Advertisement

ವಾಹನ ನೋಂದಣಿಗೆ ಮುಗಿಬಿದ್ದ ಜನ

12:28 PM Mar 20, 2020 | Naveen |

ಯಾದಗಿರಿ: ಬಿಎಸ್‌-4 ಮಾದರಿ ದ್ವಿಚಕ್ರ ವಾಹನಗಳ ನೋಂದಣಿಗೆ ಮಾರ್ಚ್‌
31ಕ್ಕೆ ಗಡುವು ನೀಡಲಾಗಿದ್ದು, ಕೊರೊನಾ ಭೀತಿ ಮದ್ಯೆಯೂ ಸಾರಿಗೆ ಇಲಾಖೆಯಲ್ಲಿ ಹೊಸ ವಾಹನಗಳ ನೋಂದಣಿಗೆ ಜನರು ಮುಗಿಬಿದ್ದಿದ್ದಾರೆ.

Advertisement

ಈ ಹಿಂದೆಯೇ ವಾಹನ ಖರೀದಿಸಿ ನೋಂದಾಯಿಸದೆ ಇರುವ ವಾಹನಗಳು ಹಾಗೂ ಹೊಸ ವಾಹನಗಳನ್ನು ಖರೀದಿಸಿ ಇದುವರೆಗೂ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡುತ್ತಿರುವ ಬಿಎಸ್‌-4 ವಾಹನ ಮಾಲೀಕರು ಅವಶ್ಯಕ ಶುಲ್ಕ, ತೆರಿಗೆ ಪಾವತಿ ಮಾಡಿ ಸಂಬಂಧಿಸಿದ ದಾಖಲಾತಿಗಳೊಂದಿಗೆ ತಮ್ಮ ವಾಹನ ಹಾಜರುಪಡಿಸಿ ನೋಂದಾಯಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಏಪ್ರಿಲ್‌ 1ರಿಂದ ದೇಶದಲ್ಲಿ ಭಾರತ್‌ ಸ್ಟೇಜ್‌-4 ಮಾಪನದ ವಾಹನಗಳನ್ನು ಮಾರಾಟ ಅಥವಾ ನೋಂದಣಿ ಮಾಡಿಸುವಂತಿಲ್ಲ. ಏಪ್ರಿಲ್‌ 1ರಿಂದ ಬಿಎಸ್‌-6 ವಾಹನಗಳ ನೋಂದಣಿ ಆರಂಭಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ 2020ರ ಫೆ.1ರಿಂದ ಮಾರ್ಚ್‌ 15ರ ವರೆಗೆ ಜಿಲ್ಲೆಯಲ್ಲಿ 2 ಸಾವಿರ ದ್ವಿಚಕ್ರ ವಾಹನಗಳ ನೋಂದಣಿಯಾಗಿದೆ. 120 ಕಾರು, 334 ಸಾರಿಗೆ ವಾಹನ (ಗೂಡ್ಸ್‌, ಬಸ್‌ ಇತರೆ) ನೋಂದಣಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಭೀತಿಯಿಂದಾಗಿ ಜನರು ಮನೆ ಬಿಟ್ಟು ಹೊರಬಾರದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಮುನ್ನೆಚ್ಚರಿಕೆಯಾಗಿ ಶಾಲೆ, ಕಾಲೇಜು, ಸಾರ್ವಜನಿಕರು ಸೇರುವ ಮಾಲ್‌, ಸಿನಿಮಾ ಮಂದಿರ ಮುಚ್ಚಲು ಆದೇಶಿಸಿದೆ. ಆದರೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಆತಂಕದ ಮಧ್ಯೆಯೂ ಸಿಬ್ಬಂದಿ ಮಾಸ್ಕ್ ಧರಿಸಿ ಎಚ್ಚರದಿಂದ ನಿತ್ಯದ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಸಾರ್ವಜನಿಕರನ್ನು ಹೆಚ್ಚಿನ ಸಮಯ ಕಾಯಲು ಬಿಡದೇ ಅಧಿಕಾರಿಗಳು ತಕ್ಷಣವೇ ವಾಹನಗಳನ್ನು ಪರಿಶೀಲಿಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಜಗತ್ತಿನೆಲ್ಲೆಡೆ ಕೊರೊನಾ ಭೀತಿಯಿರುವ ಹಿನ್ನೆಲೆಯಲ್ಲಿ ಬಿಎಸ್‌4 ವಾಹನಗಳ ನೋಂದಣಿಗೆ ಹೆಚ್ಚಿನ ಕಾಲಾವಕಾಶ ಕೊಡಬೇಕು ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬಿಎಸ್‌ 4 ವಾಹನಗಳನ್ನು ಮಾರ್ಚ್‌ 31ರೊಳಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಬಳಿಕ ಅಂತಹ ವಾಹನಗಳ ನೋಂದಣಿ ಸಾಧ್ಯವಾಗಲ್ಲ. ಏಪ್ರಿಲ್‌ 1ರಿಂದ ಬಿಎಸ್‌ 6
ಮಾದರಿ ವಾಹನಗಳ ನೋಂದಣಿ ಆರಂಭವಾಗಲಿದೆ.
ವಸಂತ ಚವ್ಹಾಣ,
ಪ್ರಾದೇಶಿಕ ಸಾರಿಗೆ ಅಧಿಕಾರಿ

Advertisement

ಮಾರ್ಚ್‌ 31ರೊಳಗೆ ಬಿಎಸ್‌-4 ವಾಹನ ನೋಂದಣಿ ಮಾಡಿಸಿಕೊಳ್ಳಬೇಕು. ಈಗ ಯುಗಾದಿ ಹಬ್ಬವೂ ಹತ್ತಿರದಲ್ಲಿಯೇ ಇದೆ. ಆಗ ಸಾಕಷ್ಟು ಜನರು ಹೊಸ ವಾಹನ ಖರೀದಿಸುತ್ತಾರೆ. ಮೇಲಾಗಿ ಕೊರೊನಾ ಆತಂಕದಿಂದ ಜನರು ಹೊರಗಡೆ ಬರಲು ಹೆದರುವಂತಾಗಿದೆ.ಆದ್ದರಿಂದ ನೋಂದಣಿಗೆ ಹೆಚ್ಚಿನ ಸಮಯಾವಕಾಶ ನೀಡಿದರೆ ಅನುಕೂಲವಾಗುತ್ತದೆ.
 ಸಾಯಬಣ್ಣ,
ವಾಹನ ಮಾಲೀಕ

„ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next