ಯಾದಗಿರಿ: ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಚೆಂಡು ಹೂವುಗಳಲ್ಲದೆ ಇತರೆ ಹೂಗಳ ಬೇಡಿಕೆ ಇರುವುದರಿಂದ ಹಬ್ಬಗಳಲ್ಲಿ ಕೊಯ್ಲು ಬರುವಂತೆ ಬೆಳೆಗಳನ್ನು ಬೆಳೆಯುವುದರಿಂದ ರೈತರು ಹೆಚ್ಚು ವರಮಾನ ಪಡೆಯಬಹುದು ಎಂದು ತೋಟಗಾರಿಕ ವಿಸ್ತರಣಾ ಶಿಕ್ಷಣ ಘಟಕ ಮುಂದಾಳು ಡಾ| ರೇವಣಪ್ಪ ಹೇಳಿದರು.
ಜಿಲ್ಲೆಯ ಚಾಮನಾಳ ತಾಂಡದ ರೈತ ಶಾಂತಿಲಾಲ ರಾಠೊಡ ತೋಟದಲ್ಲಿ ಚೆಂಡು ಹೂವು ಬೆಳೆಯ ಬೇಸಾಯ ತಾಂತ್ರಿಕತೆಗಳ ಕುರಿತ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚೆಂಡು ಹೂವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಆದ್ಯತೆ ಮೇರೆಗೆ ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಹಾಪುರ ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ ಮಾತಾನಾಡಿ, ಇಲಾಖೆ ಯೋಜನೆಗಳ ಬಗ್ಗೆ ತಿಳಿಸಿದರು. ತೋಟದ ಮಾಲೀಕ ಶಾಂತಿಲಾಲ ರಾಠೊಡ ಮಾತಾನಾಡಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ಯಾದಗಿರಿಯಲ್ಲಿರುವುದು ನಮ್ಮ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದರು.
ತೋಟಗಾರಿಕೆ ಬೆಳೆಗಳಿಗೆ ಸಂಬಂಧಿ ಸಿದ ಯಾವುದೇ ಸಮಸ್ಯೆಯಿದ್ದರೆ ನಾವು ಇವರನ್ನು ಸಂಪರ್ಕಿಸಬಹುದು ಮತ್ತು ಪರಿಹಾರ ಪಡೆದುಕೊಳ್ಳಬಹುದು. ಆದ್ದರಿಂದ ನಾವು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉತ್ತಮ ಬೆಳೆಯನ್ನು ಬೆಳೆಯೋಣ ಮತ್ತು ಹೆಚ್ಚಿಗೆ ಲಾಭ ಪಡೆಯೋಣ ಎಂದು ಹೇಳಿದರು.
ತಾಂತ್ರಿಕ ಗೋಷ್ಠಿಯಲ್ಲಿ ಡಾ| ರೇವಣಪ್ಪ ಚೆಂಡು ಹೂಗಳ ವಿವಿಧ ತಳಿಗಳು, ಪೂರ್ವ ತಯಾರಿ, ಮಣ್ಣು, ನೀರಿನ ಪ್ರಮಾಣ, ಬೆಳೆಗಳ ವಿವಿಧ ಹಂತಗಳಲ್ಲಿ ನೀಡಬೇಕಾದ ಪೋಷಕಾಂಶಗಳ ಬಗ್ಗೆ ವಿವರಿಸಿದರು.
ಡಾ| ಪ್ರಶಾಂತ ಬೆಳೆಗಳಲ್ಲಿ ಬರುವ ರೋಗ ಮತ್ತು ಕೀಟಗಳ ಬಗ್ಗೆ ಮಾತಾನಾಡಿ, ರೈತರು ಬೆಳೆಗೆ ಬಾರದ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ತಿಳಿಸಿದರು. ಈ ವೇಳೆ ಹಲವಾರು ರೈತರು ಇದ್ದರು.