Advertisement

ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.16.90 ಜಿಗಿತ

04:01 PM May 01, 2019 | Naveen |

ಯಾದಗಿರಿ: 10ನೇ ತರಗತಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ್ದ ಹಲವು ಬಗೆಯ ಸೂತ್ರಗಳು ಸಾಥ್‌ ನೀಡಿದ್ದು, ಸಾಕಷ್ಟು ಪ್ರಯತ್ನಗಳ ಬಳಿಕ 2019ರ ಹತ್ತನೇ ತರಗತಿ ಫಲಿತಾಂಶದಲ್ಲಿ ಯಾದಗಿರಿ ಶೇ.16.90 ಚೇತರಿಸಿಕೊಂಡಿದೆ.

Advertisement

ತೃಪ್ತಿದಾಯಕ ಫಲಿತಾಂಶ: 2018ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 12,776 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಇವರಲ್ಲಿ ಕೇವಲ 4,734 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಯ ಫಲಿತಾಂಶ ಶೇ.37.05 ಲಭಿಸಿ ರಾಜ್ಯದಲ್ಲಿ 34ನೇ ಸ್ಥಾನ ಪಡೆದಿರುವುದು ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕಳಪೆ ಸಾಧನೆಯಾಗಿತ್ತು. ಈ ಬಾರಿ ಶೇ.53.95 ಫಲಿತಾಂಶ ಲಭಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ತೃಪ್ತಿದಾಯಕವಾಗಿದೆ.

ಹಲವು ಸೂತ್ರ ಹುಡುಕಿದ್ದ ಇಲಾಖೆ: ಫಲಿತಾಂಶ ಕುಸಿತ ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಫಲಿತಾಂಶ ಚೇತರಿಕೆಗೆ ಕೈಗೊಳ್ಳಬೇಕಾದ ಕ್ರಮಗಳೇನು? ಯಾವ ರೀತಿಯ ಪ್ರಯತ್ನದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ? ಎನ್ನುವ ಬಗ್ಗೆ ಹಲವು ಹಂತಗಳಲ್ಲಿ ಸಭೆ ನಡೆಸಿ ಹಲವು ಸೂತ್ರ ಹುಡುಕಿದ್ದರು.

ಪ್ರಸಕ್ತ ವರ್ಷ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಪ್ರೌಢಶಾಲೆ ಮುಖ್ಯಗುರುಗಳ ಸಂಘವು ಶಾಲಾ ಹಂತ ಮತ್ತು ಜಿಲ್ಲಾ ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅದರನ್ವಯ ಕಾರ್ಯನಿರ್ವಹಿಸಿದ್ದು, 2018-19ರಲ್ಲಿ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪಾಲಕರಲ್ಲಿ ಜಾಗೃತಿ: ವಿದ್ಯಾರ್ಥಿಗಳನ್ನು 3 ಹಂತಗಳಲ್ಲಿ ವಿಂಗಡಿಸಿ, ಕೊನೆಯ ಹಂತದ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆದು ಪುನರಾವರ್ತನೆ ಮಾಡಿಸುವುದು, ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಿತ್ಯ ಬೆಳಗ್ಗೆ ವಿಷಯವಾರು ಹೆಚ್ಚುವರಿ ತರಗತಿ, ಸಾಯಂಕಾಲ ಗುಂಪು ಚರ್ಚೆ, ತಿಂಗಳಿಗೊಮ್ಮೆ ಮಕ್ಕಳ ಫಲಿತಾಂಶ ಕುರಿತು ಶಿಕ್ಷಕರ ಕಾರ್ಯಾಗಾರ, ಹಾಜರಾತಿ ಕಡಿಮೆಯಾಗದಂತೆ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರಲ್ಲಿ ಜಾಗೃತಿ ಹೀಗೆ ಹಲವು ಪ್ರಯೋಗಗಳನ್ನು ಶಿಕ್ಷಣ ಇಲಾಖೆ ನಡೆಸಿತ್ತು.

Advertisement

ವಿಷಯವಾರು ಪರಿಣಿತ ಶಿಕ್ಷಕರಿಂದ ವಿದ್ಯಾರ್ಥಿಗಳು ಸರಳವಾಗಿ ಉತ್ತೀರ್ಣರಾಗುವಂತೆ ಯೋಜನೆ ರೂಪಿಸಿ, ತಯಾರಿಸಿದ ಪುಸ್ತಕವನ್ನಷ್ಟೇ ಓದಿಕೊಂಡರೆ ಸಾಕು ವಿದ್ಯಾರ್ಥಿಗಳು 40ರಿಂದ 45 ಅಂಕ ಪಡೆಯುವ ಯೋಜನೆಯೊಂದನ್ನು ರೂಪಿಸಿದ್ದರ ಫಲವಾಗಿಯೇ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕಾರಣ ಎನ್ನುತ್ತಿವೆ ಶಿಕ್ಷಣ ಇಲಾಖೆ ಮೂಲಗಳು.

ಫಲಿತಾಂಶ ಪ್ರಮಾಣ ಹಾವು-ಏಣಿಯಾಟ: ಈ ಹಿಂದಿನಿಂದ ಜಿಲ್ಲೆಯ ಫಲಿತಾಂಶ ಮೇಲೆ ನೋಟ ಹರಿಸಿದಾಗ ಫಲಿತಾಂಶವು ಹಾವು-ಏಣಿಯಾಟದಂತೆ ಏರಿಕೆ ಮತ್ತು ಇಳಿಕೆಯಾಗಿರುವುದು ಕಂಡು ಬಂದಿದೆ. 2009-10ರಲ್ಲಿ ಶೇ.56.45 ಫಲಿತಾಂಶ ಲಭಿಸಿ ಜಿಲ್ಲೆಯು ರಾಜ್ಯದಲ್ಲಿ 32ನೇ ಸ್ಥಾನ ಪಡೆದುಕೊಂಡಿತ್ತು, 2010-11ರಲ್ಲಿ ಶೇ.78.89 ಫಲಿತಾಂಶ ಬಂದಿದ್ದು 28ನೇ ಸ್ಥಾನಕ್ಕೇರಿತ್ತು. 2011-12ರಲ್ಲಿ ಪುನಃ ಶೇಕಡಾವಾರು ಫಲಿತಾಂಶ ಶೇ.69.79 ಇಳಿಕೆಯಾಗಿ 33ನೇ ಸ್ಥಾನ ಕಾಯಂಗೊಳಿಸಿಕೊಂಡಿತ್ತು.

ಬಳಿಕ 2012-13ರಲ್ಲಿ ಶೇ.78.48 ಫಲಿತಾಂಶ ಬಂದು 28ನೇ ಸ್ಥಾನಕ್ಕೇರಿತ್ತು, ಇದಾದ ಮೇಲೆ 2013-14ರ ವಾರ್ಷಿಕ ಪರೀಕ್ಷೆ ಫಲಿತಾಂಶ ಶೇ.86.55 ದಾಖಲಾಗಿ ಒಮ್ಮೆ 11 ಸ್ಥಾನಕ್ಕೇರಿ ಅಚ್ಚರಿ ಮೂಡಿಸಿತ್ತು. ಅದರಂತೆ 2014-15ರಲ್ಲಿ ಶೇ.85.06, 2015-16ರಲ್ಲಿ ಶೇ. 69.51 ಮತ್ತು 2016-17ರಲ್ಲಿ ಶೇ.74.84 ಫಲಿತಾಂಶವಾಗಿ 16ನೇ ಸ್ಥಾನಕ್ಕೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next