ಯಾದಗಿರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (71) ಅವರು ಇಂದು (ಸೆ.17) ಬೆಂಗಳೂರಿನ ಎಚ್ ಸಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
2018 ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮುದ್ನಾಳ ಅವರು ಯಾದಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.
ನಂತರ ನಡೆದ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಭಾವಗೊಂಡಿದ್ದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರು ಕಾರ್ಯಕರ್ತರ ಪ್ರಿಯ ರಾಜಕಾರಣಿಯಾಗಿದ್ದರು. 1995 ರಲ್ಲಿ ಯಾದಗಿರಿಯ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಮಾಜಿ ಸಚಿವ ದಿ.ವಿಶ್ವನಾಥರೆಡ್ಡಿ ಮುದ್ನಾಳ ಅವರ ಸುಪುತ್ರರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಇಬ್ಬರು ಮಕ್ಕಳಿದ್ದರು. ಮುದ್ನಾಳ ಮನೆತನದ ಮೇಲೆ ಯಾದಗಿರಿ ಜಿಲ್ಲೆಯ ಜನರು ಅಪಾರ ಅಭಿಮಾನ ಇಟ್ಟುಕೊಂಡಿದ್ದರು.
ಇಂದು ರಾತ್ರಿ ಮುದ್ನಾಳ ಅವರ ಪಾರ್ಥಿವ ಶರೀರ ಯಾದಗಿರಿಗೆ ಕರೆತರಲಾಗುತ್ತದೆ. ನಾಳೆ (ಬುಧವಾರ) ಸಂಜೆ ಯಾದಗಿರಿ ತಾಲೂಕಿನ ಅವರ ಸ್ವ ಗ್ರಾಮದ ಮುದ್ನಾಳ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುದ್ನಾಳ ಕುಟುಂಬ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Shivamogga : ಬೀಡಿಗಾಗಿ ಖೈದಿಗಳಿಂದ ಕಲ್ಲು ತೂರಾಟ, ಸಿಬ್ಬಂದಿಗೆ ಜೀವ ಬೆದರಿಕೆ