ಮುಂಬಯಿ: ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್, ಬುಧವಾರದ ಐಪಿಎಲ್ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟಿಗೆ 170 ರನ್ ಗಳಿಸಿ ಸವಾಲೊಡ್ಡಿದೆ.
ಸೂರ್ಯಕುಮಾರ್ ಯಾದವ್ ಮತ್ತು ಕೃಣಾಲ್ ಪಾಂಡ್ಯ ಅವರ ಜವಾಬ್ದಾರಿಯುತ ಆಟ ಮುಂಬೈ ನೆರವಿಗೆ ಬಂತು. ಯಾದವ್ 43 ಎಸೆತಗಳಿಂದ ಸರ್ವಾಧಿಕ 59 ರನ್ ಬಾರಿಸಿದರು. ಇದರಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಕೃಣಾಲ್ 32 ಎಸೆತ ಎದುರಿಸಿ 42 ರನ್ ಹೊಡೆದರು. ಸಿಡಿಸಿದ್ದು 5 ಬೌಂಡರಿ ಹಾಗೂ ಒಂದು ಸಿಕ್ಸರ್.
ಡೆತ್ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೈರನ್ ಪೊಲಾರ್ಡ್ ಸಿಡಿದು ನಿಂತಿದ್ದರಿಂದ ಮುಂಬೈ ಮೊತ್ತ 170ಕ್ಕೆ ಏರಿತು. ಇವರಿಬ್ಬರು ಸೇರಿಕೊಂಡು ಕೊನೆಯ 2 ಓವರ್‌ಗಳಲ್ಲಿ 45 ರನ್ ಸೂರೆಗೈದರು. ಹಾರ್ದಿಕ್ 8 ಎಸೆತಗಳಿಂದ 25 ರನ್ (1 ಬೌಂಡರಿ, 3 ಸಿಕ್ಸರ್) ಮತ್ತು ಪೊಲಾರ್ಡ್ 7 ಎಸೆತ ಎದುರಿಸಿ 17 ರನ್ ಬಾರಿಸಿದರು (2 ಸಿಕ್ಸರ್). ಬ್ರಾವೊ ಪಾಲಾದ ಅಂತಿಮ ಓವರಿನಲ್ಲಿ 29 ರನ್ ಸೋರಿ ಹೋಯಿತು!
ಕ್ವಿಂಟನ್ ಡಿ ಕಾಕ್ (4) ಮತ್ತು ನಾಯಕ ರೋಹಿತ್ ಶರ್ಮ (13) ಅವರಿಂದ ಮುಂಬೈ ನಿಧಾನ ಗತಿಯ ಆರಂಭ ಪಡೆಯಿತು. ಇಬ್ಬರೂ ಕುಂಟುತ್ತ ಆಡಿದ ಪರಿಣಾಮ 8ನೇ ಓವರ್ ಆರಂಭಕ್ಕೆ 2 ವಿಕೆಟಿಗೆ ಕೇವಲ 45 ರನ್ ಮಾಡಿತು. 9ನೇ ಓವರಿನಲ್ಲಿ 50 ರನ್ ಆದಾಗ ಯುವರಾಜ್ ಸಿಂಗ್ (4) ವಿಕೆಟ್ ಬಿತ್ತು.
ಈ ಹಂತದಲ್ಲಿ ಜತೆಗೂಡಿದ ಸೂರ್ಯಕುಮಾರ್ ಯಾದವ್ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಚೆನ್ನೈ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸತೊಡಗಿದರು. ಮುಂಬೈ ಸರದಿಯನ್ನೂ ಬೆಳೆಸತೊಡಗಿದರು. ಸ್ಕೋರ್ 112ರ ತನಕ ಏರಿತು. ಆಗ ಕೃಣಾಲ್ ವಿಕೆಟ್ ಹಾರಿಸಿದ ಮೋಹಿತ್ ಶರ್ಮ ಚೆನ್ನೈಗೆ ದೊಡ್ಡ ಬ್ರೇಕ್ ಒದಗಿಸಿದರು. ಚೆನ್ನೈ ಪರ ಶಾದೂìಲ್ ಠಾಕೂರ್ ಹೊರತುಪಡಿಸಿ ಉಳಿದವರೆಲ್ಲ ತಲಾ ಒಂದೊಂದು ವಿಕೆಟ್ ಕಿತ್ತರು.
ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್
ಕ್ವಿಂಟನ್ ಡಿ ಕಾಕ್ ಸಿ ಜಾಧವ್ ಬಿ ಚಹರ್ 4
ರೋಹಿತ್ ಶರ್ಮ ಸಿ ಧೋನಿ ಬಿ ಜಡೇಜ 13
ಸೂರ್ಯಕುಮಾರ್ ಯಾದವ್ ಸಿ ಜಡೇಜ ಬಿ ಬ್ರಾವೊ 59
ಯುವರಾಜ್ ಸಿಂಗ್ ಸಿ ರಾಯುಡು ಬಿ ತಾಹಿರ್ 4
ಕೃಣಾಲ್ ಪಾಂಡ್ಯ ಸಿ ಜಡೇಜ ಬಿ ಮೋಹಿತ್ 42
ಹಾರ್ದಿಕ್ ಪಾಂಡ್ಯ ಔಟಾಗದೆ 25
ಕೈರನ್ ಪೊಲಾರ್ಡ್ ಔಟಾಗದೆ 17
ಇತರ 6
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 170
ವಿಕೆಟ್ ಪತನ: 1-8, 2-45, 3-50, 4-112, 5-125.
ಬೌಲಿಂಗ್:
ದೀಪಕ್ ಚಹರ್ 3-0-21-1
ಶಾರ್ದುಲ್ ಠಾಕೂರ್ 4-0-37-0
ಮೋಹಿತ್ ಶರ್ಮ 3-0-27-1
ಇಮ್ರಾನ್ ತಾಹಿರ್ 4-0-25-1
ರವೀಂದ್ರ ಜಡೇಜ 2-0-10-1
ಡ್ವೇನ್ ಬ್ರಾವೊ 4-0-49-1