿಳಿಸಿದರು.
—-
ಇಂತಹ ಪ್ರಕರಣಗಳ ಮುನ್ನೆಚ್ಚರಿಕೆಯಿಂದ ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕೆಕೆಆರ್ಡಿಬಿಯಿಂದ 53 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಸಿಸಿ ಕ್ಯಾಮರಾ ನಿಗಾಗಾಗಿ ನಗರ ಠಾಣೆಯಲ್ಲಿ ಒಂದು ಕಂಟ್ರೋಲ್ ರೂಂ. ಮಾಡಲಾಗುವುದು. ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಶಾಲೆಗಳ ಸಮೀಪದಲ್ಲಿ ವೈಜ್ಞಾನಿಕವಾದ ಹಂಪ್ ಅಳವಡಿಸಿ ಶಾಲಾ ಮಕ್ಕಳ ಸುರಕ್ಷತೆ ಕಾಪಾಡಲಾಗುವುದು. ಗಾಂಧಿ ಚೌಕ್ ನಲ್ಲಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣೆ ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು.
– ಪ್ರಥ್ವಿಕ್ ಶಂಕರ್, ಎಸ್.ಪಿ.ಯಾದಗಿರಿ.