ಯಾದಗಿರಿ: ಕೋವಿಡ್ ಅಟ್ಟಹಾಸದ ನಡುವೆಯೂ ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆಗೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯ ಈಗಾಗಲೇ ಮುಕ್ತಾಯವಾಗಿದೆ.
ಜಿಲ್ಲೆಯಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಿದ್ದು, ಯಾದಗಿರಿಯಲ್ಲಿ 4, ಸುರಪುರ ಮತ್ತು ಶಹಾಪುರದಲ್ಲಿ ತಲಾ 2 ಹಾಗೂ ಗುರುಮಠಕಲ್, ಹುಣಸಗಿ, ಕೆಂಭಾವಿ, ಭೀಮರಾಯನಗುಡಿ ಹಾಗೂ ರಂಗಪೇಟದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಈ ಹಿಂದೆ ಪ್ರತಿ ಕೋಣೆಯಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಕೋವಿಡ್ ಸೋಂಕು ಇರುವ ಹಿನ್ನೆಲೆಯಲ್ಲಿ ಈ ಬಾರಿ ಒಂದು ಕೋಣೆಯಲ್ಲಿ 18 ಜನರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಮುಂಜಾಗ್ರತೆ ವಹಿಸಿ ವ್ಯವಸ್ಥೆ ಮಾಡಿವೆ.
ಸಾಮಾಜಿಕ ಅಂತರ ಕಾಪಾಡುವುದರಿಂದ 89 ಕೋಣೆಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುತ್ತಿದ್ದು, 297 ಕೊಠಡಿಗಳಲ್ಲಿ ಜಿಲ್ಲೆಯ 5908 ಪರೀಕ್ಷಾರ್ಥಿಗಳು ಸೇರಿ ಇತರೆ ಜಿಲ್ಲೆಯ 548 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಸಮಯಕ್ಕೆ ಮೊದಲೇ ವಿದ್ಯಾರ್ಥಿಗಳು ಹಾಜರಿರಬೇಕಿದ್ದು, ಇನ್ನೂ ಗ್ರಾಮೀಣ ಭಾಗದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಪ್ರತಿಯೊಬ್ಬರಿಗೆ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಇನ್ನು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಸ್ಯಾನಿಟೈಸರ್‌ನಿಂದ ಕೈಗಳನ್ನು ಶುಚಿಗೊಳಿಸಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತೆ ಇಲಾಖೆ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸಜ್ಜಾಗಿದೆ.
ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಲ್ಲಿ ಜೂ. 18ರಂದು ದ್ವಿತೀಯ ಪಿಯು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬರಲು ಸಾರಿಗೆ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕಿದೆ. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಸ್ಕ್ರಿನಿಂಗ್ ಮಾಡಲಾಗುವುದು.
ಚಂದ್ರಕಾಂತ ಜೆ. ಹಿಳ್ಳಿ,
ಉಪನಿರ್ದೇಶಕ ಪದವಿ
ಪೂರ್ವ ಕಾಲೇಜು ಶಿಕ್ಷಣ ಇಲಾಖೆ