ಯಾದಗಿರಿ: ಕೋವಿಡ್-19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾವಹಿಸಲು ಕರ್ನಾಟಕ ಸರ್ಕಾರ ಕ್ವಾರಂಟೈನ್
ವಾಚ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಕ್ವಾರಂಟೈನ್ ವಾಚ್ ಮೊಬೈಲ್ ಆ್ಯಪ್ ಕುರಿತು ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಬಿಲ್ ಕಲೆಕ್ಟರ್‌ಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 14 ದಿನಗಳ ಕಾಲ ಕಡ್ಡಾಯ ಹೋಮ್ ಕ್ವಾರಂಟೈನ್‌ನಲ್ಲಿರುವವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಕ್ವಾರಂಟೈನ್ ವಾಚ್ ಆ್ಯಪ್ ಸಹಕಾರಿಯಾಗಲಿದೆ. ಕ್ವಾರಂಟೈನ್ ನಲ್ಲಿದ್ದವರು ದಿನಕ್ಕೊಂದು ಬಾರಿ ಆ್ಯಪ್ ಮೂಲಕ ಸೆಲ್ಫಿ ತೆಗೆದು ಕಳುಹಿಸುವುದು ಒಂದು ಪಾತ್ರವಾದರೆ, ಮತ್ತೂಂದು ಪಾತ್ರವನ್ನು ಸರ್ಕಾರಿ ಸಿಬ್ಬಂದಿ ನಿರ್ವಹಿಸಬೇಕಾಗುತ್ತದೆ. ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಸರ್ಕಾರಿ ಸಿಬ್ಬಂದಿ ನಿರಂತರ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಹೋಮ್ ಕ್ವಾರಂಟೈನ್‌ಗಾಗಿ ಶಿಫಾರಸು ಮಾಡಲಾದ ಮತ್ತು ಕೈಗೆ ಮುದ್ರೆ ಹಾಕಿಸಿಕೊಂಡವರ ಮೊಬೈಲ್ ಸಂಖ್ಯೆ ಮೂಲಕ ಇದಕ್ಕೆ ಲಾಗಿನ್ ಆಗಬೇಕಾಗುತ್ತದೆ. ಅವರು ಮನೆಯಿಂದ ತಮ್ಮ ಫೋಟೋ (ಸೆಲ್ಫಿ) ತೆಗೆದು ಕಳುಹಿಸಬೇಕಾಗುತ್ತದೆ. ಫೋಟೋದಲ್ಲಿ ಜಿಪಿಎಸ್ ಆಧಾರಿತ ಲೊಕೇಶನ್ ಮತ್ತು ಸಮಯ ಅಡಕವಾಗಿರುತ್ತದೆ. ಒಂದು ವೇಳೆ ಅವರು ಬೇರೆ ಸ್ಥಳದಿಂದ ಸೆಲ್ಫಿ ತೆಗೆದು ಕಳುಹಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳಲಾಗುತ್ತದೆ. ಸರ್ಕಾರಿ ಸಿಬ್ಬಂದಿ ಭೇಟಿ ನೀಡಿದಾಗ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಹೇಳಿದರು. ಪಿಡಿಒ, ಗ್ರಾಮ ಲೆಕ್ಕಿಗರು ಹಾಗೂ ಬಿಲ್ ಕಲೆಕ್ಟರ್ ಗಳು ಆ್ಯಪ್ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಆ್ಯಪ್‌ನಲ್ಲಿ ಸಿಬ್ಬಂದಿ ತಮ್ಮ ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಿ, ಹೋಮ್ ಕ್ವಾರಂಟೈನ್ ನಲ್ಲಿರುವ ಮತ್ತು ಅವರ ಕುಟುಂಬದ ಸದಸ್ಯರ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು. ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಕೂಡ ಗುರುವಾರ ಶಹಾಪುರ ಮತ್ತು ವಡಗೇರಾ ತಾಲೂಕುಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು
ಹಾಗೂ ಬಿಲ್ ಕಲೆಕ್ಟರ್‌ಗಳಿಗೆ ಕ್ವಾರಂಟೈನ್ ವಾಚ್ ಮೊಬೈಲ್ ಆ್ಯಪ್ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿಗಳು ಕಾರ್ಯಾಗಾರದಲ್ಲಿ ಅಗತ್ಯ ಮಾರ್ಗದರ್ಶನ ನೀಡಿದರು.