Advertisement

ಜನರಿಗೆ ಗ್ಲಾಕೋಮಾ ಅರಿವು ಅಗತ್ಯ

12:41 PM Mar 12, 2020 | Naveen |

ಯಾದಗಿರಿ: ಗ್ಲಾಕೋಮಾ ದೃಷ್ಟಿ ಕದಿಯುವ ಕಾಯಿಲೆಯಾಗಿದೆ. ಈ ಬಗ್ಗೆ ದೃಷ್ಟಿದೋಷ ಬರುವ ಮೊದಲೇ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ|ಭಗವಂತ ಅನವಾರ ಹೇಳಿದರು.

Advertisement

ನಗರದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ಇಂಡಿಯನ್‌ ಮೆಡಿಕಲ್‌ ಅಸೋಷಿಯೇಶನ್‌ ಹಾಗೂ ರೆಡ್‌ ಕ್ರಾಸ್‌ ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಗ್ಲಾಕೋಮಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚೇಂದ್ರೀಯಗಳಲ್ಲಿ ಕಣ್ಣು ಬಹು ಮುಖ್ಯ ಅಂಗವಾಗಿದೆ. ಕಾರಣ ಪ್ರತಿಯೊಬ್ಬರೂ ಕಣ್ಣಿನ ಪರೀಕ್ಷೆ ಮಾಡಿಸಿ ಕಾಳಜಿ ವಹಿಸಬೇಕು. ದೃಷ್ಟಿದೋಷದಿಂದ ಜೀವನ ಕತ್ತಲಾಗಿಸಲು ಬಿಡಬಾರದು. ಯಾರೂ ಈ ಗ್ಲಾಕೋಮಾದಿಂದ ಬಳಲಬಾರದು ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ಲಾಕೋಮಾ ರೋಗಿಗಳ ಜೊತೆ ಆರೋಗ್ಯ ಇಲಾಖೆ ಇದೆ. ಅವರು ಆರೋಗ್ಯದಿಂದ ಇರಲು ನಾವು ಶ್ರಮಿಸುತ್ತೇವೆ. ವಿದ್ಯಾರ್ಥಿಗಳು ಗ್ಲಾಕೋಮಾ ಬಗ್ಗೆ ಕುಟುಂಬದವರಿಗೆ ತಿಳಿಸಬೇಕು.

ಜತೆಗೆ ಅಕ್ಕ-ಪಕ್ಕದ ಮನೆಯವರಿಗೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ತಲೆನೋವು, ಕಣ್ಣು ಉಬ್ಬು ನೋವು, ಕಣ್ಣು ಕೆಂಪಾಗುವುದು, ದೃಷ್ಟಿ ಕಡೆಮೆಯಾಗುವಿಕೆ, ಬಣ್ಣ ಬದಲಾವಣೆ ಇವು ಗ್ಲಾಕೋಮಾದ ಲಕ್ಷಣಗಳಾಗಿವೆ ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸರಾವ್‌ ದೊಡ್ಮನಿ ಮಾತನಾಡಿ, ಯಾವುದೇ ರೋಗ ಬರುವ ಮುಂಚಿತವಾಗಿ ಅಗತ್ಯ ಕ್ರಮ ಅನುಸರಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ಲಾಕೋಮಾದ ಬಗ್ಗೆ ವಿದ್ಯಾರ್ಥಿಗಳು ಇತರರಿಗೆ ತಿಳಿಹೇಳಬೇಕು. ಹೆಚ್ಚಾಗಿ ಮೊಬೈಲ್‌, ಟಿವಿ ನೋಡುವುದರಿಂದಲೂ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಒಳಿತು ಎಂದು ಸಲಹೆ ನೀಡಿದರು.

Advertisement

ವಿಜಯಲಕ್ಷ್ಮೀ ಆಸ್ಪತ್ರೆ ನೇತ್ರತಜ್ಞ ಡಾ| ಸಮೀನಾ ನೀಲಕಂಠ ಸೈದಾಪುರ ಮಾತನಾಡಿ, ಗ್ಲಾಕೋಮಾ ರೋಗ ತಿಳಿಯದ ರೀತಿಯಲ್ಲಿ ಬಂದು ಕಣ್ಣಿನ ನರಗಳನ್ನು ನಿಶ್ಯಕ್ತಗೊಳಿಸಿ ದೃಷ್ಟಿ ದೋಷ ಕಡಿಮೆ ಮಾಡುತ್ತದೆ. ದೃಷ್ಟಿದೋಷ ಹುಟ್ಟಿನಿಂದ ವೃದ್ಧರವರೆಗೂ ಬರಬಹುದು. ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ವಿಶ್ವದಲ್ಲೇ 1.2 ಮಿಲಿಯನ್‌ ಜನ ಗ್ಲಾಕೋಮಾದಿಂದ ಬಳಲುತ್ತಿದ್ದಾರೆ. ತಲೆನೋವು, ಒಂದೇ ಬಣ್ಣ ವಿವಿಧ ಬಣ್ಣಗಳ ರೀತಿಯಲ್ಲಿ ಕಾಣುವುದು, ಪದೇ ಪದೇ ಕಣ್ಣಿನ ಗ್ಲಾಸ್‌ ಬದಲಾಯಿಸುವುದರಿಂದ ಗ್ಲಾಕೋಮಾ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಹೇಳಿದರು.

ಐಎಂಎ ಜಿಲ್ಲಾಧ್ಯಕ್ಷ ಡಾ| ಸಿ.ಎಂ. ಪಾಟೀಲ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಇದ್ದರು. ಕಿರಿಯ ಆರೋಗ್ಯ ಸಹಾಯಕ ಶರಣಬಸಪ್ಪ ಹೊಸಮನಿ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದಕುಮಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next