ಯಾದಗಿರಿ: ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ಒಂದು ದಿನದ ಮಟ್ಟಿಗೆ ಸೈಲೆಂಟ್ ಆಗಿದ್ದು, ಗುರುವಾರ ಜಿಲ್ಲೆಯಲ್ಲಿ ಒಬ್ಬರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಯಾದಗಿರಿಯಲ್ಲಿ 299 ಸೋಂಕಿತರಲ್ಲಿ ಗುರುವಾರ 5 ಜನರು ಗುಣಮುಖ ಹೊಂದಿದ್ದು, ಒಬ್ಬರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿದೆ.
ಬುಧವಾರವಷ್ಟೇ ಜಿಲ್ಲೆಯಲ್ಲಿ 9 ಜನರಲ್ಲಿ ಒಕ್ಕರಿಸಿದ್ದ ಕೋವಿಡ್ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಗುರುವಾರ ಸೋಂಕಿತರು ಪತ್ತೆಯಾಗದಿರುವುದು ನೆಮ್ಮದಿ ಮೂಡಿಸಿದೆ. ಈ ಮಧ್ಯೆಯೇ ಇನ್ನೂ 6 ಸಾವಿರಕ್ಕೂ ಹೆಚ್ಚು ಮಾದರಿಗಳ ವರದಿ ಬರಬೇಕಿದ್ದು, ಎಷ್ಟು ಜನರಲ್ಲಿ ಸೋಂಕು ಪತ್ತೆಯಾಗಬಹುದೋ ಎನ್ನುವ ಭಯವೂ ಇದ್ದೆ ಇದೆ.
ಗುರುವಾರ 2261 ಜನರ ವರದಿ ನೆಗೆಟಿವ್ ಬಂದಿದ್ದು, ಈವರೆಗೆ 11375 ಮಾದರಿಗಳ ವರದಿ ನೆಗೆಟಿವ್ ಬಂದಿವೆ. 9 ಜನರ ಹೊಸ ಮಾದರಿ ಸಂಗ್ರಹಿಸಲಾಗಿದ್ದು ಇನ್ನು 6369 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಕೋವಿಡ್19 ಖಚಿತಪಟ್ಟ ಸೋಂಕಿತರಲ್ಲಿ 33 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 821 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2175 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 7 ಕಂಟೇನ್ಮೆಂಟ್ ಝೋನ್ ರಚಿಸಲಾಗಿದೆ.
ಹೊಸ ಜಿಲ್ಲಾಸ್ಪತ್ರೆಯಲ್ಲಿ 101 ಜನರು, ಶಹಾಪುರ ಕೊರೊನಾ ಕೇರ್ ಸೆಂಟರ್‌ನಲ್ಲಿ 61 ಜನ, ಸುರಪುರ ಕೋವಿಡ್ ಕೇರ್ ಸೆಂಟರ್‌ನಲ್ಲಿ 15 ಹಾಗೂ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 102 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 35 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ ಗಳಲ್ಲಿ ಒಟ್ಟು 1173 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.