Advertisement

ಗೋವಾಕ್ಕೆ ತೆರಳಿದ್ದ ಕಾರ್ಮಿಕರ ಪರದಾಟ

01:10 PM Apr 10, 2020 | Naveen |

ಯಾದಗಿರಿ: ಕೋವಿಡ್‌-19 ವಿಶ್ವವನ್ನೇ ತಲ್ಲಣಗೊಳಿಸಿದ್ದು ದೇಶದಲ್ಲಿ ಘೋಷಿಸಿದ ಲಾಕ್‌ ಡೌನ್‌ನಿಂದ ಅನ್ಯ ರಾಜ್ಯಕ್ಕೆ ದುಡಿಯಲು ತೆರಳಿದ್ದ ಕನ್ನಡಿಗ ಕುಟುಂಬಗಳು ಅಲ್ಲಿಯೇ ಸಿಲುಕಿಕೊಂಡಿದ್ದು, ತಮ್ಮ ಮಕ್ಕಳು ಕಣ್ಣೀರು ಹಾಕಿ ಮೊಬೈಲ್‌ ಮೂಲಕ ಕರೆ ಮಾಡುತ್ತಿದ್ದರೂ ಕಣ್ಣೀರು ಒರೆಸಲೂ ಆಗದೇ ಪರದಾಡುತ್ತಿದ್ದಾರೆ.

Advertisement

ಹೊಟ್ಟೆಪಾಡಿಗಾಗಿ ದುಡಿಯಲು ಗೋವಾಕ್ಕೆ ತೆರಳಿರುವ ಜಿಲ್ಲೆಯ ಸುರಪುರ ತಾಲೂಕಿನ ಬಸರಗಿಡ ತಾಂಡಾ, ಮರನಾಳ ತಾಂಡಾ, ಜುಮ್ಲಾಪುರ ತಾಂಡಾ ಹಾಗೂ ಐಬಿ ತಾಂಡಾದ ಹಲವಾರು ಕುಟುಂಬಗಳ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರಿಗೆ ತಿನ್ನಲು ಆಹಾರವೂ ಇಲ್ಲ, ಕೆಲಸವೂ ಇಲ್ಲ. ತಿನ್ನಲು ಆಹಾರವೂ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಕೊರೊನಾ ಹರಡದಂತೆ ಮೊದಲಿಗೆ ಒಂದು ದಿನ ಲಾಕ್‌ಡೌನ್‌ ಘೋಷಣೆಯಾಗಿದೆ. ಬಳಿಕ ಎಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರಿಯುವುದು ಎಂದು ಭಾವಿಸಿದ್ದ ಕುಟುಂಬಗಳು ಈಗ ಅಕ್ಷರಶಃ ನಲುಗಿ ಹೋಗಿವೆ. ಏಕಾಏಕಿ 21 ದಿನ ಲಾಕ್‌ಡೌನ್‌ ಘೋಷಣೆಯಾದಾಗ ಮರುದಿನವೇ ಸ್ವಗ್ರಾಮಗಳಿಗೆ ಬರಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಸಾರಿಗೆ ಸೌಕರ್ಯ ಸಿಗದೇ ಅಲ್ಲಿಯೇ ಅನಿವಾರ್ಯವಾಗಿ ಉಳಿದಿದ್ದಾರೆ.

ಪಾಲಕರು ದುಡಿಯಲು ತೆರಳಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿದ್ದಾರೆ. ಇವರಲ್ಲಿ ಬಹುತೇಕರು ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಈಗ ವಸತಿ ಶಾಲೆಗಳನ್ನು ಮುಚ್ಚಿದ್ದು ಮಕ್ಕಳು ಆಹಾರಕ್ಕಾಗಿ ಪರದಾಡಿ ಪಾಲಕರಿಗೆ ಮೊಬೈಲ್‌ ಮೂಲಕ ಕರೆ ಮಾಡಿ ಗೋಳಿಡುತ್ತಿದ್ದಾರೆ.

ಗೋವಾದಲ್ಲಿರುವ ಕೆಲವು ಕಾರ್ಮಿಕರು ಮಕ್ಕಳೊಂದಿಗೆ ವಾಸವಿದ್ದಾರೆ. ಇಷ್ಟು ದಿನ ಗೋವಾದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಮನೆಯವರು ಬಾಡಿಗೆ ನೀಡಿ, ನಿಮ್ಮ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. 10ರೂ.ಗೆ ಕೆ.ಜಿ ದೊರೆಯುತ್ತಿದ್ದ ರೇಷನ್‌ ಅಕ್ಕಿ ಈಗ 60 ರೂ.ಗೆ ಸಿಗುತ್ತಿದೆ. ಹಾಲನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು ಪರಿತಪಿಸುವಂತಾಗಿದೆ ಎಂದು ವಿಡಿಯೋ ಮೂಲಕ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ನಿರ್ಗತಿಕ ಕನ್ನಡಿಗರಿಗೆ ಗೋವಾ ಸರ್ಕಾರ ಕನಿಷ್ಠ ಆಹಾರ ಪದಾರ್ಥಗಳನ್ನು ನೀಡಿರಲಿಲ್ಲ. ಬುಧವಾರವಷ್ಟೇ ಅಕ್ಕಿ ಮತ್ತು ಬೇಳೆ ಸರಬರಾಜು ಮಾಡಿದೆ ಎಂದು ನೊಂದ ಕನ್ನಡಿಗ ಸಂತೋಷ ಅಳಲು ತೋಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ನಮ್ಮನ್ನು ಹೇಗಾದರೂ ಮಾಡಿ ನಮ್ಮ ಗ್ರಾಮಗಳಿಗೆ ಸೇರಿಸಲಿ, ನಮ್ಮ ಮನೆಯಲ್ಲಿರುವ ರೊಟ್ಟಿ-ಕಾರಾ ಸೇವಿಸಿ ಇರುತ್ತೇವೆ ಎಂದು ಕೋರಿದ್ದಾರೆ. ಈ ಬಗ್ಗೆ ಶಾಸಕ ನರಸಿಂಹ ನಾಯಕ ಅವರ ಗಮನಕ್ಕೂ ತರಲಾಗಿದೆ. ಆದರೆ ಲಾಕ್‌ಡೌನ್‌ ಮುಗಿಯುವವರೆಗೂ ಏನೂ ಮಾಡಲು ಸಾಧ್ಯವಿಲ್ಲ. ಏ.14ರ ಬಳಿಕ ನೋಡೋಣ ಎನ್ನುವ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.

Advertisement

ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿದ್ದೇವೆ. ಮಕ್ಕಳು ತಾಂಡಾಗಳಲ್ಲಿ ಹಸಿವಿನಿಂದ ಕಣ್ಣೀರು ಹಾಕುತ್ತಿದ್ದಾರೆ. ಕೈಯಲ್ಲಿ ಕೆಲಸವೂ ಇಲ್ಲ, ಊಟವೂ ಇಲ್ಲದೇ ಪರದಾಡುತ್ತಿದ್ದೇವೆ. ನಮ್ಮನ್ನು ಹೇಗಾದರೂ ಮಾಡಿ ಸರ್ಕಾರ ತಾಂಡಾಗಳಿಗೆ ಸೇರಿಸಲಿ. ಮನೆಗೆ ಬಂದರೆ ಸಾಕು. ಇದ್ದ ರೊಟ್ಟಿ-ಪಲ್ಲೆ ತಿಂದು ಇರುತ್ತೇವೆ.
ಸಂತೋಷ, ಕಾರ್ಮಿಕ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next