Advertisement

ಲಕ್ಷ ಭಕ್ತರ ಸಮ್ಮುಖದಲ್ಲಿ ವಿಶ್ವಾರಾಧ್ಯರ ರಥೋತ್ಸವ

04:22 PM Feb 29, 2020 | Naveen |

ಯಾದಗಿರಿ: ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

Advertisement

ಶುಕ್ರವಾರ ಸಂಜೆ ಸೂರ್ಯ ಮುಳುಗುವ ವೇಳೆ ಸಿದ್ಧ ಸಂಸ್ಥಾನದ ಆವರಣದಲ್ಲಿ ಲಕ್ಷಾಂತರ ಭಕ್ತರು ವಿಶ್ವಾರಾಧ್ಯರ ರಥೋತ್ಸವ ಕಣ್ಣು ತುಂಬಿಕೊಳ್ಳುವ ತವಕದಲ್ಲಿದ್ದರು. ಅಂದು ದಿನವಿಡಿ ರಣ ಬಿಸಿಲಿನಲ್ಲಿಯೂ ಭಕ್ತ ಸಮೂಹ ತಂಡೋಪ ತಂಡವಾಗಿ ಅಬ್ಬೆತುಮಕೂರಿನೆಡೆಗೆ ಧಾವಿಸಿ ಬರುತ್ತಿತ್ತು. ಬಸ್ಸು, ಕಾರು, ಜೀಪು, ಆಟೋಗಳಲ್ಲಿ ಬರುವವರು ಒಂದೆಡೆಯಾದರೆ, ಪಾದಯಾತ್ರೆ ಮೂಲಕ ಬರುವ ಭಕ್ತರು ಅಸಂಖ್ಯಾತರಾಗಿದ್ದರು.

ದಾರಿಯುದ್ದಕ್ಕೂ ಭಕ್ತರಿಂದ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯ ಮಹಾರಾಜ ಕೀ ಜೈ ಎಂಬ ಘೋಷಣೆಗಳು ಮೊಳಗುತ್ತಿದ್ದವು. ಶ್ರೀಮಠದ ಪೀಠಾಧಿ ಪತಿ ಡಾ| ಗಂಗಾಧರ ಸ್ವಾಮೀಜಿ ಶುಕ್ರವಾರ ಸಂಜೆ 6:30 ಗಂಟೆಗೆ ರಥವನ್ನೇರಿ ಚಾಲನೆ ನೀಡುವುದೇ ತಡ, ಅಸಂಖ್ಯಾತ ಭಕ್ತ ವೃಂದ ಶ್ರೀ ವಿಶ್ವಾರಾಧ್ಯ ಮಹಾರಾಜ ಕೀ ಜೈ, ಗಂಗಾಧರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟವ ಜಯಘೋಷಗಳೊಂದಿಗೆ ಮಹಾ ರಥವನ್ನು ಎಳೆದು ಸಂಭ್ರಮಿಸಿದರು.

ನೆರೆದ ಭಕ್ತ ಸಮೂಹ ಉತ್ತತ್ತಿ, ಬಾಳೆ ಹಣ್ಣುಗಳನ್ನು ರಥದ ಮೇಲೆ ಎಸೆದು, ಭಕ್ತಿಯಿಂದ ಕೈ ಜೋಡಿಸಿ, ನಮಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ಆರಾಧ್ಯ ದೈವ ವಿಶ್ವಾರಾಧ್ಯರಲ್ಲಿ ಪ್ರಾರ್ಥಿಸುವುದು ಕಂಡು ಬಂದಿತು. ಸಿದ್ಧ ಸಂಸ್ಥಾನದ ಶ್ರೀ ವಿಶ್ವಾರಾಧ್ಯರ ಜಾತ್ರೆಗೆ ಕರ್ನಾಟಕ ಮಾತ್ರವಲ್ಲ, ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯದಿಂದ ಅಸಂಖ್ಯಾತ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು.

ಶುಕ್ರವಾರ ಬೆಳಗ್ಗೆ ಶ್ರೀ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ಜರುಗಿತು. ನಂತರ ದುಧನಿಯ ಶಂಕರ ಮೇತ್ರೆ ಮತ್ತು ಅವರ ಪರಿವಾರದವರಿಂದ ರಥೋತ್ಸವಕ್ಕೆ ಮಹಾಪೂಜೆ, ರಥಾಂಗ ಹೋಮ ನೆರವೇರಿತು. ಇದೇ ಸಂದರ್ಭದಲ್ಲಿ ಶ್ರೀಮಠದ ಭಕ್ತರಾದ ಠಾಣಗುಂದಿ ಶ್ರೀ ವಿಶ್ವಪ್ರಸಾದ ರಡ್ಡಿ ರಾಠೊಡ, ಅಬ್ಬೆತುಮಕೂರಿನ ಮಲ್ಲಿಕಾರ್ಜುನ ಟೇಲರ್‌ ಇವರುಗಳು ಪೀಠಾ ಧಿಪತಿ ಡಾ| ಗಂಗಾಧರ ಸ್ವಾಮೀಜಿಯವರಿಗೆ ತುಲಾಭಾರ ಸೇವೆ ನೆರವೇರಿಸಿದರು.

Advertisement

ರೈತಾಪಿ ಜನರು, ಜಾತ್ರೆಗೆ ಆಗಮಿಸಿದ ಮಕ್ಕಳು, ಹಿರಿಯರು, ಯುವ ಸಮೂಹ ಜಾತ್ರೆ ಸೊಬಗನ್ನು ಸವಿದರು. ಜಾತ್ರೆಯಲ್ಲಿ ಹಾಕಿದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ಜನತೆ ತಮಗೆ ಇಷ್ಟವಾದ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ವೀರಭದ್ರ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಗುರುಮೂರ್ತಿ ಸ್ವಾಮೀಜಿ, ಶಿವಲಿಂಗ ರಾಜೇಂದ್ರ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಕಾಳಹಸ್ತೇಂದ್ರ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ, ಬೂದಿ ಬಸವ ಸ್ವಾಮೀಜಿ, ಮುನೀಂದ್ರ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬಸವಯ್ಯ ಶರಣರು ಹಾಗೂ ಸಂಸದರಾದ ಡಾ| ಉಮೇಶ ಜಾಧವ, ರಾಜಾ ಅಮರೇಶ ನಾಯಕ, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ನಾಗನಗೌಡ ಕಂದಕೂರ, ರಾಜುಗೌಡ, ಶರಣಬಸಪ್ಪಗೌಡ ದರ್ಶನಾಪುರ, ಬಿ. ನಾರಾಯಣರಾವ್‌, ಬಸವರಾಜ ಮತ್ತಿಮಡು, ದತ್ತಾತ್ರೇಯ ಪಾಟೀಲ ರೇವೂರ, ಡಾ| ಅಜಯಸಿಂಗ್‌, ಮಕ್ತಲ್‌ ಶಾಸಕ ಚಿಟ್ಟಂರಾಮ್‌ ಮೋಹನರೆಡ್ಡಿ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಮಾಜಿ ಸಚಿವರಾದ ಸಿದ್ದರಾಮ ಮೇತ್ರೆ, ಡಾ| ಶರಣಪ್ರಕಾಶ ಪಾಟೀಲ, ಡಾ| ಎ.ಬಿ. ಮಾಲಕರೆಡ್ಡಿ, ವೆಂಕಟರಾವ್‌ ನಾಡಗೌಡ, ಮಾಜಿ ಶಾಸಕರಾದ ಡಾ|
ವೀರಬಸವಂತರಡ್ಡಿ ಮುದ್ನಾಳ, ಗುರು ಪಾಟೀಲ ಶಿರವಾಳ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚೆನ್ನಾರಡ್ಡಿ ಪಾಟೀಲ ತುನ್ನೂರ, ವಾಲ್ಮೀಕಿ ನಾಯಕ, ಜಿಲ್ಲಾ ಪಂಚಾಯತ್‌ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್‌, ಬೆಳಗಾವಿ ಜಿ.ಪಂ ಅಧ್ಯಕ್ಷ ಆಶಾ ಐಹೊಳೆ, ಚಂದ್ರಶೇಖರ ಸಾಹು ಆರಬೋಳ, ಕೇದಾರಲಿಂಗಯ್ಯ
ಹಿರೇಮಠ, ಶರಣಪ್ಪಗೌಡ ಮಲ್ಹಾರ, ಶಿವಶಂಕ್ರಪ್ಪ ಎಸ್‌. ಸಾಹುಕಾರ, ಡಾ|ಶರಣಭೂಪಾಲರೆಡ್ಡಿ ನಾಯ್ಕಲ್‌, ಚೆನ್ನಪ್ಪಗೌಡ ಮೋಸಂಬಿ, ಡಾ| ಸುಭಾಶ್ಚಂದ್ರ ಕೌಲಗಿ, ಡಾ| ವೀರೇಶ ಜಾಕಾ, ಎಸ್‌.ಎನ್‌. ಮಿಂಚನಾಳ, ವೀರಣ್ಣ ಪ್ಯಾರಸಾಬಾದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next