Advertisement

ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ

04:42 PM Feb 16, 2020 | Naveen |

ಯಾದಗಿರಿ: ಸಂತ ಸೇವಾಲಾಲ್‌ ಮಹಾರಾಜರ ಆಶಯದಂತೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಸಂತ ಸೇವಾಲಾಲ್‌ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅವತಾರ ಪುರುಷ ಸಂತ ಸೇವಾಲಾಲ್‌ ಅವರ ಸೇವಾ ಮನೋಭಾವ, ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು. ಅವರ ತಂದೆ ಭೀಮಾ ನಾಯಕ 52 ತಾಂಡಾಗಳಿಗೆ ಮುಖ್ಯಸ್ಥರಾಗಿದ್ದರು. ತಂದೆಯವರಂತೆಯೇ ಆಳ್ವಿಕೆ ನಡೆಸಿಕೊಂಡು ಹೋಗಬಹುದಿತ್ತು. ಆದರೇ ಅವರು ಸಮಾಜದ ಪರ ಕಳಕಳಿ ಹೊಂದಿದ್ದರು ಎಂದರು.

ಅಪರ ಜಿಲ್ಲಾಕಾರಿ ಪ್ರಕಾಶ್‌ ಜಿ. ರಜಪೂತ ಮಾತನಾಡಿ, ಬಂಜಾರ ಸಮಾಜ ದುಡಿಮೆಯನ್ನು ನಂಬಿ ಜೀವನ ಸಾಗಿಸುತ್ತಿದೆ. ಸಂತ ಸೇವಾಲಾಲ್‌ ತತ್ವ-ಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಿ, ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು. ದೇವದುರ್ಗ ತಾಲೂಕಿನ ಮುಂಡರಗಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಕೀಸನ್‌ ಪವಾರ ಕುರಕುಂಬಳ ಉಪನ್ಯಾಸ ನೀಡಿ, ಪ್ರತಿಯೊಂದು ಸಮಾಜದ ಸುಧಾರಕರ ತತ್ವ-ಸಿದ್ಧಾಂತಗಳನ್ನು ಪ್ರಚಾರ ಮಾಡಲು ಸರ್ಕಾರ ಜಯಂತಿಗಳನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸೇವಾಲಾಲ್‌ ಅವರು 1739ರ ಫೆಬ್ರುವರಿ 15ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರನಗೊಂಡ ಕೊಪ್ಪದಲ್ಲಿ ಜನಿಸಿದರು. ಬಂಜಾರಾ ಜನಾಂಗದ ಕುಲಗುರು ಆದ ಸೇವಾಲಾಲ್‌ ಬಾಲಬ್ರಹ್ಮಚಾರಿಯಾಗಿ ಲೋಕ ಸಂಚಾರ ಮಾಡಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು. ಬುಡಕಟ್ಟು ಜನರು ಶಿಕ್ಷಣ ಪಡೆಯಬೇಕು. ಪ್ರತಿಯೊಬ್ಬರಲ್ಲಿ ಆಲಿಸುವ, ಒಳಿತು ಮತ್ತು ಕೆಟ್ಟದ್ದನ್ನು ವಿಮರ್ಶಿಸಿ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಮನೋಭಾವ ಹೊಂದಬೇಕೆಂಬ ಮಾರ್ಗದರ್ಶನ ನೀಡಿದ್ದಾರೆ ಎಂದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಋಷಿಕೇಶ್‌ ಭಗವಾನ್‌ ಸೋನಾವಣೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾಬಾಯಿ ಎಸ್‌. ರಾಠೊಡ, ನಗರಸಭೆ ಸದಸ್ಯೆ ಲಕ್ಷ್ಮೀ ಆರ್‌. ರಾಠೊಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ನಗರದಲ್ಲಿ ಕಲಾ ತಂಡಗಳೊಂದಿಗೆ ಸಂತ ಸೇವಾಲಾಲ್‌ ಭಾವಚಿತ್ರದ ಅದ್ಧೂರಿ ಮೆರವಣಿಗೆ
ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next